More

    ಪಾಪಬುದ್ಧಿ ನಿವಾರಕ ಮಂತ್ರಾರ್ಥ

    ಒಮ್ಮೆ ವಸಿಷ್ಠರು ಮೂರು ದಿನಗಳವರೆಗೆ ಅನ್ನಾದಿಗಳು ದೊರೆಯದೆ ಉಪವಾಸ ಬಾಯಾರಿಕೆಗಳಿಂದ ಬಳಲಿ ನಾಲ್ಕನೆಯ ದಿನ ಏಳಲೂ ಶಕ್ತಿಯಿಲ್ಲದೆ ಬಿದ್ದಿದ್ದಾಗ, ನಾಲ್ಕನೆಯ ರಾತ್ರಿ, ಕೊನೆಗೆ ತಮ್ಮ ತಂದೆಯದಾದ ವರುಣಗೃಹದಲ್ಲಿಯಾದರೂ, ಕದ್ದಾದರೂ, ಅನ್ನವನ್ನು ತಿನ್ನಬೇಕೆಂದು ಸ್ವಪ್ನದಲ್ಲಿಯೇ ಅಲ್ಲಿಗೆ ಹೋದರಂತೆ (ವರುಣಸ್ಯ ಗೃಹಾನ್ ರಾತ್ರೌ ವಸಿಷ್ಠಃ ಸ್ವಪ್ನಮಾಚರನ್…ಬೃಹದ್ದೇವತಾ 6.2). ಆಗ ವರುಣನ ನಾಯಿಯು ಕೊಟ್ಟಿಗೆಯ ಸಮೀಪದಲ್ಲಿ ಮಲಗಿದ್ದದ್ದು, (ಅರ್ಜುನ ಎಂದು ಅದರ ಹೆಸರು. ಸಾತ್ವಿಕ ಶಕ್ತಿಯಾಗಿ ಎಚ್ಚೆತ್ತಿರುವುದರಿಂದ ‘‘ಬಿಳೀ’’ ಎಂಬರ್ಥದ ಈ ಹೆಸರು ಅದಕ್ಕೆ ಉಚಿತವಲ್ಲವೆ?) ಅವರನ್ನು ಕಂಡು ಬೊಗಳುತ್ತದೆ. ಆಗ ವಸಿಷ್ಠರು ಆ ದಿವ್ಯ ‘‘ಶ್ವಾನ’’ಕ್ಕೆ ಉದ್ದೇಶಿಸಿ ಪಠಿಸಿದ ಕೆಲವು ಸುಂದರ ಮಂತ್ರಗಳು ಋಗ್ವೇದದಲ್ಲಿ (7.55.1-2) ಇವೆ.

    ‘‘ಎಲೈ, ಬಾಗಿಲು ಕಾಯುತ್ತಿರುವ, ಗೃಹರಕ್ಷಕನಾದ ವಾಸ್ತೋಷ್ಪತಿಯೇ! ನೀನು ಸಮಸ್ತ ರೋಗನಾಶಕ. ಅನೇಕಾನೇಕ ಸ್ವರೂಪಗಳನ್ನು ಹೊಂದಬಲ್ಲೆ. ನಮಗೆ ಸ್ನೇಹಿತನಾಗಿ ಸುಖವನ್ನು ಕೋರುವವನೂ ಆಗಿರು.’’ ‘‘ಬಿಳಿಯ ಬಣ್ಣವುಳ್ಳ ಅರ್ಜುನನೇ! ಕೆಲವು ಅಂಗಗಳಲ್ಲಿ ಕೆಂಪು ವರ್ಣವುಳ್ಳ ಪಿಶಂಗನೇ! ಸರಮೆಯ ಮಗನಾದ ಸಾರಮೇಯನೇ! ನನ್ನನ್ನು ಕಚ್ಚಲೆಂದು ವಿಸ್ತಾರ ಅಗಲಿಸಿದ ನಿನ್ನ ಬಾಯಿಯಲ್ಲಿ ಕಾಣುವ ಹಲ್ಲುಗಳು ವಿಶೇಷ ಕಾಂತಿಯಿಂದ ಹೊಳೆಯುವ ಈಟಿಗಳೆಂಬ ಉದ್ದನೆಯ ಚೂಪು ಆಯುಧಗಳಂತೆ, ವಸಡುಗಳೊಡನೆ ಪ್ರಕಾಶಿಸುತ್ತವೆ. ಆದರೆ ನೀನು ಸದ್ದಿಲ್ಲದೆ ನಿದ್ದೆ ಮಾಡು (ಎಂದು ನನ್ನ ಪ್ರಾರ್ಥನೆ).’’ ‘‘ಮತ್ತೆ ಮತ್ತೆ ಅಟ್ಟಿಸಿಕೊಂಡು ಬರುವ ಸರಮಾಪುತ್ರನೆ! ಹಣವನ್ನು ಅಪಹಾರ ಮಾಡುವ ಕಳ್ಳನನ್ನು ನೀನು ಅಟ್ಟಿಸಿಕೊಂಡು ಹೋಗುವುದು ಮಾತ್ರ ಸರಿ. ಇಂದ್ರನನ್ನು ಕೊಂಡಾಡುವ ನನ್ನನ್ನು ಏತಕ್ಕೆ ಅಟ್ಟಿಸಿಕೊಂಡು ಬರುವೆ? ಏತಕ್ಕೆ ಹಿಂಸಿಸುವೆ? ಶಾಂತನಾಗಿ ನಿದ್ರಿಸು.’’ ‘‘ನೀನೂ, ನಿನ್ನ ತಂದೆ ತಾಯಿಯವರೂ ನಿದ್ರಿಸಿ, ನಿನ್ನೊಡೆಯನೂ, ಪರಿವಾರವೂ ಎಲ್ಲರೂ ನಿದ್ರಿಸಿ.’’ ‘‘ಇಲ್ಲಿ ನಿಂತಿರುವವರು, ಕಣ್ಣಿದ್ದು ನಮ್ಮನ್ನು ನೋಡಬಲ್ಲವರು ಇವರೆಲ್ಲರೂ ಈ ಉಪ್ಪರಿಗೆಯ ಮನೆಯ ಹಾಗೆ ನಿಶ್ಚಲವಾಗಿರುವಂತೆ ನಾವು ಕಣ್ಣು ಮುಚ್ಚಿಸುತ್ತೇವೆ’’ ಇತ್ಯಾದಿ. ನಾವೂ ರಾತ್ರಿ ಮಲಗುವಾಗ ಈ ಮಂತ್ರಾರ್ಥವನ್ನು ಅನುಸಂಧಾನ ಮಾಡಿದರೆ, ನಿದ್ರೆಯಲ್ಲೂ ಪಾಪಬುದ್ಧಿಯು ನಮ್ಮನ್ನು ಪೀಡಿಸಲಾರದು. ಈಗಿನ ಪಾಶ್ಚಾತ್ಯ ಮನೋವಿಜ್ಞಾನಿಗಳಿಗಿಂತ ವಸಿಷ್ಠರು ಎಷ್ಟು ಮುಂದೆ ಹೋಗಿದ್ದರೆಂಬುದನ್ನು ಇದು ಮನದಟ್ಟು ಮಾಡಿಕೊಡುತ್ತದೆ.

