More

    ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು: ವೀಣಾ ಅಚ್ಚಯ್ಯ

    ಮಡಿಕೇರಿ:
    ಅಧಿಕಾರಿಗಳು ನಿಯಮಾನುಸಾರ ಸರಿಯಾಗಿ ಕೆಲಸ ಮಾಡಬೇಕು. ಬಡವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸರ್ಕಾರದಿಂದ ಸಂಬಳ ಪಡೆಯುವವರು ಲಂಚಕ್ಕೆ ಕೈ ಚಾಚಬಾರದು. ಮಧ್ಯವರ್ತಿಗಳನ್ನು ಹೊರಗಿಟ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಜಿಲ್ಲೆಯ ನೂತನ ಶಾಸಕರೇ ಇದನ್ನೆಲ್ಲಾ ತಡೆಗಟ್ಟುವ ಕೆಲಸ ಮಾಡುತ್ತಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಕೆಲಸ ಸರಿಯಾಗಿ ಆಗುತ್ತಿಲ್ಲ. ಸುಮ್ಮನೆ ಅಲೆದಾಡಿಸಲಾಗುತ್ತಿದೆ. ಇದಕ್ಕೆಲ್ಲಾ ಇನ್ನು ಮುಂದೆ ಅವಕಾಶ ಇಲ್ಲ. ಕೆಲವೇ ದಿವಸಗಳಲ್ಲಿ ಮುಖ್ಯಮಂತ್ರಿ ನೇಮಕ ಆಗುತ್ತದೆ. ನಂತರ ಶಾಸಕರು ಪ್ರಮಾಣವಚನ ಸ್ವೀಕರಿಸಿ ಕೊಡಗಿಗೆ ಮರಳಿದ ಮೇಲೆ ಅವರ ಜತೆ ಸಭೆ ನಡೆಸಲಾಗುವುದು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಇಬ್ಬರೂ ಪ್ರತ್ಯೇಕ ಪ್ರಣಾಳಿಕೆಯೊಂದಿಗೆ ಚುನಾವಣೆ ಎದುರಿಸಿದ್ದು, ಅವುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು.

    ೨೦೦೪ರಿಂದ ಕಾಂಗ್ರೆಸ್ ಶಾಸಕರ ಆಯ್ಕೆ ಸಾಧ್ಯವಾಗಿರಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮವಾಗಿ ಜನಮನ್ನಣೆ ಗಳಿಸಿದ್ದೇವೆ. ಈ ಹಿಂದಿನ ಸೋಲುಗಳು ಪಾಠ ಕಲಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಸೋತವರಿಗೆ ದುಃಖ ಸಹಜ. ಎಲ್ಲಾ ಬದಿಗಿಟ್ಟು ಕೆಲಸ ಮಾಡಬೇಕು. ಗೆದ್ದವರು ಎಲ್ಲರ ಸಲಹೆ, ಸಹಕಾರದಿಂದ ಕೊಡಗಿನ ಸಮಸ್ಯೆ ಪರಿಹರಿಸಬೇಕು. ಒಂದೇ ಬಾರಿಗೆ ಸಮಸ್ಯೆ ಅರಿವಾಗುವುದಿಲ್ಲ. ಹಳೆಬರ ಸಲಹೆ, ಅಭಿಪ್ರಾಯ ಪಡೆದುಕೊಳ್ಳಬೇಕು. ಚುನಾವಣೆ ಸಂದರ್ಭ ನಡೆದ ಎಲ್ಲಾ ಆರೋಪ, ಪ್ರತ್ಯಾರೋಪ ಬದಿಗೆ ಇಟ್ಟು ಪಕ್ಷ ಬೇಧ ಬಿಟ್ಟು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನೂತನ ಶಾಸಕರು ನಿಜವಾದ ನಾಯಕತ್ವ ಗುಣ ಪ್ರದರ್ಶಿಸಿದ್ದಾರೆ.

    ಕಾಂಗ್ರೆಸಿಗರು ಮಾತ್ರ ಮತ ಕೊಟ್ಟಿಲ್ಲ. ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಯಾರೇ ಸಿಎಂ ಆದರೂ ಕೊಡಗಿಗೆ ಹೆಚ್ಚಿನ ಅನುದಾನ ತರುವ ಹೋರಾಟ ನಡೆಯುತ್ತದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನ ಪ್ರಯತ್ನ ನಡೆಸಲಾಗುವುದು. ಕೊಡಗಿಗೆ ಮಂತ್ರಿಸ್ಥಾನ ಕೊಡಬೇಕು. ಜಿಲ್ಲೆಗೆ ಕೊಡಗಿನವರೇ ಉಸ್ತುವಾರಿ ಮಂತ್ರಿ ಆಗಬೇಕು. ಈ ನಿಟ್ಟಿನಲ್ಲಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

    ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಜನಸೇವೆ ಮಾತ್ರ ಮಾಡುವ ಅಧಿಕಾರಿಗಳು ಕೊಡಗಿನಲ್ಲಿದ್ದರೆ ಸಾಕು. ೪೦ ಪಸೆರ್ಂಟ್ ಅಧಿಕಾರಿಗಳನ್ನು ಸಹಿಸುವುದಿಲ್ಲ. ದಳ್ಳಾಳಿಗಳನ್ನು ತೊಲಗಿಸಲಾಗುವುದು. ಸ್ಥಳಿಯವಾಗಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಬೇಡಿಕೆ ಶಾಸಕರು ಈಡೇರಿಸಬೇಕು. ಮುಂದೆ ನಾಮನಿರ್ದೇಶನ ಸಂದರ್ಭದಲ್ಲಿ ಸ್ಪಷ್ಟತೆ ಇರಬೇಕು. ಸಕ್ರಿಯವಾಗಿ ತೊಡಗಿಸಿಕೊಂಡ ಕಾರ್ಯಕರ್ತರಿಗೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.
    ಪಕ್ಷದ ಪ್ರಮುಖರಾದ ವಿ.ಪಿ. ಸುರೇಶ್, ರಾಜೇಶ್ ಯಲ್ಲಪ್ಪ, ಬೊಳ್ಳಜೀರ ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts