More

    ವೇದ ದರ್ಶನ -90| ಭಗವಂತನ ಸಾವಿರ ಮುಖದ ಚಿತ್ರಗಳನ್ನು ಅನಾವರಣಗೊಳಿಸಿದ್ದಾರೆ ಡಾ.ಕೆ.ಎಸ್​.ನಾರಾಯಾಣಾಚಾರ್ಯ…

    ವೇದ ದರ್ಶನ -90| ಭಗವಂತನ ಸಾವಿರ ಮುಖದ ಚಿತ್ರಗಳನ್ನು ಅನಾವರಣಗೊಳಿಸಿದ್ದಾರೆ ಡಾ.ಕೆ.ಎಸ್​.ನಾರಾಯಾಣಾಚಾರ್ಯ...

    ‘‘ಜನ್ಮಾದ್ಯಸ್ಯ ಯತಃ’’ ಎಂದು ತಿಳಿದ ಮಾತ್ರದಿಂದ ಬ್ರಹ್ಮಸಾಕ್ಷಾತ್ಕಾರವಾಯಿತೇ? ಎಂದು ಕೇಳಿದರೆ ‘‘ರೈಲ್ವೆ ಗೈಡು ನೋಡಿದ ಮಾತ್ರದಿಂದ ಊರನ್ನೇ ಕಂಡಂತಾಯಿತೇ?’’ ಎಂದು ಕೇಳಿದಂತಾಗುವುದು. ಅಂದರೆ ಇದು ಮೊದಲ ಹೆಜ್ಜೆ ಮಾತ್ರ. ಅಲ್ಲದೆ ಉಳಿದೆಲ್ಲ ಲಕ್ಷಣಗಳೂ ಇದರಲ್ಲಿಯೇ ಅಡಕವಾದುವೆಂಬ ಅರ್ಥದಲ್ಲಿ ಮಾತ್ರ ಈ ಲಕ್ಷಣಕ್ಕೆ ಪ್ರಾಶಸ್ತ್ಯ ಇದರಲ್ಲಿ ಅಡಕವಾದದ್ದೇನು? ಎಂದು ಬ್ರಹ್ಮಜಿಜ್ಞಾಸುವು ಪರಮಾತ್ಮನ ಒಂದೊಂದೇ ಗುಣ, ವಿಭೂತಿ, ಲೀಲಾ ಚೇಷ್ಟಿತಗಳನ್ನು ಅಪರಿಚ್ಛಿನ್ನ ಕಾಲದ ಉದ್ದಕ್ಕೂ ಅನುಭವಿಸುತ್ತಿದ್ದರೆ, ಬ್ರಹ್ಮವಸ್ತುವಿನ ಬೃಹತ್ತ್ವದ ಅರಿವು ಆಗುತ್ತ ಹೋಗುವುದು.

    ಬ್ರಹ್ಮವಸ್ತುವು ಸ್ವಭಾವತಃ ‘‘ದೊಡ್ಡ’’ದಾದುದರಿಂದ (‘‘ತಸ್ಯ ನಾಮ ಮಹದ್ಯಶಃ’’) ಅದರ ಅನುಭವವು ಒಂದು ಕ್ಷಣದಲ್ಲಿ ಆಗಿಹೋಗಿ ಮುಗಿಯತಕ್ಕದ್ದಲ್ಲ. ಮುಗಿದುಹೋದ ಪಕ್ಷದಲ್ಲಿ, ಅದು ಬ್ರಹ್ಮಾನುಭೂತಿಯಲ್ಲ – ಬರೀ ಮೋಸವೆಂದು ಹೇಳಬೇಕಾಗುತ್ತದೆ! ಅಲ್ಲದೆ, ಅನುಭಾವಿಯೂ ಈ ಅನಂತಾನುಭೂತಿಗೆ ಸರಿಯಾದ ಪಾತ್ರವಾಗಿರುವಂತೆ ದೊಡ್ಡವನಾಗಬೇಕಾಗುತ್ತಾನೆ: ‘‘ಏತತ್ ಸಾಮಗಾಯನ್ನಾಸ್ತೇ’’ ಎಂದು ಉಪನಿಷತ್ತು ವರ್ಣಿಸುವಂತೆ ಇದು ನಿರಂತರ ವ್ಯಾಪಾರ.