    ಇಲ್ಲಿ ವರ್ಣಿತವಾಗಿರುವುದು ಕೇವಲ ಬೀದಿಯ ನಾಯಿಯಾಗಿದ್ದರೆ, ವೇದದಲ್ಲಿ ಈ ವಿಷಯ ಏಕೆ ಬಂದಿತು ಎನ್ನುವುದಕ್ಕೆ ಉತ್ತರ ಸಿಗಲಾರದು! ಅಲ್ಲದೆ ನಾಯಿಯನ್ನು ‘‘ರೋಗನಾಶಕ’’ನೆಂದೂ, ‘‘ಕಾಮರೂಪಿ’’ ಎಂದೂ ವರ್ಣಿಸಿರುವುದರ ಅರ್ಥವೇನು? ಅನ್ನಾಹಾರಾದಿ ಶುದ್ಧಿಯಿಲ್ಲದೆ ನಿತ್ಯಕರ್ವನುಷ್ಠಾನ ಪೂತರಲ್ಲದ, ಗೋಮಾಂಸ ಭಕ್ಷಕರಾದ ‘‘ವೇದವಿಮರ್ಶಕರಿಗೆ’’ ಇದು ಹೇಗೆ ತಿಳಿಯಬೇಕು? ವಸಿಷ್ಠರೆದುರು ಭಯಾನಕವಾಗಿ ಮೊನಚಾದ ಹಲ್ಲುಳ್ಳ ಬಾಯನ್ನು ತೆರೆದು ಕಚ್ಚಲು ನಿಂತಿರುವ ನಾಯಿಯ ಚಿತ್ರವಿದೆ. ಇದು ಪಾಪವನ್ನೆಸಗಲು ಹೊರಟ ಮಾನವನನ್ನು ತಡೆದು, ನಿಲ್ಲಿಸಿ ‘‘ಬೊಗಳುವ’’, ಅಂತರಂಗದ ‘‘ಜಾಗೃತಿ’’ಯ ಸಂಕೇತವಲ್ಲವೆ? (ರಾತ್ರಿಯಲ್ಲಿ ಎಚ್ಚರವಾಗಿರುವ ನಾಯಿಯು, ನಿದ್ರೆಯಲ್ಲೂ ನಮ್ಮಲ್ಲಿ ಎಚ್ಚೆತ್ತೇ ಇರುವ ಪಾಪ-ಪುಣ್ಯ ಭೀತಿಯೆಂಬ ಶಕ್ತಿಗೆ ಸಮ ಸಂಕೇತವಾಗಲಾರದೆ? ಇದು ರಕ್ಷಕನಾದ ವರುಣನ ಸೇವಕವರ್ಗಕ್ಕೆ ಸೇರಿದ್ದು, ಉಪಕರಣವೆನ್ನುವುದರಲ್ಲಿ ಬಹಳ ಅರ್ಥವಿದೆ.) ಮುಂದಿನ ಇನ್ನೆರಡು ಮಂತ್ರಗಳಲ್ಲಿ ವಸಿಷ್ಠರು, ತಮ್ಮ ಸೂರ್ಯಸಮಾನ ಶಕ್ತಿಯ ಸತ್ಯಬಲದಿಂದ ಕತ್ತಲೆಯಲ್ಲೂ ತಮ್ಮಲ್ಲಿ ‘‘ಸಂಚರಿಸುವ ಪಾಪಶಕ್ತಿಗಳ’’ ಕಣ್ಣು ಮುಚ್ಚಿಸುವುದಾಗಿ ಆಶ್ವಾಸನೆ ಕೊಟ್ಟು ಹಿಂದಿರುಗಿದ ಮೇಲೆಯೇ ‘‘ನಾಯಿಯು’’ ಬೊಗಳುವುದನ್ನು ನಿಲ್ಲಿಸಿತು ಎಂದು ತಿಳಿಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts