ವಿವಿಧ ಬೇಡಿಕೆ, ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

ಬೆಳಗಾವಿ: ಕಳಸಾ ಬಂಡೂರಿ ನಾಲೆ ಕಾಮಗಾರಿ ಚಾಲನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯಕ್ಕಾಗಿ ಕಳಸಾ ಬಂಡೂರಿ ನಾಲಾ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆದರೆ, ಯೋಜನೆ ಮಾತ್ರ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ.

ಈಗಾಗಲೇ ನ್ಯಾಯಾ ಧಿಕರಣವು ಕರ್ನಾಟಕ 13.4 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ ನಿರ್ಲಕ್ಷೃ ಮಾಡುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ತಕ್ಷಣ ಕಳಸಾ ಬಂಡೂರಿ ನಾಲೆಗೆ ಚಾಲನೆ ನೀಡುವ ಮೂಲಕ ಮೀಸಲಿಟ್ಟಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಿರ್ಲಕ್ಷೃ ತೋರಿದರೆ ನ್ಯಾಯಾಧಿಕರಣ ಮುಂದಿನ ಆದೇಶದಲ್ಲಿ ನೀರನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿದೆ.

ಹಾಗಾಗಿ ಮೈತ್ರಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಮನವಿ ಮೂಲಕ ವಿನಂತಿಸಿದರು. ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ಸಂಜಯ, ಶಂಕರ ಜಾಲಿಗಾರ, ಅಜಯ ಸನದಿ, ಪ್ರಮೋದ ವಡ್ಡರ ಮತ್ತಿರರು ಉಪಸ್ಥಿತರಿದ್ದರು.