ಕಾಶಿಯಲ್ಲಾದ ಅಭಿವೃದ್ಧಿ ಅಮೇಠಿಯಲ್ಲಿ ಇಲ್ಲವೇಕೆ?

ಮನೆ ಬಿಟ್ಟು ದೂರವಿರುವ ಬಹುತೇಕರಿಗೆ ‘ಪೂರ್ವಜರ ಆಸ್ತಿ’ ಅಭಿವೃದ್ಧಿಪಡಿಸುವ ಉಮೇದಿ ಇರದು. ಆದರೆ, ಅದರ ಮೇಲಿನ ಹಕ್ಕು ಬಿಟ್ಟು ಕೊಡುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಸ್ಥಿತಿ ಇದಕ್ಕೆ ಹೊರತಾಗಿಲ್ಲ. ಮತ್ತೊಂದೆಡೆ, ಜನಪ್ರತಿನಿಧಿಯಾದವರು ಕ್ಷೇತ್ರದ ಬಗ್ಗೆ ಹೊಂದಿರಬೇಕಾದ ಕಾಳಜಿ, ಅಭಿವೃದ್ಧಿಪರ ನಿಲುವಿಗೆ ಸಾಕ್ಷಿ ಎನ್ನುವಂತಿದೆ ಪ್ರಧಾನಿ ಮೋದಿ 5 ವರ್ಷಗಳಿಂದ ಪ್ರತಿನಿಧಿಸುತ್ತಿರುವ ವಾರಾಣಸಿ. ಎರಡೂ ಕ್ಷೇತ್ರಗಳ ಚಿತ್ರಣ ಇಲ್ಲಿದೆ.

| ರಾಘವ ಶರ್ಮ ನಿಡ್ಲೆ ಉತ್ತರ ಪ್ರದೇಶ

ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಾಣಸಿ ಇಂದು ಮತದಾನಕ್ಕೆ ಸಾಕ್ಷಿಯಾಗುತ್ತಿದೆ. ಹೀಗಾಗಿ ಇಡೀ ದೇಶದ ಕಣ್ಣು ಕಾಶಿಯ ಮೇಲಿದೆ. ಮೋದಿ ಬಂದ ಮೇಲೆ ವಾರಾಣಸಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೆ ಹಣಕಾಸು ನೆರವು ಹರಿದು ಬಂದಿದೆ. ಅಭಿವೃದ್ಧಿ ಚಟುವಟಿಕೆಗಳು ಭರದಿಂದ ಸಾಗಿವೆ. ಧಾರ್ವಿುಕ ನಗರಿ ಮೊದಲ ಬಾರಿ ಪರಿವರ್ತನೆಗೆ ತೆರೆದುನಿಂತಿದೆ. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿದ್ದರೆ ಸಂಸದ ಕ್ಷೇತ್ರವೊಂದನ್ನು ಹೇಗೆ ಬದಲಿಸಬಹುದು ಎಂಬುದಕ್ಕೆ ವಾರಾಣಸಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ವಿಶೇಷ ಎಂದರೆ, ಇಲ್ಲಿನ ಕೆಲ ಮುಸಲ್ಮಾನರು ಕೂಡ ಕಾಶಿಯಲ್ಲಿ ಅಭಿವೃದ್ಧಿ ಎಂದರೆ ಏನೆಂಬುದು ಈಗ ಗೊತ್ತಾಗುತ್ತಿದೆ ಎಂದು ಹೇಳುತ್ತಿರುವುದು!

