More

    ವೇದ ದರ್ಶನ: ಜೀವನದ ಗುರಿ, ತೃಪ್ತಿ ಮತ್ತು ಶಾಂತಿ 

    ನಾವು ಈ ಮೊದಲು ಹೇಳಿದಂತೆ ಕೇಳಿದ ಮಾತ್ರದಿಂದಲೇ ಅವರಿಗೆ ಸಿಟ್ಟು ಬರುತ್ತದೆ. ಸುಸಂಸ್ಕೃತನಾದ ಮನುಷ್ಯನಿಗೂ ಅಸಂಸ್ಕೃತನಿಗೂ ಇರುವ ವ್ಯತ್ಯಾಸ ಇಷ್ಟು ಸ್ಪಷ್ಟವಾಗಿ ಕಾಣದಿರುವುದಕ್ಕೆ ಕುರುಡತನವೇ ಕಾರಣ. ಸುಸಂಸ್ಕೃತನಾದವನು ವರ್ಷದಲ್ಲಿ ಒಮ್ಮೆಯಾದರೂ ತನಗೆ ಜನ್ಮವಿತ್ತು ಗತಿಸಿದ ಮಾತಾಪಿತೃಗಳನ್ನು ನೆನೆಸಿಕೊಳ್ಳುತ್ತಾನೆ.

    ಈ ನೆನಪು, ಕೃತಜ್ಞತಾಭಾವ ಉಳಿಯಲು ಕೆಲವು ಆಚರಣೆಗಳನ್ನು ತಂದುಕೊಟ್ಟವರು ಜೀವನಕ್ಕೆ ಒಂದು ರೂಪಕೊಡಲು ಪ್ರಯತ್ನಿಸಿದವರು. ಇದು ಅಗತ್ಯವಿಲ್ಲವೆಂದು ವಾದಿಸುವವರು ಯಾವ ನಿಯಮಾವಳಿಗೆ ಒಳಪಟ್ಟವರೆಂಬುದನ್ನು (?) ಅವರವರ ಜೀವನವೇ ತೋರಿಸುತ್ತದೆ. ತಂದೆ ತಾಯಿಯರನ್ನೇ ಮರೆತವನು, ‘‘ದೇಶ’’ಕ್ಕಾಗಲೀ, ‘‘ದೇಶಬಾಂಧವ’’ರಿಗಾಗಲಿ ನಿಷ್ಠೆಯಿಂದ ನಡೆಯುವವನೇ? ಇವನಿಗೆ ರಾಷ್ಟ್ರಧ್ವಜವು ಬರಿಯ ಬಟ್ಟೆ. ಹಿರಿಯರು, ಪೂಜ್ಯರು, ಎನಿಸಿಕೊಂಡವರೆಲ್ಲ – ಎಲ್ಲರೂ ರಕ್ತಮಾಂಸಗಳ ಮುದ್ದೆ ಮಾತ್ರ. ಕೊನೆಗೆ ತನ್ನ ಹೆಂಡತಿ ಮಕ್ಕಳೂ ಹೊರೆಯೇ.

    ಪ್ರೀತಿ, ನಿಷ್ಠೆ, ಶ್ರದ್ಧೆ, ಧ್ಯೇಯವಾದ, ಅರ್ಪಣ ಭಾವ, ಇವು ಇಂತಹವರ ಜೀವನದಲ್ಲಿ ಬರಲು ಸಾಧ್ಯವಿಲ್ಲ. ವಿಚಾರಪರತೆಗೆ ವಿರುದ್ಧವಾದ ಜೀವನ ಇದು. ಸದ್ಭಾವನೆಗೆ ಇಲ್ಲಿ ಅವಕಾಶವಿಲ್ಲ. ವಿಚಾರಪರತೆಯು ಮೂಡಿದ ಕ್ಷಣವೇ, ಅವನು ತನಗೆ ತಾನೇ ಪ್ರಾಮಾಣಿಕನಾಗಿ ಉತ್ತರಿಸಿಕೊಂಡ ಪಕ್ಷದಲ್ಲಿ ನಮ್ಮ ದಾರಿಗೇ ಬರದೇ ವಿಧಿಯಿಲ್ಲವಾಗುತ್ತದೆ.

    ಜೀವನದಲ್ಲಿ ನಿರ್ದಿಷ್ಟವಾದ ಗುರಿ ಇದ್ದ ಹೊರತು ಕೆಲಸದಲ್ಲಿ ತೃಪ್ತಿ ಬರುವುದಿಲ್ಲ. ತೃಪ್ತಿ ಬಂದ ಹೊರತು ಶಾಂತಿ ಸಿಗಲಾರದು. ಗುರಿ ಇರಬೇಕಾದರೆ, ಮೊದಲಿನಿಂದ ಗುರಿಸಾಧನೆಯವರೆಗೂ, ಪ್ರಯತ್ನಿಸುವ ಮಾನವನ ಸಕಲ ವ್ಯಾಪಾರಗಳಿಗೆ ಏಕರೂಪತೆ ತಂದುಕೊಡುವ ಭೌತಾತೀತ ಚೈತನ್ಯವನ್ನೂ ಒಪ್ಪಬೇಕಾಗುತ್ತದೆ. ಯಾವುದಕ್ಕೆ ನಿರ್ದಿಷ್ಟ ಆಕಾರವಿದೆಯೋ ಅದರಲ್ಲಿ ಒಂದು ‘‘ತತ್ತ್ವ’’ ಇರಲೇಬೇಕಲ್ಲವೆ? (ಗಣಿತಶಾಸ್ತ್ರಜ್ಞರನ್ನು ಕೇಳಿ ನೋಡಲಿ.)