    ಇದಕ್ಕೆ ಸಹಾಯಕವಾಗುವುದೇ ಜಪ, ಧ್ಯಾನ ಮುಂತಾದವು, ಅದರಲ್ಲೂ ಶ್ರೀ ಶಂಕರಾದಿ ಸಕಲ ಆಚಾರ್ಯಮಾನ್ಯವಾದ ವಿಷ್ಣುಸಹಸ್ರನಾಮಾದಿ ಸ್ತೋತ್ರಗಳು. ಸಾವಿರ ‘‘ನಾಮ’’ಗಳೂ ಭಗವಂತನ ಸಾವಿರ ಮುಖದ ಚಿತ್ರಗಳು. (Each Name presents a concept of God, leading to a continuous perception of God.) ‘‘ವಿಶ್ವಂ’’ ಎಂದರೆ ‘‘ಜಗತ್ತಿನಲ್ಲಿ ಪ್ರವೇಶ ಮಾಡಿದವ’’ನೆಂದೂ, ‘‘ವಿಷ್ಣುಃ’’ ಎಂದರೆ ‘‘ಎಲ್ಲವನ್ನೂ ವ್ಯಾಪಿಸಿದವ’’ನೆಂದೂ, ಮುಂದೆ ಒಂದೊಂದೇ ಶ್ರೀನಾಮಗಳಲ್ಲಿ ಭಗವಂತನ ‘‘ಗುರುತು’’ ಹತ್ತುತ್ತ ಹೋಗುವುದು. ಮಹಾಭಾರತದಲ್ಲಿ ಶ್ರೀ ಭೀಷ್ಮರು ಈ ದಿವ್ಯಸ್ತೋತ್ರದ ಆರಂಭದಲ್ಲಿ ಈ ಶ್ರೀನಾಮಗಳು ತಮ್ಮ ಸ್ವ-ಕಪೋಲಕಲ್ಪಿತವಲ್ಲವೆಂದೂ, ‘‘ಋಷಿಭಿಃ ಪರಿಗೀತಾನಿ’’ – ‘‘ಮಹಾದರ್ಶಿಗಳಾದ ಋಷಿಗಳಿಂದ ಗಾನರೂಪದಲ್ಲಿ ಕೊಂಡಾಡಲ್ಪಟ್ಟ’’ವೆಂದೂ, ಧರ್ಮರಾಜನ ಮೇಲ್ಮೆಗಾಗಿ, ‘‘ಭೂತಯೇ’’ ಅವನ ‘‘ಅಸ್ತಿತ್ವ’’ಕ್ಕಾಗಿಯೇ ಉಪದೇಶ ಮಾಡುತ್ತಿರುವುದಾಗಿಯೂ ಘೊಷಿಸಿದ್ದಾರೆ.

    ವೇದದಲ್ಲಿ ಬರುವ ಒಂದೊಂದು ದೇವತೆಯೂ ಭಗವದಂಶರೆಂದ ಮೇಲೆ, ಅವರ ಒಬ್ಬೊಬ್ಬರ ‘‘ಹೆಸರಿ’’ನಲ್ಲೂ ತದಂತರ್ಯಾಮಿಯಾದ ಭಗವದಂಶಗಳ ಪರಿಚಯವಿರುತ್ತದೆ ಎಂಬುದು, ಶ್ರೀ ಮಧ್ವಾಚಾರ್ಯರನ್ನು ಒಳಗೊಂಡಂತೆ ಎಲ್ಲ ಆಚಾರ್ಯರ ಮತ.

    ಉದಾಹರಣೆಗೆ ‘‘ಅಜ’’ ಎಂಬ ಹೆಸರು ಬ್ರಹ್ಮದೇವನಿಗೆ ರೂಢಿಯಲ್ಲಿದ್ದರೂ, ಮುಖ್ಯವೃತ್ತಿಯಲ್ಲಿ ಹುಟ್ಟು ಸಾವಿಲ್ಲದ ಪರಮಾತ್ಮನನ್ನು ಸೂಚಿಸುತ್ತದೆ. ‘‘ಇಂದ್ರಕರ್ವ’’ ಎಂಬುದೂ, ‘‘ಈಶ್ವರ’’ ಎಂಬುದೂ, ‘‘ಶಿವ’’ ಎಂಬುದೂ, ‘‘ಕಪಿಲಃ’’ ಎಂಬುದೂ, ‘‘ಕಾಮದೇವಃ’’ ಎಂಬುದೂ ‘‘ತೀರ್ಥಕರಃ’’ ಎಂಬುದೂ, ‘‘ಧನಂಜಯ’’, ‘‘ಪರ್ಜನ್ಯ’’, ‘‘ಪುರಂದರ’’, ‘‘ಪ್ರಜಾಪತಿ’’, ‘‘ಭೀಮ’’, ‘‘ಮನು’’, ‘‘ಯಜ್ಞ’’, ‘‘ರುದ್ರ’’, ‘‘ವರುಣ’’, ‘‘ವಸು’’, ‘‘ವಾಚಸ್ಪತಿ’’, ‘‘ವಾಯು’’, ‘‘ವಿಶ್ವಕರ್ವ’’, ‘‘ವೃಷಭ’’, ‘‘ಶಂಭು’’ ಇತ್ಯಾದಿ ವೇದೋಕ್ತ ವೇದಸಮ್ಮತವಾದ, ಸಕಲ ನಾಮಗಳೂ ಭಗವಂತನ ಅನಂತ ವ್ಯಕ್ತಿತ್ವಕ್ಕೆ ಬಹುಮುಖಗಳು.

    ಅರ್ಜುನನ ಮೇಲಿನ ಕೃಪೆಯಿಂದ ಭಗವಂತನು ತನ್ನ ಅನಂತ ಮುಖಗಳೊಡನೆ, ಅನಂತ ಬಾಹುಗಳೊಡನೆ, ಅವನೆದುರಿಗೆ ನಿಂತಂತೆ, ನಮಗೂ ಪ್ರತ್ಯಕ್ಷನಾದರೆ, ಅವನನ್ನು ಯಾವ ಮುಖದಿಂದ ಗುರುತಿಸಬೇಕು? ಮತ್ತು ಏನೆಂದು (ಕಃ?) ಕರೆಯಬೇಕು? ಎಂಬುದು ಈ ಲೇಖನಕ್ಕೆ ವಿಷಯವಾಗಿರುವ ಒಂದು ದಿವ್ಯ ವೇದಸೂಕ್ತದ ಪ್ರಶ್ನೆ.

    (ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts