36 ವರ್ಷಗಳ ಹಿಂದೆ ಸಂಗೀತ ತರಗತಿ ಹೋಗಿ, ಕಣ್ಮರೆಯಾಗಿರುವ ಬಾಲಕಿಯ ಶೋಧಕ್ಕೆ ಹೀಗೆ ಮಾಡುತ್ತಾರಂತೆ…

ವಾಟಿಕನ್​ ಸಿಟಿ: ಯಾರಾದರೂ ಕಣ್ಮರೆಯಾಗಿದ್ದಾರೆ ಎಂಬ ದೂರು ಬಂದರೆ ಅದನ್ನು ದಾಖಲಿಸಿಕೊಳ್ಳುವ ಪೊಲೀಸರು ಆಯಾ ಪ್ರದೇಶದಲ್ಲಿರುವ ಎಲ್ಲ ಪೊಲೀಸ್​ ಠಾಣೆಗಳಿಗೆ ಕಾಣೆಯಾಗಿರುವವರ ಭಾವಚಿತ್ರವನ್ನು ರವಾನಿಸುತ್ತಾರೆ. ಕಾಣೆಯಾದವರ ಬಗ್ಗೆ ಏನಾದರೂ ಮಾಹಿತಿ ಸಿಕ್ಕರೆ ಫೋನ್​ ಮಾಡುವುದಾಗಿ ಹೇಳಿ ಕಳುಹಿಸುತ್ತಾರೆ. ಅದರಂತೆ, ಕಾಣೆಯಾಗಿರುವವರ ಕುಟುಂಬದವರು ಸಾಧ್ಯವಾದಷ್ಟೂ ಕಡೆ ಹುಡುಕಿ ಸುಸ್ತಾಗಿ ಸುಮ್ಮನಾಗುತ್ತಾರೆ.

ಆದರೆ, ವಾಟಿಕನ್​ ಸಿಟಿಯಲ್ಲಿ 1983ರಲ್ಲಿ ಕಾಣೆಯಾಗಿರುವ ಬಾಲಕಿಯ ಹುಡುಕಾಟಕ್ಕಾಗಿ, ಆಕೆ ಸತ್ತಿದ್ದಾಳೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಎರಡು ಸಮಾಧಿಗಳನ್ನು ಅಗೆದು, ಅಸ್ಥಿಪಂಜರಗಳನ್ನು ಹೊರತೆಗೆದು ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ. ಈ ಎರಡು ಸಮಾಧಿಗಳು 1836 ಮತ್ತು 1840ರಲ್ಲಿ ಮೃತಪಟ್ಟ ಇಬ್ಬರು ರಾಜಕುಮಾರಿಯದ್ದಾಗಿದೆ. ಈ ಎರಡರ ಪೈಕಿ ಒಂದರಲ್ಲಿ ಕಾಣೆಯಾಗಿರುವ ಬಾಲಕಿಯ ಶವವನ್ನು ಹೂತಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಸಮಾಧಿಗಳನ್ನು ಅಗೆಯಲಾಗುತ್ತಿದೆ.

ವಾಟಿಕನ್​ ಸಿಟಿಯಲ್ಲಿರುವ ಪೋಪ್​ ಅವರ ನಿವಾಸದಲ್ಲಿ ಉದ್ಯೋಗಿಯಾಗಿದ್ದ ಓರ್ಲಾಂಡಿ ಎಂಬಾತನ ಪುತ್ರಿ 15 ವರ್ಷದ ಇಮ್ಯಾನುಯಲ್​ ಓರ್ಲಾಂಡಿ ಸಂಗೀತ ತರಗತಿಗೆ ತೆರಳಿದ್ದಳು. ತರಗತಿ ಮುಗಿದ ಬಳಿಕ ಹೊರಬಂದ ಆಕೆ ದಿಢೀರ್​ ಕಣ್ಮರೆಯಾಗಿದ್ದಳು. ಇದು 1983ರಲ್ಲಿ ನಡೆದಿದ್ದ ಘಟನೆ. ಆದಾದ ನಂತರದಲ್ಲಿ ಈಕೆಗಾಗಿ ಈಕೆಯ ಕುಟುಂಬದವರು ಹುಡುಕದ ಜಾಗವಿಲ್ಲ. ಇಂದಿಗೂ ಅವರು ಆಕೆಗಾಗಿ ಹುಡುಕುತ್ತಲೇ ಇದ್ದಾರೆ.

ಹೀಗಿರುವಾಗ ಈಕೆ ಕಾಣೆಯಾಗಿ 36 ವರ್ಷಗಳ ಬಳಿಕ ಇತ್ತೀಚೆಗೆ ವ್ಯಾಟಿಕನ್​ ಸಿಟಿಯಲ್ಲಿರುವ ಟ್ಯುಟಾನಿಕ್​ ಸಿಮಿಟ್ರಿಯಲ್ಲಿರುವ ಎರಡು ಸಮಾಧಿಗಳ ಪೈಕಿ ಒಂದು ಇಮ್ಯಾನುಯಲ್​ ಓರ್ಲಾಂಡಿಯದ್ದು ಎಂಬ ಚಿಕ್ಕದೊಂದು ಸುಳಿವು ಆಕೆಯ ಸಹೋದರ ಪೀಟ್ರೋ ಓರ್ಲಾಂಡಿ ಎಂಬಾತನಿಗೆ ಸಿಕ್ಕಿದೆ. ಒಂದು ಸಮಾಧಿ ಮೇಲೆ ‘ಲುಕ್​ ವೇರ್​ ದ ಏಂಜಲ್​ ಈಸ್​ ಪಾಯಿಂಟಿಂಗ್​’ ಎಂಬ ವಾಕ್ಯ ಬರೆದಿದ್ದು, ಬಹುಶಃ ಅದುವೇ ಇಮ್ಯಾನುಯಲ್​ಳ ಸಮಾಧಿ ಇರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾಧಿಯನ್ನು ಅಗೆಯಲಾಗುತ್ತಿದೆ.

ಸಮಾಧಿಯಲ್ಲಿ ಸಿಗುವ ಅಸ್ಥಿಪಂಜರವನ್ನು ಡಿಎನ್​​ಎ ಪರೀಕ್ಷೆ ಮೂಲಕ ಅಲ್ಲಿ ಸಮಾಧಿಯಾಗಿರುವವರು ಯಾರು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಆ ಸಮಾಧಿಯಲ್ಲಿರುವ ಅಸ್ಥಿಪಂಜರ 150 ವರ್ಷ ಹಳೆಯದ್ದು ಎಂದಾದರೆ ಅದು ರಾಜಕುಮಾರಿಯರದ್ದು ಎಂದು, 50 ವರ್ಷದೊಳಗಿನದ್ದು ಎಂದಾದರೆ ಅದು ಇಮ್ಯಾನುಯಲ್​ದ್ದು ಎಂಬ ನಿರ್ಧಾರಕ್ಕೆ ಬರಲಾಗುತ್ತದೆ ಎನ್ನಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *