ಪರಮಾತ್ಮನು ಒಬ್ಬನೇ ಆದರೂ ಅವನ ಮಹಿಮೆ ಅನಂತವಾದುದು. ಹಾಗೆಯೇ ಮರವೆಂಬ ತತ್ತ್ವವು ಒಂದೊಂದು ಎಲೆ, ಹೂ, ಹಣ್ಣುಗಳಲ್ಲೂ ಇದ್ದು (ಅಂತರ್ಯಾಮಿಯಾಗಿದ್ದು) ಒಂದೊಂದನ್ನು ಮೀರಿಯೂ ಇದೆ. ಮರದಲ್ಲಿರುವ, ವ್ಯಕ್ತವಾದ ಎಲ್ಲ ಅಂಶಗಳನ್ನೂ ಅಂಗಗಳನ್ನೂ ಒಟ್ಟಿಗೆ ಹಾಕಿದರೂ, ‘‘ಮರ’’ವೆಂಬುದು ಅವೆಲ್ಲಕ್ಕಿಂತಲೂ ದೊಡ್ಡದು, ವಿಲಕ್ಷಣವಾದದ್ದು, ಮುಂದೆ ಮರದಲ್ಲಿ ಹುಟ್ಟಿ ಬರಬಹುದಾದ ಅಂಶಗಳು, ಈ ಹಿಂದೆ ಆಗಿಹೋಗಿರುವುವು, ಎಲ್ಲವುಗಳನ್ನು ಕೂಡಿಹಾಕಿದರೂ, ಈ ಬ್ರಹ್ಮವೃಕ್ಷದ ಪೂರ್ಣಸ್ವರೂಪ ತಿಳಿಯುವುದು ಕಷ್ಟ. ಅದು ಮನೋವಾಕ್ಕುಗಳಿಗಿಂತ ಅತೀತವಾಗಿದೆ.
‘‘ವೃಕ್ಷ ಇವ ಸ್ತಬ್ಧಃ ದಿವಿ ತಿಷ್ಠತ್ಯೇಕಃ ತೇನೇದಂ ಪೂರ್ಣಂ ಪುರುಷೇಣ ಸರ್ವಂ |’’ ಎಂದು ತೈತ್ತಿರೀಯ ಉಪನಿಷತ್ತಿನಲ್ಲಿ ಪರಮಪುರುಷನಾದ ಪರಬ್ರಹ್ಮವಸ್ತುವನ್ನು, ಮರದಂತೆ ಪರಮಪದದಲ್ಲಿ ಸುಭದ್ರವಾಗಿ ನಿಂತಿರುವನೆಂದೂ, ಈ ಮಹಾಪುರುಷನಿಂದಲೇ ಇವೆಲ್ಲವೂ ಪೂರ್ಣವಾಗಿದೆಯೆಂದು ವರ್ಣಿಸಲಾಗಿದೆ.
ಈಗ ಇಂಥ ಪರಮಪುರುಷನಿಗೆ ಏನು ಹೆಸರು? ಎಂಬ ಪ್ರಶ್ನೆ ಉದಯಿಸುವುದು ಸಹಜ. ಹೆಸರಿನಿಂದ ಏನು ಪ್ರಯೋಜನ? ಎಂದು ಕೇಳಿದರೆ – ಹೆಸರೆಂಬುದು ವಸ್ತುವನ್ನು ಮನಸ್ಸಿನಿಂದಲೂ, ಬುದ್ಧಿಯಿಂದಲೂ, ಗ್ರಹಿಸಿ, ತಿಳಿದು, ಗುರುತಿಸುವುದಕ್ಕೆ ಉಪಯುಕ್ತವಾದದ್ದು. ಪರಮಾತ್ಮನನ್ನು ಸರ್ವೆಂದ್ರಿಯಾತೀತನೆಂದ ಮಾತ್ರಕ್ಕೆ ಸಂಪೂರ್ಣ ಅಗ್ರಾಹ್ಯನೆಂದು ನಿರಾಶೆಯಿಂದ ಬಿಟ್ಟುಬಿಡುವಂತಿಲ್ಲ.
