More

    ವೀರಭದ್ರಸ್ವಾಮಿ ಶಿವನ ಮಾನಸ ಪುತ್ರ

    ಸೊರಬ: ಶಿವನ ಮಾನಸಪುತ್ರನೆಂದು ಕರೆಯಲ್ಪಡುವ ಶ್ರೀ ವೀರಭದ್ರಸ್ವಾಮಿಗೆ ದೇಶಾದ್ಯಂತ ಕೋಟ್ಯಂತರ ಭಕ್ತರಿದ್ದು ಮನೆ ದೇವರಾಗಿ ಆರಾಧನೆ ಮಾಡುತ್ತಿದ್ದಾರೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

    ತಾಲೂಕಿನ ಜಡೆ ಹೋಬಳಿಯ ಆಲಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
    ಭಕ್ತರ ಇಷ್ಟಾರ್ಥವನ್ನು ಸಿದ್ಧಿಸುವ ಶಕ್ತಿಯನ್ನು ಶ್ರೀ ವೀರಭದ್ರ ಸ್ವಾಮಿ ಹೊಂದಿದ್ದಾರೆ. ಗೋತ್ರಪುರುಷನಾಗಿ ಸ್ವಾಮಿಯು ಶೋಭಿಸಿದ್ದಾರೆ. ವೀರಭದ್ರನ ವೀರಗುಣಗಳನ್ನು ಪ್ರತಿಬಿಂಬಿಸುವ ಆರಾಧನೆಯು ಕಟ್ಟುನಿಟ್ಟಿನ ಆಚರಣೆಗಳು ಬಹು ಪ್ರಾಚೀನವಾದವು. ವೀರಭದ್ರ ಸ್ವಾಮಿಯನ್ನು ವೀರಶೈವ ಸಮಾಜದವರು ಮಾತ್ರವಲ್ಲದೆ ಎಲ್ಲ ಸಮಾಜದವರು ಆರಾಧನೆ ಮತ್ತು ಮನೆ ದೇವರಾಗಿ ಪೂಜಿಸುತ್ತಿದ್ದಾರೆ. ಇಂದಿಗೂ ಸಹ ವೀರಭದ್ರ ಸ್ವಾಮಿಯಲ್ಲಿ ಗಾಢಭಕ್ತಿ ಮತ್ತು ಅಚಲ ವಿಶ್ವಾಸ ನಡೆದುಕೊಂಡು ಬಂದಿದೆ ಎಂದರು.
    ಜಡೆ ಹಿರೇಮಠ ಹಾಗೂ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮಾತನಾಡಿ, ವೀರ ಎಂಬುದು ಒಂದು ಗುಣವಾಚಕ ಶಬ್ದವಾಗಿದ್ದು, ಜಗತ್ತಿನ ಯಾವ ದೇವರಿಗೂ ಇಲ್ಲದ ಗುಣವಾಚಕ ಶಬ್ದ ಇರುವುದು ವೀರಭದ್ರ ದೇವರಿಗೆ ಮಾತ್ರವಾಗಿದೆ. ಇಂದ್ರಿಯಗಳನ್ನು ನಿಗ್ರಹಿಸುತ್ತ, ಆತ್ಮ ಸ್ವರೂಪಿ ಜ್ಞಾನದಿಂದ ಪರಮಾತ್ಮನನ್ನು ಅರಿಯುತ್ತ, ಅಮೃತ ತತ್ತ್ವವನ್ನು ತಿಳಿದುಕೊಳ್ಳಲು ಬಯಸುವರೋ ಅವರನ್ನು ವೀರ, ಧೀರ ಎಂದು ಕರೆಯಬೇಕು ಎನ್ನುವುದು ಭಗವದ್ಗೀತೆಯ ಉಪದೇಶವಾಗಿದೆ ಎಂದರು.
    ಶ್ರೀ ವೀರಭದ್ರಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಗ್ರಾಮದಲ್ಲಿ ಶ್ರೀ ವೀರಭದ್ರ ದೇವರ ಭಾವಚಿತ್ರದ ಮೆರವಣಿಯನ್ನು ವಿವಿಧ ವಾದ್ಯ ಘೋಷಗಳೊಂದಿಗೆ ವಿಜೃಂಭಣೆಯಿಂದ ಮಾಡಲಾಯಿತು. ತಲಗಡ್ಡೆ ಶಿವಕುಮಾರ ಶಾಸ್ತ್ರಿ ಹಾಗೂ ಸಂಗಡಿಗರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
    ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಹಿರೇಮಠದ ಶ್ರೀ ರುದ್ರ ದೇವರು, ಪ್ರಮುಖರಾದ ವೆಂಕಟೇಶ ಕಾಮತ್, ಡಾ. ವಿಶ್ವನಾಥ ನಾಡಿಗೇರ್, ಸದಾನಂದ ಗೌಡ ಬಿಳಗಲಿ, ಬಂಗಾರಪ್ಪ ಗೌಡ ಕುಪ್ಪೆ, ವಿಜಯ ಗೌಡ, ವೀರಪ್ಪ ಗೌಡ ಪಾಟೀಲ್ ಆಲಹಳ್ಳಿ, ಮಂಜಣ್ಣ ಅರ್ಕಸಾಲಿ, ವೀರೇಂದ್ರ ಪಾಟೀಲ್ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts