More

    ಕಾರ್ಖಾನೆಗಳಿಗೆ ನೋಟಿಸ್ ಜಾರಿ: ವೀರಾಪುರ ಕೆರೆಯಲ್ಲಿ ಮೀನುಗಳ ಮಾರಣ ಹೋಮ

    ಬೆಂ.ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ವೀರಾಪುರ ಕೆರೆಯಲ್ಲಿ ಕೈಗಾರಿಕೆಗಳ ರಾಸಾಯನಿಕ ನೀರು ಸೇರ್ಪಡೆಯಾಗಿ ಮೀನುಗಳು ಸಾಯುತ್ತಿರುವ ಪ್ರಕರಣ ಸಂಬಂಧ ಸೋಮವಾರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.\


    ಅಧಿಕಾರಿಗಳ ತಂಡ, ಕಲುಷಿತ ನೀರಿನ ಗುಣಮಟ್ಟ ಪರೀಕ್ಷಿಸಲು ನೀರನ್ನು ಪ್ರಯೋಗಾಲಯಕ್ಕೆ ರವಾನಿಸಿತು. ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದಕ್ಕೆ ಭೇಟಿ ನೀಡಿ ಮಲಿನ ನೀರನ್ನು ಚರಂಡಿ ಮೂಲಕ ಹೊರಬಿಡುತ್ತಿರುವುದನ್ನು ಪತ್ತೆ ಹಚ್ಚಿ ಕಾರ್ಖಾನೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.


    ವೀರಾಪುರದ ಕೆರೆಯಲ್ಲಿ ಮೀನುಗಳು ಸತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮೀನುಗಳ ಸಾವಿನ ಕುರಿತು ಅನುಮಾನಗಳಿದ್ದು, ಕೆರೆಯ ಸುತ್ತಮುತ್ತಲಿನ ಕಾರ್ಖಾನೆಗಳು, ಮತ್ತು ಇಲ್ಲಿನ ಲೇಔಟ್ ಗಳ ನೀರಿನ ಹರಿವನ್ನು ತಪಾಸಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಮೇಶ್ ಹೇಳಿದರು.


    ಈ ಸಂಬಂಧ ಬಾಶೆಟ್ಟಿಹಳ್ಳಿ ಪಪಂ ಮುಖ್ಯಾಧಿಕಾರಿ ಜತೆ ಸಭೆ ನಡೆಸಿ, ಗ್ರಾಪಂ ವ್ಯಾಪ್ತಿಯಿಂದ ಬರುವ ಕಲುಷಿತ ನೀರನ್ನು ತಡೆದು ಸಂಸ್ಕರಿಸಿ ಬಿಡುವಂತೆ ಸೂಚಿಸಲಾಗಿತ್ತು. ಈಗ ತುರ್ತಾಗಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲೇಬೇಕಾಗಿದೆ ಎಂದು ಶಿಫಾರಸು ಮಾಡಿ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡಲಿದ್ದೇವೆ ಎಂದು ತಿಳಿಸಿದರು.

    ವರದಿ ಬಳಿಕ ಮುಂದಿನ ಕ್ರಮ: ಕೆರೆಯಲ್ಲಿ ಸಾಮಾನ್ಯವಾಗಿ ಮೀನುಗಳು ಸಾವನ್ನಪ್ಪಲು ಮುಖ್ಯಕಾರಣ ನೀರಿನಲ್ಲಿ ಆಮ್ಲಜನಕದ ಕೊರತೆ. ಕೆರೆಯ ನೀರಿನಿಂದ ವಾಸನೆ ಬರುತ್ತಿದ್ದು, ಕೆರೆ ಹಾಳಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ನೀರಿನ ಗುಣಮಟ್ಟದ ಪರಿಶೀಲನಾ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts