More

    ವೇದ ದರ್ಶನ 91 | ವಿಷ್ಣುವೇ ದೇವತಾಸಾರ್ವಭೌಮ

    ವೇದ ದರ್ಶನ 91 | ವಿಷ್ಣುವೇ ದೇವತಾಸಾರ್ವಭೌಮಎಲ್ಲ ದೇವತೆಗಳೂ ಭಗವಂತನ ಮುಖಗಳೆಂಬುದು ನಿಜವಾದರೂ ಈ ಮುಖಗಳಲ್ಲಿ ಯಾವುದು ಮುಖ್ಯ ಎಂಬ ಗೊಂದಲದ ಪ್ರಶ್ನೆ ಒಮ್ಮೊಮ್ಮೆ ಏಳುತ್ತದೆ. ಇದು ಸರಿಯಾಗಿರಲಿ, ಇಲ್ಲದಿರಲಿ, ‘‘ಗುರುತು’’ ಹಚ್ಚಿದ ಹೊರತು ಸಮಾಧಾನವಾಗಲಾರದಷ್ಟು ಇದು ಸಹಜ. ಪಂಥ ಪಂಥಗಳ ಜಗಳಕ್ಕೆ ಒಂದು ರೀತಿಯಿಂದ ಇಲ್ಲಿ ಅವಿವೇಕಿಗಳಿಗೆ ಅವಕಾಶವಿದೆ. ಆದರೆ ಮತ್ತೊಂದು ದೃಷ್ಟಿಯಿಂದ ವಿವೇಕಿಗಳ ಪಾಲಿಗೆ ಈ ಪ್ರಶ್ನೆಗೆ ಬೇರೆಯೇ ಅರ್ಥವಿದೆ: ‘‘ಭಗವಂತನ ಶ್ರೀನಾಮಗಳಲ್ಲಿ ಯಾವುದೊಂದಕ್ಕೆ ಉಳಿದೆಲ್ಲವನ್ನೂ ಒಳಗೊಳ್ಳುವಷ್ಟು ವಿಸ್ತಾರಾರ್ಥವಿದೆ?’’ ಎಂಬುದು ಜಿಜ್ಞಾಸುವಿಗೆ ಉಪಕಾರಕ ಪ್ರಶ್ನೆ.

    ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಈ ವಿಷಯಕ್ಕೆ ಒಂದು ಮಾರ್ವಿುಕ ಕಥೆಯಿದೆ (10-89). ಸರಸ್ವತೀ ನದೀತೀರದಲ್ಲಿ ಒಂದು ಕಾಲದಲ್ಲಿ ಋಷಿಗಳು ಸತ್ತ್ರಯಾಗವನ್ನು ನಡೆಸುತ್ತಿದ್ದರು. ಸಕಲ ದೇವತೆಗಳಲ್ಲೂ ಪ್ರಧಾನರಾದ ತ್ರಿಮೂರ್ತಿಗಳಲ್ಲೂ ಪ್ರಧಾನನು ಯಾರೆಂಬ ವಿಷಯ ಚರ್ಚೆ ಆಯಿತು. ನಿರ್ಣಯ ಕಷ್ಟವಾಯಿತು. ಆಗ ಋಷಿಗಳೆಲ್ಲರೂ ಸೇರಿ, ಸರ್ಪ¤ಗಳಲ್ಲಿ ಒಬ್ಬರೂ, ಬ್ರಹ್ಮದೇವನ ಮಾನಸಪುತ್ರರಲ್ಲಿ ಶ್ರೇಷ್ಠರಾದ ಭೃಗುಮಹರ್ಷಿಯನ್ನು ಈ ಪ್ರಶ್ನೆಯ ನಿರ್ಣಯಕ್ಕಾಗಿ ತ್ರಿಮೂರ್ತಿ ಪರೀಕ್ಷೆ ನಡೆಸಿ ಉತ್ತರ ಕೊಡುವಂತೆ ನಮ್ರತೆಯಿಂದ ಪ್ರಾರ್ಥಿಸಿದರು. ಭೃಗುವು ಮೊದಲು ಬ್ರಹ್ಮಸಭೆಗೆ ಹೋದನು. ಅವನನ್ನು ಪರೀಕ್ಷಿಸಲು, ಅವನನ್ನು ಸ್ತುತಿಸದೆ ಸುಮ್ಮನಿದ್ದನು. ಆಗ ಬ್ರಹ್ಮನಿಗೆ ತಡೆಯಲಾರದಷ್ಟು ಕೋಪ ಬಂದಿತು. ಆದರೆ ಸ್ವಂತ ಮಗನಾದ ಭೃಗುವನ್ನು ಶಪಿಸಲಾರದೆ, ಕಷ್ಟಪಟ್ಟು ಅಡಗಿಸಿಕೊಂಡನು. ಭೃಗುವು ಇದನ್ನರಿತು, ಬ್ರಹ್ಮದೇವನು ರಜೋಗುಣಪ್ರಧಾನನೆಂದು (ಸೃಷ್ಟಿಕ್ರಿಯೆಗೆ ಅನುಕೂಲವಾದ ಗುಣ) ತಿಳಿದು, ರುದ್ರಸಭೆಗೆ ಬಂದನು.

