ವಿದ್ಯುತ್ ಅಪಘಡದಲ್ಲಿ ಬಂಡಿಪುರದ ಅರಣ್ಯ ರಕ್ಷಕ ಸಾವು

ಹೊಳೆಹೊನ್ನೂರು: ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಶನಿವಾರ ವಿದ್ಯುತ್ ಅವಘಡದಿಂದ ಬಂಡಿಪುರದ ಅರಣ್ಯರಕ್ಷಕ ಎಸ್.ಆರ್.ರಮೇಶ್ (32) ಮೃತಪಟ್ಟಿದ್ದಾರೆ.

ಮೈದೊಳಲಿನಲ್ಲಿ ಶನಿವಾರ ಬೆಳಗ್ಗೆ ಮನೆಯ ಹಿಂದಿರುವ ನೀರಿನ ಪಂಪ್​ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಈ ಅವಘಡ ಸಂಭವಿಸಿದೆ. ಕೂಡಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ವರ್ಷಗಳಿಂದ ಬಂಡಿಪುರದಲ್ಲಿ ಅರಣ್ಯ ರಕ್ಷಕರಾಗಿ ರಮೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಲ್ಲಿ ಪಾಲ್ಗೊಳ್ಳಲು ಮೈದೊಳಲಿಗೆ ಆಗಮಿಸಿದ್ದರು. ಮೈದೊಳಲಿನ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ರಾಘವೇಂದ್ರಸ್ವಾಮಿ ಅವರ ಪುತ್ರರಾಗಿರುವ ರಮೇಶ್ ಮೇನಲ್ಲಿ ಹೊನ್ನಾಳಿ ತಾಲೂಕಿನ ಹಳೆದೇವರ ಹೊನ್ನಾಳಿ ಗ್ರಾಮದ ಯುವತಿ ಜತೆ ವಿವಾಹವಾಗಿದ್ದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ಅಂತ್ಯಕ್ರಿಯೆ ನಡೆಯಿತು.