ಇದು ಬ್ರಹ್ಮನಿರಾಕರಣವೆಂಬ ನಾಸ್ತಿಕ್ಯ ಮತವಾಗುವುದು. ಪರಮಾತ್ಮ ಸಾಕ್ಷಾತ್ಕೃತನಾಗಬೇಕಾದರೆ, ಅವನನ್ನು ಗುರುತಿಸುವುದು ಸಾಧ್ಯವಾಗಬೇಕು. ಮಗುವು ಮಾತನ್ನಾಡದ ಅವಸ್ಥೆಯಲ್ಲೂ ‘‘ಇವಳೇ ನನ್ನ ತಾಯಿ’’, ‘‘ಅವಳಲ್ಲ’’ ಎಂದು ಗುರುತು ಹಚ್ಚುವಂತೆ, ಮಾತಿಗೆ ಮೀರಿದ ಅನುಭೂತಿಯಲ್ಲೂ ಗುರುತು ಹಚ್ಚುವ ವ್ಯಾಪಾರ ಸಾಧ್ಯವಾಗಿರುವುದು ಮಾತ್ರವಲ್ಲದೆ, ಅತ್ಯಂತ ಅವಶ್ಯವೂ ಅನಿವಾರ್ಯವೂ ಆಗಿದೆ. ಇದು ನಡೆದೇ ಇರುತ್ತದೆ.
ನಮಗೆ ಬೇಕಾಗಲಿ ಬೇಡವಾಗಲಿ. ಆನೆ ಮೊದಲಾದ ಪ್ರಾಣಿಗಳನ್ನೇ ನೋಡಿರದ ಒಂದು ಎಳೆಯ ಮಗುವನ್ನು ಪ್ರಾಣಿಶಾಲೆಗೆ ಮೊದಲು ಕರೆದುಕೊಂಡು ಹೋದಾಗ ಆನೆಯನ್ನು ಮೊದಲ ಬಾರಿಗೆ ನೋಡಿದಾಗ ಅದರಲ್ಲಿ ಏನನ್ನು ಪ್ರಧಾನವಾಗಿ ಕಾಣಬೇಕೆಂಬ ಪೂರ್ವಕಲ್ಪನೆಯಿಲ್ಲದೆ ಆಗುವ ಈ ಪ್ರಥಮ ಅನುಭೂತಿಯನ್ನು ನಿರ್ವಿಕಲ್ಪ ಎಂದು ಕರೆಯುತ್ತಾರೆ. ಅಂದರೆ ಮಗುವು ಆನೆಯ ಸೊಂಡಿಲನ್ನೋ ದಪ್ಪ ಕಾಲುಗಳನ್ನೋ, ಅಥವಾ ತನ್ನ ಗಮನ ಸೆಳೆದ ಯಾವುದೋ ‘‘ಇಂಥ ಕೆಲ ಅಂಶಗಳನ್ನಷ್ಟೇ ನೋಡುತ್ತದೆ.’’ ಆದರೆ ಎರಡನೇ, ಮೂರನೇ… ಹೀಗೆ ಮುಂದಿನ ಸಲ ಅದನ್ನೇ ನೋಡಿದಾಗ ‘‘ಇದು ಈ ಹಿಂದೆ ನೋಡಿದಂತೆಯೇ ಇದೆ, ಅದರ ಹಾಗೆಯೇ ಇದು; ಈಗ ಇನ್ನೂ ಹೆಚ್ಚಾಗಿ ಸ್ಪಷ್ಟವಾಗಿದೆ’’ ಎಂಬ ರೀತಿಯ ಪೂರ್ವಾನುಭವ ಪೋಷಿತವಾದ ಪೂರ್ವಕಲ್ಪನೆಗೆ ಪೋಷಕವಾದ ಅನುಭೂತಿಯು ಸವಿಕಲ್ಪವೆನಿಸುವುದು.
ಉದಾಹರಣೆಗೆ ‘‘ಗುಡಿಗೆ ಹೋಗೋಣ’’ ಎಂದಾಗ ಗುಡಿ ಎಂದರೆ ಹೇಗಿರಬಹುದೆಂಬ ಪೂರ್ವ ಕಲ್ಪನೆ, ಒಂದಿಲ್ಲೊಂದು ರೀತಿಯಲ್ಲಿ, ಪ್ರಬುದ್ಧರಾದವರಿಗೆ ಇರುತ್ತದೆ. ಗುಡಿಗೆ ಹೋಗೋಣವೆಂದು ಹೇಳಿ ಹೋಟೆಲಿಗೋ ಸಿನಿಮಾ ಮಂದಿರಕ್ಕೋ ಕರೆದುಕೊಂಡು ಹೋದರೆ, ‘‘ಇದು ಅದಲ್ಲ. ಸುಳ್ಳು ಹೇಳಿ ಕರೆತಂದಿರುವೆ!’’ ಎಂದು ವ್ಯತ್ಯಾಸ ತಿಳಿಯಲು ಅನುಕೂಲವಾಗುವುದು, ಅನುಭೂತಿಯು ಸವಿಕಲ್ಪವಾದುದರಿಂದಲೇ.