    ಸೋದರನನ್ನು ಕಂಡು ರುದ್ರನು ಪ್ರೀತಿಯಿಂದ ಆಲಿಂಗಿಸಲು ಬಂದಾಗ ಪರೀಕ್ಷೆಗಾಗಿ ಭೃಗುವು ಈ ಚುಚ್ಚುಮಾತನ್ನು ಆಡುತ್ತಾನೆ: ‘‘ನನ್ನನ್ನು ಮುಟ್ಟಬೇಡ! ನೀನು ಲೋಕಾನುವರ್ತಿಯಲ್ಲದೆ ಇಷ್ಟ ಬಂದಂತೆ ನಡೆಯುವವನು’’ ಎಂದು ಆಕ್ಷೇಪಿಸಲು ರುದ್ರನು ಶೂಲದಿಂದ ಭೃಗುವನ್ನು ಕೊಲ್ಲಲು ಮುಂದೆ ಬಂದನು. ಆಗ ಪಾರ್ವತಿಯು ಶಿವನನ್ನು ಸಾಂತ್ವನಗೊಳಿಸಿದಳು. ರುದ್ರನು ತಮೋಗುಣ ಪ್ರಧಾನನೆಂದು (ಇದು ಲೋಕಗಳ ಲಯಕ್ಕೆ ಉಪಕಾರವಾದ ಗುಣ) ತಿಳಿದ ಭೃಗುವು ವಿಷ್ಣುಲೋಕಕ್ಕೆ ಬಂದಾಗ ವಿಷ್ಣುವು ಲಕ್ಷ್ಮೀಸಮೇತನಾಗಿ ಶೇಷಶಾಯಿಯಾಗಿದ್ದನ್ನು ಕಂಡು, ಪರೀಕ್ಷಾರ್ಥವಾಗಿ ವಿಷ್ಣುವಿನ ವಕ್ಷಃಸ್ಥಲಕ್ಕೆ ಪಾದದಿಂದ ಒದೆಯುತ್ತಾನೆ: ಆಗ ವಿಷ್ಣು ತಟ್ಟನೆ ಮೇಲೆದ್ದು ಭೃಗುವನ್ನು ಸ್ವಾಗತಿಸಿ, ಅವನ ಪಾದಗಳಿಗೆ ನಮಸ್ಕರಿಸಿ ಹೀಗೆ ಹೇಳುತ್ತಾನೆ: ‘‘ಸ್ವಾಮೀ! ತಾವು ಬಂದುದನ್ನು ತಿಳಿಯದೆ ನನ್ನಿಂದ ತಮಗೆ ಅಪರಾಧವಾಯಿತು. ನಿಮ್ಮ ಪಾದಗಳು ಸಕಲ ತೀರ್ಥಗಳಿಗೂ ಪಾವನವು. ಈ ಪಾದಸ್ಪರ್ಶದಿಂದ ನನ್ನ ವಕ್ಷಸ್ಥಳವು ಲಕ್ಷ್ಮೀನಿವಾಸಕ್ಕೆ ಯೋಗ್ಯವಾಯ್ತು. (ಕಲ್ಲಾದ ನನ್ನ ಎದೆಯನ್ನು ಒದ್ದು) ನಿಮ್ಮ ಕೋಮಲವಾದ ಪಾದವು ನೊಂದಿರಬೇಕು’’ ಎಂದು ಮುನಿಪಾದಗಳನ್ನು ಒತ್ತಿದಾಗ, ಆನಂದಪುಳಕಿತನಾದ ಭೃಗುವು ಇವನೇ ಸರ್ವಸತ್ತ್ವಮಯನಾದ ದೇವತಾಸಾರ್ವಭೌಮನೆಂದು ನಿರ್ಷRಸಿ, ಉಳಿದ ಋಷಿಗಳಿಗೆ ತಿಳಿಸಲು, ಇದು ಅಂಗೀಕೃತವಾಗಿ, ‘‘ವಿಷ್ಣುಸ್ಸರ್ವಾ ದೇವತಾಃ’’ ಎಂಬಂತೆ ನಿರ್ಣಯವಾಯಿತು. (ಪುರಾಣಾಂತರಗಳಲ್ಲಿ, ಋಷಿಗಳು ಯಜ್ಞದ ಕೊನೆಯಲ್ಲಿ ಇನ್ನೂ ಉಳಿದಿದ್ದ ಹವಿಸ್ಸಿನ ಶೇಷವನ್ನು ಯಾರಿಗೆ ಅರ್ಪಿಸಬೇಕೆಂದು (ಕಸ್ಮೆ ೖ ದೇವಾಯ ಹವಿಷಾ ವಿಧೇಮ) ತಿಳಿಯದೆ ಭೃಗುವಿನಿಂದ ಹೀಗೆ ನಿರ್ಣಯಿಸಿ, ಕೊನೆಗೆ ಆ ಹವಿಸ್ಸನ್ನು ‘‘ಸರ್ವಂ ಶ್ರೀ ವಿಷ್ಣವೇ ಸ್ವಾಹಾ’’ ಎಂದು ಅರ್ಪಿಸಿದರೆಂದೂ ಹೇಳಿದೆ. ಈ ಪದ್ಧತಿಯು ಸ್ಮಾರ್ತ, ವೈಷ್ಣವ ಶ್ರೀವೈಷ್ಣವಾದಿ ಸಕಲ ವೇದಾವಲಂಬಿಗಳಲ್ಲಿಯೂ ಈಗಲೂ ನಡೆದುಬರುತ್ತಿರುವುದೇ, ಈ ವಿಷಯಕ್ಕೆ ಪ್ರಮಾಣ).

    (ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts