ಸಿಬ್ಬಂದಿ ಅಮಾನತಿಗೆ ಸೂಚನೆ

ಬಾಗಲಕೋಟೆ: ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಪ.ಜಾತಿ ಮತ್ತು ಪ.ಪಂಗಡದ ಬಾಲಕರ ವಸತಿ ನಿಲಯಕ್ಕೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಮಧ್ಯಾಹ್ನ ವಸತಿ ನಿಲಯಕ್ಕೆ ಆಗಮಿಸಿದ ವೀಣಾ ಕಾಶಪ್ಪನವರ ವಸತಿ ನಿಲಯ ಅವ್ಯವಸ್ಥೆ ಕಂಡು ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು. ನಿಲಯ ಮೇಲ್ವಿಚಾರಕ ಹಾಗೂ ಮುಖ್ಯ ಅಡುಗೆಯವರನ್ನು ಅಮಾನತುಗೊಳಿಸುವಂತೆ ಇಲಾಖೆ ಮೇಲಧಿಕಾರಿಗೆ ಸೂಚಿಸುತ್ತೇನೆ. ತಾಲೂಕು ಅಧಿಕಾರಿಗೆ ನೊಟೀಸ್ ನೀಡುವುದಾಗಿ ಹೇಳಿದರು.

ವಸತಿ ನಿಲಯದ ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಊಟದ ಕೊಠಡಿ, ಶೌಚಗೃಹ, ಸ್ನಾನಗೃಹ ಸೇರಿ ಪ್ರತಿಯೊಂದು ಸ್ಥಳ ವೀಕ್ಷಿಸಿದರು. ಬೀಳುತ್ತಿರುವ ಛಾವಣಿ, ಹುಳು ತುಂಬಿದ ಆಹಾರ, ಗುಣಮಟ್ಟವಿಲ್ಲದ ಧಾನ್ಯ, ಮೊಟ್ಟೆ, ಕಾಟಾಚಾರಕ್ಕೆ ಮಾಡಿದ ಅಡುಗೆ ಹೀಗೆ ವಸತಿ ನಿಲಯದ ಕರಾಳ ಮುಖ ಜಿಪಂ ಅಧ್ಯಕ್ಷರಿಗೆ ದರ್ಶನವಾಯಿತು.

ಅವ್ಯವಸ್ಥೆ ಕುರಿತು ನಿಲಯದ ವಿದ್ಯಾರ್ಥಿಗಳು ವಾಸ್ಥವ ಸ್ಥಿತಿ ಎಳೆಎಳೆಯಾಗಿ ಬಿಡಿಸಿಟ್ಟರು. ಸರಿಯಾಗಿ ಅಡುಗೆ ಮಾಡುವುದಿಲ್ಲ. ಶುದ್ಧ ಕುಡಿವ ನೀರಿಲ್ಲ. ಕೇಳಿದರೆ ಎಲ್ಲರನ್ನು ಗದರಿಸುತ್ತಾರೆ. ಹೀಗಾದರೆ ದೂರದ ಸ್ಥಳದಿಂದ ಮನೆ ಬಿಟ್ಟು ಬಂದ ನಮ್ಮ ಪರಿಸ್ಥಿತಿ ಏನಾಗಬೇಡ ಹೇಳಿ ಮೇಡಮ್ ಹಲವು ವರ್ಷದಿಂದ ಹೀಗೆಯೇ ನಡೆದು ಬಂದಿದೆ. ಬಂದವರೆಲ್ಲ ಕೇವಲ ಭರವಸೆ ಕೊಟ್ಟು ತೆರಳುತ್ತಾರೆ. ನೀವಾದರೂ ನಮ್ಮ ವಸತಿ ನಿಲಯಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಜಿಪಂ ಅಧ್ಯಕ್ಷರಿಗೆ ಮನವಿ ಮಾಡಿದರು.

ಪರಿಸ್ಥಿತಿ ಅವಲೋಕನ ಮಾಡಿದ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ನಿಲಯ ಮೇಲ್ವಿಚಾರಕ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತು ಮಾಡಲು ಇಲಾಖೆ ಮೇಲಧಿಕಾರಿಗೆ ಸೂಚಿಸುತ್ತೇನೆ. ಶಿಥಿಲ ಕಟ್ಟಡದಿಂದ ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗುವುದು. ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ. ಇನ್ನು ಮುಂದೆ ಹೀಗಾಗಲು ಬಿಡುವುದಿಲ್ಲ. ವಸತಿ ನಿಲಯಗಳ ಸುಧಾರಣೆಗೆ ಶೀಘ್ರ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

Leave a Reply

Your email address will not be published. Required fields are marked *