    ಈ ರೀತಿ ಗುರಿಸಾಧನೆಗಾಗಿ ಹೊರಡುವವನು ಅದಕ್ಕಾಗಿ ಕೆಲವೊಂದು ನಿಯಮಗಳನ್ನೂ ಪಾಲಿಸಬೇಕಾಗುವುದು ಅನಿವಾರ್ಯವಾಗುತ್ತದೆ: ಗುರಿಗೆ ವಿರುದ್ಧವಾದುದನ್ನು ಬಿಡಬೇಕಾಗುತ್ತದೆ. ‘‘ತ್ಯಾಗ’’ತತ್ತ್ವ ಇಲ್ಲಿ ಬಂದುಹೋಯಿತು. ಸಹನೆ ಬೇಕಾಗುತ್ತದೆ. ತನ್ನ ಗುರಿಗೆ ಪೋಷಕವಾದುದರಲ್ಲಿ ವಿಶ್ವಾಸ ಇಡಬೇಕಾಗುತ್ತದೆ.

    ‘‘ಪ್ರೀತಿ’’ತತ್ತ್ವ ಇಲ್ಲಿ ಬಂದಿತು. ಹೀಗೆಯೇ ಒಂದೊಂದಾಗಿ ಮೌಲ್ಯಗಳೆಲ್ಲ ಪ್ರತಿಷ್ಠಿತವಾಗುತ್ತವೆ. ಇವನ್ನು ಪರಿಪೋಷಿಸಲು ಆಗಾಗ ಆಚರಿಸುವ ವ್ರತ, ಹಬ್ಬ, ಪಿತೃಕಾರ್ಯ, ದೇವಕಾರ್ಯ – ಎಲ್ಲವುಗಳಿಗೂ ಇರುವ ಮಾರ್ವಿುಕ ಅರ್ಥದ ಅರಿವಾಗುತ್ತದೆ. ಹೀಗೆ ಹೊರಟವನಿಗೆ ಮಾತ್ರ ಶಾಶ್ವತ ಸುಖ, ಶಾಂತಿಗಳು ಸಿಗುವ ಸಂಭವವಿದೆ.

    ಇಂದು ‘‘ವಿಜ್ಞಾನ’’ದ ಹೆಸರಿನಲ್ಲಿ ಚಾರ್ವಾಕ ಪಕ್ಷವನ್ನು ಜನಪ್ರಿಯ ಮಾಡಲಾಗುತ್ತಿದೆ. ಆತ್ಮವೇ ಇಲ್ಲವೆಂದು ವಾದಿಸಿ ಸತ್ತ ಒಬ್ಬ ಮಹಾನುಭಾವ, ತನ್ನ ಬೂದಿಯನ್ನು ದೇಶಾದ್ಯಂತ ವಿಮಾನದ ಮೂಲಕ ಎರಚಬೇಕೆಂದು ಮರಣಪತ್ರದಲ್ಲಿ ಬರೆದಿದ್ದ.

    ದೇಶಪ್ರೇಮವು ವ್ಯಕ್ತಿಗಿಂತ ದೊಡ್ಡದೆಂದು ಇದರಿಂದ ಒಪ್ಪಿದಂತಾಗಲಿಲ್ಲವೇ? ಆತ್ಮವಿಲ್ಲದಿದ್ದರೆ, ಈ ರೀತಿ ಬೂದಿ ಎರಚಿದ್ದರಿಂದ ‘ಯಾರಿಗೆ’ ಪ್ರೀತಿಯಾಯಿತು ಎಂಬುದನ್ನು ‘ಬದುಕಿರುವವರು’ ಯೋಚಿಸಲಿ! ದೇಹ ಹೋದಮೇಲೆ, ‘ಆತ್ಮಕ್ಕೆ’ ಇದರಿಂದ ತೃಪ್ತಿಯಾಗುತ್ತದೆ ಎಂದು ಭಾವಿಸದಿದ್ದರೆ, ಹೀಗೇಕೆ ಬರೆಯುತ್ತಿದ್ದ? ಹಾಗಿಲ್ಲದಿದ್ದರೆ ಅವನು ಶುದ್ಧ ಅವಿವೇಕಿಯೆಂದೂ, ಬೂಟಾಟಿಕೆಯವನೆಂದೂ ಬಗೆದು ಅವನ ಅನುಯಾಯಿಗಳು, ಅವನ ಕೊನೆಯ ಕೋರಿಕೆಯನ್ನು ನಡೆಸದೆ ಪ್ರಾಮಾಣಿಕತೆಯನ್ನು ತೋರ್ಪಡಿಸಬಹುದಿತ್ತು.

    ಶ್ರಾದ್ಧಕ್ಕಿಂತ ಲಕ್ಷ ಪಟ್ಟು ಹೆಚ್ಚು ಖರ್ಚು ಮಾಡಿ ನಡೆಸಿದ ಈ ಕೋರಿಕೆಯಲ್ಲಿ ಶ್ರಾದ್ಧದ ಮತ್ತೊಂದು ರೀತಿ ಮಾತ್ರ ಆಚರಿಸಿದಂತಾಯ್ತು. ‘ಆತ್ಮ’ವನ್ನೊಪ್ಪಿದಂತಾಯ್ತು. ಆದರೆ ಪ್ರತಿಯೊಬ್ಬ ಸಾಯುವವನೂ ಈ ರೀತಿ ಮಾಡಿದರೆ ಗತಿಯೇನು? ಆದುದರಿಂದ ಎಲ್ಲರಿಗೂ ಅನ್ವಯಿಸುವಂತೆ ಒಂದು ವಿಧಿಯನ್ನು ನಿಶ್ಚಯಿಸುವುದು ಅನಿವಾರ್ಯವೇ ಆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts