ವೀಣಾ ಮಹೋತ್ಸವ ಸಪ್ತಾಹ

ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಡಿ. 8ರಿಂದ 15ನೇ ವರ್ಷದ ಮಾರ್ಗಶಿರ ರಾಷ್ಟ್ರೀಯ ವೀಣಾ ಮಹೋತ್ಸವ ಸಪ್ತಾಹ ಏರ್ಪಡಿಸಲಾಗಿದೆ ಎಂದು ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್​ನ ಟ್ರಸ್ಟಿ ಶೃಂಗೇರಿ ಎಚ್.ಎಸ್.ನಾಗರಾಜ್ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಏಳು ದಿನಗಳ ಕಾರ್ಯಕ್ರಮ ‘ವೀಣಾ ನಾದ ಯಜ್ಞ’ ಶೀರ್ಷಿಕೆಯಡಿ ನಡೆಯಲಿದೆ. ಡಿ. 15ರಂದು ಕರ್ನಾಟಕ ಸಂಗೀತ ಪರಮಹಂಸ ಸದ್ಗುರು ಶ್ರೀ ಮುತ್ತುಸ್ವಾಮಿ ದೀಕ್ಷಿತರ ಆರಾಧನೋತ್ಸವ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ. 8ರಂದು ಸಂಜೆ 5.30ಕ್ಕೆ ಭಾರತೀಯ ವಿದ್ಯಾಭವನ ಉಪಾಧ್ಯಕ್ಷ ಎನ್.ದಿವಾಕರ್ ರಾವ್ ಉದ್ಘಾಟಿಸುವರು. ಸೌರಭ ಅಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಬಿ.ದೊರೆಸ್ವಾಮಿ ಅಯ್ಯಂಗಾರ್ ಫೌಂಡೇಷನ್ ಅಧ್ಯಕ್ಷ ಎಂ.ಭರದ್ವಾಜ್, ಎಂ.ಆರ್.ಶ್ರೀನಿವಾಸ್ ಅಯ್ಯಂಗಾರ್ ಪಾಳ್ಗೊಳ್ಳುವರು ಎಂದರು.

ಪ್ರತಿ ನಿತ್ಯ ಸಂಜೆ 6.30ಕ್ಕೆ ವೀಣಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಡಿ. 8ರಂದು ಚೆನ್ನೈ ಆರ್.ಎಸ್.ಜಯಲಕ್ಷ್ಮೀ, ಡಿ. 9ರಂದು ಬೆಂಗಳೂರಿನ ಎಂ.ಆರ್.ಮಂಜುಳಾ, ಡಿ. 10ರಂದು ಚೆನ್ನೈ ಸುಜನಾ ಒಡ್ಡಲಮನಿ, ಡಿ. 11ರಂದು ಬಿ.ಕೆ.ವಿಜಯಲಕ್ಷ್ಮೀ ರಾಘು ಹಾಗೂ ಶುಭಾ, ಡಿ. 12ರಂದು ನಿಟ್ಟೂರು ಶ್ರೀಕಾಂತ್, ಡಿ. 13ರಂದು ಮೈಸೂರು ಎಂ.ಜಿ.ವೀಣಾ, ಡಿ. 14ರಂದು ಮೈಸೂರಿನ ಆರ್.ಕೆ.ಪದ್ಮನಾಭ ಅವರು ವೀಣಾ ವಾದನ ನಡೆಸಿಕೊಡುವರು ಎಂದು ತಿಳಿಸಿದರು.

ಡಿ. 9ರಿಂದ 15ರವರೆಗೆ ಬಸವೇಶ್ವರ ನಗರದ ಜೈನ್ ದೇವಸ್ಥಾನದ ಬಳಿ ಶ್ರೀ ಗುರುಗುಹ ಸಂಗೀತ ಭವನದಲ್ಲಿ ಬೆಳಗ್ಗೆ 6.30ಕ್ಕೆ ಧ್ವನಿವರ್ಧಕ ರಹಿತ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ. ಡಿ. 10ರ ಬೆಳಗ್ಗೆ 9ಕ್ಕೆ ಸಂಗೀತ ಭವನದಲ್ಲಿ ಹಿರೇಮಗಳೂರು ಕಣ್ಣನ್ ಅವರಿಂದ ‘ಕನ್ನಡ ಸಾಹಿತ್ಯದಲ್ಲಿ ವೀಣಾ’ ವಿಷಯ ಕುರಿತು ಉಪನ್ಯಾಸ ಇರಲಿದೆ ಎಂದರು.

