ಹುಬ್ಬಳ್ಳಿ: ಈ ಮೊದಲು ಸೇನೆಗೆ ಅಗತ್ಯ ಸಲಕರಣೆಗಳು ಇಲ್ಲದಿರುವುದು, ಅಂದಿನ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಕೆಲ ಯುದ್ಧಗಳಲ್ಲಿ ಭಾರತ ಸೋಲಬೇಕಾಯಿತು. ಇದೀಗ ದೇಶದ ಸ್ಥಿತಿ ಬದಲಾಗಿದೆ. ಗಡಿಯಲ್ಲಿ ಶತ್ರುಗಳ ಕಣ್ಣಿನಲ್ಲಿ ಕಣ್ಣಿಟ್ಟು ಎದುರಿಸುವ ಶಕ್ತಿ ಗಳಿಸಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಗುಜರಾತ್ ಭವನದಲ್ಲಿ ಮಜೇಥಿಯಾ ಫೌಂಡೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸೇವೆಯಲ್ಲಿ ಕಾರ್ಯನಿರತ 31 ವೀರ ಯೋಧರ ಕುಟುಂಬಸ್ಥರಿಗೆ ಗೌರವ ಸನ್ಮಾನ ನೀಡಿ ಅವರು ಮಾತನಾಡಿದರು.
ಹಿಂದಿ ಚೀನಿ ಭಾಯಿಭಾಯಿ ಎನ್ನುತ್ತ ಕನಿಷ್ಠ ಸೇನಾ ಸಿದ್ಧತೆಯನ್ನೂ ಅಂದಿನ ಸರ್ಕಾರ ಮಾಡಿಕೊಂಡಿರಲಿಲ್ಲ. ಈಗ ಭಾರತ ಸರ್ಕಾರ ಡಿಫೆನ್ಸ್ ಗೆ ಅಗತ್ಯ ಸಲಕರಣೆಗಳನ್ನು ನೀಡಿದೆ. ಮುಖ್ಯವಾಗಿ ಗಡಿಯಲ್ಲಿ ತೊಂದರೆ ಬಂದರೆ ನಿರ್ಧಾರ ಕೈಗೊಳ್ಳಲು ಸ್ವಾತಂತ್ರ್ಯ ನೀಡಿದೆ. ಇದರ ಪರಿಣಾಮವಾಗಿ ಸೇನೆ ತನ್ನ ಶಕ್ತಿ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿದೆ. ಜತೆಗೆ ಸೇನಾ ಸಲಕರಣೆಗಳನ್ನು ಉತ್ಪಾದನೆ ಮಾಡುವ ಜತೆಗೆ ರಫ್ತು ಕೂಡ ಮಾಡುತ್ತಿದೆ ಎಂದರು.
ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ, ಚೀಫ್ ಆಫ್ ಡಿಫೆನ್ಸ್ ಸ್ಟಾಪ್ ನೇಮಕ ಮುಂತಾದ ಸುಧಾರಣೆ ತರಲಾಗಿದೆ ಎಂದರು.
ಕಾಶ್ಮೀರಕ್ಕೆ ಇದೀಗ ಸುಲಭವಾಗಿ ನಾವೆಲ್ಲ ಹೋಗಿ ಬರಬಹುದು. ಅಂತಹ ವಾತಾವರಣ ನಿರ್ಮಾಣವಾಗಿದೆ. ಇದಕ್ಕಾಗಿ ತ್ಯಾಗ ಮಾಡಿದ ವೀರಯೋಧರಿಗೆ ನಾವು ಬೆಲೆ ಕೊಡಬೇಕು. ಅದಕ್ಕಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ ಮಜೇಥಿಯಾ ಕಾರ್ಯ ಶ್ಲಾಘನೀಯ ಎಂದರು.
ಮಿಲಿಟರಿ ಸೋಲಲ್ಲ:
ಈ ಹಿಂದೆ ಭಾರತವು ಯುದ್ಧಗಳಲ್ಲಿ ಕಂಡಿರುವ ಸೋಲು ಮಿಲಿಟರಿ ಸೋಲಲ್ಲ, ಬದಲಾಗಿ ಅದು ರಾಜನೀತಿ, ಪಾಲಿಸಿಗಳ ಸೋಲು ಎಂದು ನಿವೃತ್ತ ಏರ್ ಕಮಾಂಡರ್ ಸಿ.ಸಿ. ಹವಾಲ್ದಾರ್ ವ್ಯಾಖ್ಯಾನಿಸಿದರು.
