ಸಿಡ್ನಿ: ವಿಶ್ವಶ್ರೇಷ್ಠ ಸ್ಪಿನ್ನರ್ ಆಸ್ಟ್ರೇಲಿಯಾದ ಶೇನ್ ವಾರ್ನ್, ಕ್ರಿಕೆಟ್ ಜೀವನದಲ್ಲಿ ಧರಿಸಿದ್ದ ಬ್ಯಾಗಿ ಗ್ರೀನ್ (ಆಸೀಸ್ ರಾಷ್ಟ್ರೀಯ ತಂಡದ ಆಟಗಾರರು ಧರಿಸುವ ಕಡುಹಸಿರು ಬಣ್ಣದ ಕ್ಯಾಪ್) ಹರಾಜಿನಿಂದ 4.91 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಈ ಎಲ್ಲ ಹಣವೂ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಆತಂಕ ಮೂಡಿಸಿರುವ ಕಾಡ್ಗಿಚ್ಚಿನ ಪರಿಹಾರ ನಿಧಿಗೆ ಸೇರಲಿದೆ.
ವಾರ್ನ್ 145 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಇದೇ ಬ್ಯಾಗಿ ಗ್ರೀನ್ ಧರಿಸಿ, 700ಕ್ಕೂ ಅಧಿಕ ವಿಕೆಟ್ ಸಾಧನೆ ಮಾಡಿದ್ದರು. ಒಟ್ಟು 1,007,500 ಆಸ್ಟ್ರೇಲಿಯನ್ ಡಾಲರ್ಗೆ ಅವರ ಕ್ಯಾಪ್ ಮಾರಾಟವಾಗಿದ್ದು, ಸ್ವತಃ ಶೇನ್ ವಾರ್ನ್ ಕೂಡ ಹರಾಜಿಗೆ ಬಂದ ಬಿಡ್ನಿಂದ ಅಚ್ಚರಿಗೆ ಒಳಗಾಗಿದ್ದಾರೆ. ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್ ಆಗಿರುವ ಕಾಮನ್ವೆಲ್ತ್ ಬ್ಯಾಂಕ್ ಈ ಬಿಡ್ಅನ್ನು ಜಯಿಸಿದೆ. ಇದು ಕ್ರಿಕೆಟ್ನಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾದ ಉತ್ಪನ್ನವೆನಿಸಿದೆ. 2003ರಲ್ಲಿ ದಿಗ್ಗಜ ಬ್ಯಾಟ್ಸ್ಮನ್ ಡಾನ್ ಬ್ರಾಡ್ಮನ್ರ ಬ್ಯಾಗಿ ಗ್ರೀನ್ 425,000 ಆಸ್ಟ್ರೇಲಿಯನ್ ಡಾಲರ್ (2.7 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗಿದ್ದು ಈವರೆಗಿನ ಗರಿಷ್ಠ ಮೊತ್ತ ಎನಿಸಿತ್ತು.