ಡಿ. 14ರ ಸಂಜೆ 5.30ಕ್ಕೆ ಸಪ್ತಾಹದ ಸಮಾರೋಪದಲ್ಲಿ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್, ಡಿವೈಎಸ್​ಪಿ ಪಿ.ಎಸ್.ಸುದರ್ಶನ್ ಪಾಲ್ಗೊಳ್ಳುವರು ಎಂದು ಹೇಳಿದರು. ಧನಲಕ್ಷ್ಮೀ, ಸಹನಾ ರಮೇಶ್, ಅರ್ಪಿತ್ ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಾಳೆ

ಶಿವಮೊಗ್ಗ: ಸಪ್ತಸ್ವರ ಸಂಗೀತ ಸಭಾದಿಂದ ಕುವೆಂಪು ರಂಗಮಂದಿರದಲ್ಲಿ ಡಿ.9ರ ಸಂಜೆ 6ಕ್ಕೆ ಎ.ಹರಗೋಪಾಲಭಟ್ ಸ್ಮರಣಾರ್ಥ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಗೀತ ಸಭಾ ಉಪಾಧ್ಯಕ್ಷ ಆರ್.ಅಚ್ಚುತ್​ರಾವ್ ಹೇಳಿದರು.

ಪ್ರತಿ ವರ್ಷ ಸಪ್ತಸ್ವರ ಸಂಗೀತ ಸಭಾದಿಂದ 4 ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈವರೆಗೆ ಶಿವಮೊಗ್ಗದಲ್ಲಿ 76 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದ್ಮಭೂಷಣ ಡಾ. ಬಸವರಾಜ ರಾಜಗುರು ಶಿಷ್ಯೆ, ಧಾರವಾಡ ಜಿಲ್ಲೆಯ ಪೂರ್ಣಿಮ ಭಟ್ ಕುಲಕರ್ಣಿ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡುವರು. ತಬಲಾದಲ್ಲಿ ಪಂಡಿತ್ ಜಗದೀಶ್ ಕುರ್ತಕೋಟೆ ಹಾಗೂ ಹಾಮೋನಿಯಂನಲ್ಲಿ ರೇಖಾ ಅರುಣ್ ಹಂಪಿಹೊಳಿ ಸಾಥ್ ನೀಡುವರು ಎಂದರು.

ಪೂರ್ಣಿಮಾ ಕುಲಕರ್ಣಿ 12ನೇ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಆರಂಭಿಸಿ ಬಸವರಾಜು ರಾಜಗುರು ಅವರಲ್ಲಿ ಕಲಿಕೆ ಮುಂದುವರಿಸಿದರು. ಪೂನಾ, ಮುಂಬೈನಲ್ಲಿಯೂ ಹೆಚ್ಚಿನ ಅಭ್ಯಾಸ ನಡೆಸಿದ ಪೂರ್ಣಿಮಾ ಕುಲಕರ್ಣಿ ಸಂಗೀತ ಸಾಧನೆಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಸಂಗೀತದಲ್ಲಿ ‘ಎ’ ಗ್ರೇಡ್ ಗಾಯಕಿಯಾಗಿದ್ದಾರೆ ಎಂದು ಹೇಳಿದರು.

ಸಪ್ತಸ್ವರ ಸಂಗೀತ ಸಭಾ ಅಧ್ಯಕ್ಷ ಅರುಣ್ ಹಂಪಿಹೊಳಿ, ಕಾರ್ಯದರ್ಶಿ ಕೆ.ಜೆ.ಕುಮಾರಶಾಸ್ತ್ರಿ, ಸಹ ಕಾರ್ಯದರ್ಶಿ ಎನ್.ಎಚ್.ದೇವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.