ಶಾರದಾಂಬೆಯ ಮಡಿಲಲ್ಲಿ ಜಾತಿಯಿಲ್ಲ: ವೀರ ಮದಕರಿ ವಿವಾದಕ್ಕೆ ಜಗ್ಗೇಶ್​ ಟ್ವೀಟ್​ ತಿವಿತ

ಬೆಂಗಳೂರು: ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಸಿನಿಮಾ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್​ವುಡ್​ನ ಪ್ರಖ್ಯಾತ ನಟರಾದ ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಏರ್ಪಟ್ಟಿರುವ ಪ್ರತಿಷ್ಠೆಯ ಕಾದಾಟ ಜಾತಿಯ ಆಯಾಮ ಪಡೆದುಕೊಂಡಿದೆ.

ಈ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಹಿರಿಯ ನಟ ಜಗ್ಗೇಶ್​ ಶಾರದಾಂಬೆಯ ಮಡಿಲಲ್ಲಿ ಜಾತಿ ಎಂಬುದು ಇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೀರ ಮದಕರಿ ಚಿತ್ರ ನಿರ್ಮಾಣದ ವಿಚಾರವಾಗಿ ಸುದೀಪ್​ ಮತ್ತು ದರ್ಶನ್​ ನಡುವೆ ನಡೆಯುತ್ತಿದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಮಾತನಾಡಿದ್ದ ಸ್ವಾಮೀಜಿಯೊಬ್ಬರು ವಾಲ್ಮೀಕಿ ಜನಾಂಗದ ನಟನೇ ಈ ಚಿತ್ರಕ್ಕೆ ನಾಯಕನಾಗಬೇಕು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಈ ನಡುವೆ, ಸಿನಿಮಾವನ್ನು ಯಾರು ಮಾಡಿದರೇನು? ಕಲೆಗೆ ಏಕೆ ಜಾತಿಯ ಬಣ್ಣ ಎಂಬ ವಾದ ವಿವಾದಗಳು ಕೇಳಿ ಬಂದಿದ್ದವು.

ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡಿರುವ ಈ ಅನಾರೋಗ್ಯಕರ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿರಿಯ ನಟ ಜಗ್ಗೇಶ್​ ತಮ್ಮದೇ ದಾಟಿಯಲ್ಲಿ ಟ್ವಿಟರ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ!
ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೆ ಜಾತಿ ಇಲ್ಲದೆ, ಒಂದೆ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು. ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ಬಿತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ!
ವಿನಾಶಕಾಲಕ್ಕೆ ವಿಪರೀತಬುದ್ಧಿ!

ಎಚ್ಚರವಾಗಿರಿ ಕಲಾಬಂಧುಗಳೆ… ಎನ್ನುವ ಮೂಲಕ ಕಲಾರಂಗದೊಳಗೆ ನುಸುಳಿರುವ ಜಾತಿಯ ವೈಷಮ್ಯವನ್ನು ಅವರು ಕಟು ಟೀಕೆಗೊಳಪಡಿಸಿದ್ದಾರೆ, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಏನು ಹೇಳಿದ್ದರು ಸ್ವಾಮೀಜಿ?

ವೀರ ಮದಕರಿ ಚಿತ್ರ ನಿರ್ಮಾಣ ಕುರಿತು ಮಾತನಾಡಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ನಾಯಕ ಸಮುದಾಯದ ಸುದೀಪ್‌ ಅವರೇ ‘ವೀರ ಮದಕರಿ’ ಸಿನಿಮಾ ಮಾಡಬೇಕು. ದರ್ಶನ್‌ ಸೇರಿದಂತೆ ಬೇರೆ ಯಾರಾದರೂ ಮಾಡಿದರೆ, ಆ ಸಿನಿಮಾವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

 

ಮದಕರಿಯಾದ ದರ್ಶನ್

ಮದಕರಿ ನಾಯಕನಾಗಿ ಸುದೀಪ್?

ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