ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಶನಿವಾರ ಕಡಿಮೆಯಾಗಿದೆ. ನೆರೆಯಿಂದ ತೊಂದರೆಗೆ ಸಿಲುಕಿದ್ದ ಹೊಳೆಹೊನ್ನೂರು ಭಾಗ ಸಹಜ ಸ್ಥಿತಿಯತ್ತ ಮರಳಿದೆ. ಜಲಾಶಯಗಳ ಒಳಹರಿವಿನಲ್ಲೂ ಕೊಂಚ ಇಳಿಕೆಯಾಗಿದೆ. ಭದ್ರಾವತಿಯಲ್ಲಿ ನರೆ ಸ್ವಲ್ಪ ತಗ್ಗಿದೆ. ಅಲ್ಲಿ ಕಾಳಜಿ ಕೇಂದ್ರವನ್ನು ಮುಂದುವರಿಸಲಾಗಿದೆ.
ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಭದ್ರಾವತಿ ಬಸ್ ನಿಲ್ದಾಣದ ಹಿಂದಿನ ಸೇತುವೆ ಬಳಿ ಇನ್ನೂ ನೀರಿನ ಹರಿವು ಕಡಿಮೆಯಾಗಿಲ್ಲ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮನೆಗೆ ನೀರು ನುಗ್ಗಿ ಉಂಟಾಗಿರುವ ಅವಾಂತರವನ್ನು ಸರಿಪಡಿಸಿಕೊಳ್ಳುವಲ್ಲಿ ಇಲ್ಲಿನ ನಾಗರಿಕರು ನಿರತರಾಗಿದ್ದಾರೆ.
ತುಂಗಾ ನದಿಪಾತ್ರದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಶುಕ್ರವಾರ ರಾತ್ರಿವರೆಗೂ ಲಿಂಗನಮಕ್ಕಿ ಜಲಾಶಯದ ಒಳಹರಿವು ಹಾಗೂ ನದಿಗೆ ಹರಿಸುವ ನೀರಿನ ಪ್ರಮಾಣ ಪದೇಪದೆ ಬದಲಾವಣೆಯಾಗುತ್ತಿತ್ತು. ಶನಿವಾರ ಒಳಹರಿವು ಕೊಂಚ ಕಡಿಮೆಯಾಗಿರುವುದು ಜಲಾಶಯದ ಕೆಳಭಾಗದ ಜನರಲ್ಲಿ ನೆಮ್ಮದಿ ಮೂಡಿಸಿದೆ.
ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದೆ. ಮೇಲ್ದಂಡೆ ನಾಲೆ ಮೂಲಕ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗಿದೆ. ಹೀಗಾಗಿ ತುಂಗಭದ್ರಾ ನದಿಯಲ್ಲೂ ಪ್ರವಾಹದ ಆತಂಕ ದೂರಾಗಿದೆ. ಜಿಲ್ಲೆಯಲ್ಲಿ ಶನಿವಾರ ಅಲ್ಲಲ್ಲಿ ತುಂತುರು ಮಳೆಯಾಗಿದ್ದು ಬಿಟ್ಟರೆ ರಭಸವಾಗಿ ಎಲ್ಲೂ ಮಳೆಯಾಗಿಲ್ಲ.