ಟಿಪ್ಪು ಬಹುಮುಖಿ ಸಂಸ್ಕೃತಿಯ ಆರಾಧಕ

ಬಾಗಲಕೋಟೆ: ಟಿಪು್ಪ ಸುಲ್ತಾನ್ ಬಹುಮುಖಿ ಸಂಸ್ಕೃತಿ ಆರಾಧಕನಾಗಿದ್ದ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟಿಪ್ಪು ಹಿಂದು ಧರ್ಮದ ಸಹಿಷ್ಣುತೆ ನೆಲೆಗಟ್ಟಿನಲ್ಲಿ ನೆಲೆಸಿ ತನ್ನ ಆಡಳಿತದಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ್ದ. ಅಖಂಡ ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅಂತಹ ಮಹಾನ್ ವ್ಯಕ್ತಿಯನ್ನು ಒಂದು ಸಮುದಾಯಕ್ಕೆ ಸೇರಿಸಿ ಮಾತನಾಡುವವರು ಸಂಕುಚಿತ ಮನಸ್ಥಿತಿ ಉಳ್ಳವರು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಶೂನ್ಯಪೀಠ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲಿಕಾರ ಉಪ ನ್ಯಾಸ ನೀಡಿ, ಟಿಪ್ಪು ಎಂದಿಗೂ ದಾರಿ ತಪ್ಪಿರಲಿಲ್ಲ. ಇಂತಹ ಮಹಾನ್ ವ್ಯಕ್ತಿ ಜನ್ಮ ದಿನಾಚರಣೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಇಸ್ಲಾಂ ಧರ್ಮದಲ್ಲಿ ಮೆರವಣಿಗೆ ಮಾಡಲು ಅವಕಾಶವಿಲ್ಲ. ಅದು ರೀತಿ, ನೀತಿ ಕೂಡ ಅಲ್ಲ. ಟಿಪ್ಪು ಜಯಂತಿ ದಿನ ಮಾದರಿ ಕಾರ್ಯ ನಡೆಯಬೇಕು. ಬಡವರಿಗೆ, ಹೆಣ್ಣು ಮಕ್ಕಳಿಗೆ ಸಹಾಯ ಹಸ್ತ ಚಾಚಬೇಕು. ಚಿಂತನ, ಮಂಥನ ಆಗಬೇಕು ಎಂದರು.

ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುಂಚೆ ಡಿಸಿ ಶಾಂತಾರಾಮ ಕೆ.ಜಿ., ಎಸ್ಪಿ ಸಿ.ಬಿ. ರಿಷ್ಯಂತ ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜದ ಮುಖಂಡರಾದ ಎ.ಎ. ದಾಂಡಿಯಾ, ಎಂ.ಎಂ. ನಬಿವಾಲೆ, ಸಲೀಂ ಮೋಮಿನ್, ಕುತುಬುದ್ದಿನ್ ಖಾಜಿ ಇತರರಿದ್ದರು.