ದೇಶಪ್ರೇಮದ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿ ಹೇಳಬೇಕು, ಸೈನಿಕರು ಗಡಿಯಲ್ಲಿ ಕೊಟ್ಟ ಜವಾಬ್ದಾರಿಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತಾರೆ. ಆದರೆ, ದೇಶದ ಜನರು ಕೂಡ ಸೈನಿಕರ ತ್ಯಾಗ ಬಲಿದಾನ ನೆನಪು ಮಾಡಿಕೊಂಡು ಗೌರವ ಸಲ್ಲಿಸಬೇಕು. ನೀವು ದೇಶವನ್ನು ಕಾಯುತ್ತೀರಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸೇನಾನಿಗಳಿಗೆ ಕೊಡಬೇಕು ಎಂದರು.
ಹಿಂದೊಮ್ಮೆ ಭಾರತ ಸರ್ಕಾರವು ಅಧಿಕಾರಿಗಳನ್ನು ಸೇನಾ ಜನಗಣತಿಗೆ ಕಳಿಸಿ ಮುಖಭಂಗಕ್ಕೆ ಒಳಗಾಗಿತ್ತು. ಸೈನಿಕರು ಭಾರತೀಯ ಸೇನೆಯೇ ನಮ್ಮ ಧರ್ಮ, ಜಾತಿ ಎಂದು ಹೇಳುವ ಮೂಲಕ ದಿಟ್ಟ ಉತ್ತರ ನೀಡಿದ್ದರು. ಇತ್ತೀಚೆಗೆ ಕೆಲವರು ವಿಭಜನೆಯ ಬಗ್ಗೆ ಮಾತನಾಡುತ್ತಿರುವುದು ಬೇಸರದ ಸಂಗತಿ. ಇಂತಹ ಮಾನಸಿಕತೆ ಇರಬಾರದು ಎಂದು ಹವಾಲ್ದಾರ್ ಹೇಳಿದರು.
ಸೈನಿಕರಿಗಾಗಿಯೂ ಪ್ರಾರ್ಥಿಸಿ:
ಕಾರ್ಗಿಲ್ ವೀರ ಯೋಧ ಮತ್ತು ಸೇನಾ ಪದಕ ಪುರಸ್ಕೃತ ಕ್ಯಾ. ನವೀನ ನಾಗಪ್ಪ ಮಾತನಾಡಿ, ಸೈನಿಕರ ಕುಟುಂಬದವರನ್ನು ಎಲ್ಲರೂ ಮರೆಯುತ್ತಾರೆ. ಆದರೆ, ಮಜೇಥಿಯಾ ಫೌಂಡೇಷನ್ ನವರು ಅವರನ್ನು ನೆನಪಿಸಿಕೊಂಡಿದ್ದಾರೆ. ಇದು ಮೆಚ್ಚುವಂಥದ್ದು. ದೇಶವಾಸಿಗಳು ನಿತ್ಯ ದೇವರನ್ನು ಪೂಜಿಸುವಾಗ ಸೈನಿಕರಿಗಾಗಿಯೂ ಒಂದಿಷ್ಟು ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿದರು.
ಕಾರ್ಗಿಲ್ ಯುದ್ಧ ಸಂದರ್ಭದ ಸ್ಥಿತಿಗತಿ ಹಾಗೂ ತಾವು ಹೇಗೆಲ್ಲ ಹೋರಾಟ ಮಾಡಿದೇವು ಎಂಬುದನ್ನು ಸ್ಮರಿಸಿಕೊಂಡರು.
ರಮಿಲಾ ಮಜೇಥಿಯಾ, ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಜೇಥಿಯಾ, ಕಶ್ಯಪ್ ಮಜೇಥಿಯಾ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಸುನಿಲ ಕುಕ್ಕನೂರ, ಪ್ರಹ್ಲಾದರಾವ್, ಟ್ರಸ್ಟಿಗಳು ಇದ್ದರು.
ಟ್ರಸ್ಟಿ ಡಾ. ರಮೇಶ ಬಾಬು ಸ್ವಾಗತಿಸಿದರು. ಡಾ. ವಿ.ಬಿ. ನಿಟಾಲಿ ಪರಿಚಯಿಸಿದರು.