ಕಾಶಿಯಿಂದ 175 ಕಿಮೀ ದೂರದಲ್ಲಿದೆ ಮತ್ತೊಂದು ಗಣ್ಯಾತಿಗಣ್ಯ ಕ್ಷೇತ್ರ ಅಮೇಠಿ. ರೈಲು ನಿಲ್ದಾಣದಿಂದ ಹೊರಬಂದು ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ತನ್ನ ಸಣ್ಣ ಹೋಟೆಲ್​ನಲ್ಲಿ ಗ್ರಾಹಕರಿಗೆ ಚಹಾ ಮತ್ತು ಪೂರಿಪಲ್ಯ ನೀಡುತ್ತಿದ್ದ ಕಿಶೋರ್ ಕುಮಾರ್, ‘ನಾನು ಕಾಶಿಗೆ ಆಗಾಗ ಹೋಗುತ್ತಿರುತ್ತೇನೆ. 5 ವರ್ಷದಲ್ಲಿ ಬಹಳ ಬದಲಾವಣೆಗಳಾಗಿರುವುದನ್ನು ಕಂಡಿದ್ದೇನೆ. ಆದರೆ ನಮ್ಮ ಅಮೇಠಿಯ ದುಸ್ಥಿತಿ ನೋಡಿ. ಮೂಲಸೌಲಭ್ಯಗಳಿಲ್ಲ, ಹಳ್ಳಿಗಳಲ್ಲಿ ಸರಿಯಾದ ರಸ್ತೆಯಿಲ್ಲ, ಗುಣಮಟ್ಟದ ಶಿಕ್ಷಣ ಕೇಂದ್ರಗಳಿಲ್ಲ. ಸಂಸದರಂತೂ ಅಪರೂಪದ ಅತಿಥಿ ಎಂಬಂತೆ ಬಂದು ಹೋಗುತ್ತಾರೆ’ ಎಂದು ಬೇಸರ ಹೊರಹಾಕಿದ. ಅಲಹಾಬಾದ್ ಕುಂಭಮೇಳ ನಿರ್ವಹಣೆ ಹಾಗೂ ಕಾಶಿ ಅಭಿವೃದ್ಧಿ ನೋಡಿದ ಕಿಶೋರ್, ಅಮೇಠಿಗೆ ಈ ಭಾಗ್ಯ ಯಾವಾಗ ಎಂಬ ಪ್ರಶ್ನೆ ಮುಂದಿಟ್ಟ. ದಿಲ್ಲಿಯಲ್ಲಿ ಕೂತು ಅಭಿವೃದ್ಧಿ ಮಂತ್ರ ಪಠಿಸುವ ರಾಹುಲ್ ಗಾಂಧಿ 15 ವರ್ಷಗಳಲ್ಲಿ ಅಮೇಠಿಗೆ ನೀಡಿದ ಕೊಡುಗೆಯೇನು ಎಂಬ ನಮ್ಮ ಪ್ರಶ್ನೆಗೆ ಸುತ್ತಮುತ್ತ ಕೂತವರು ಮುಖಮುಖ ನೋಡಿಕೊಳ್ಳುತ್ತಿದ್ದರು. ವಾರಾಣಸಿಯಂತೆ ಅಮೇಠಿ ಪ್ರವಾಸೀ ತಾಣವೇನಲ್ಲ. ಹಾಗಂತ ಅಭಿವೃದ್ಧಿ ವಂಚಿತ ಕ್ಷೇತ್ರವಾಗಿಯೇ ಉಳಿದುಕೊಳ್ಳಬೇಕು ಎಂದೇನಿಲ್ಲ.

1967ರಿಂದ ಈ ಕ್ಷೇತ್ರದ ಮತದಾರರು ಕಾಂಗ್ರೆಸ್ ಸಂಸದರನ್ನು ಆಯ್ಕೆ ಮಾಡುತ್ತಿದ್ದಾರೆ. 1998-99ರ ಮಧ್ಯೆ 1 ವರ್ಷ ಬಿಜೆಪಿಯಿಂದ ಸಂಜಯ್ ಸಿನ್ಹಾ ಆಯ್ಕೆಯಾಗಿದ್ದು ಬಿಟ್ಟರೆ 51 ವರ್ಷಗಳಿಂದ ಇದು ಕಾಂಗ್ರೆಸ್ ಭದ್ರಕೋಟೆ. 32 ವರ್ಷಗಳ ಕಾಲ ಗಾಂಧಿ ಮನೆತನದವರೇ ಕ್ಷೇತ್ರ ಪ್ರತಿನಿಧಿಸಿದ್ದಾರೆ. 1980ರಲ್ಲಿ ಸಂಜಯ್ ಗಾಂಧಿ, 81ರಿಂದ 91ರ ತನಕ ರಾಜೀವ್ ಗಾಂಧಿ, 1991ರಿಂದ 2004ರ ತನಕ ಸೋನಿಯಾ ಗಾಂಧಿ ಹಾಗೂ ನಂತರದ 15 ವರ್ಷಗಳಲ್ಲಿ ರಾಹುಲ್ ಗಾಂಧಿ ಅಮೇಠಿ ಜನರ ಬೆಂಬಲಕ್ಕೆ ಪಾತ್ರರಾಗಿದ್ದಾರೆ. ಹಾಗಾದರೆ ಇಷ್ಟು ವರ್ಷಗಳ ಅವಧಿಯಲ್ಲಿ ಗಾಂಧಿ ಕುಟುಂಬ ಇಲ್ಲಿ ಮಾಡಿದ್ದೇನು ಎಂಬ ಪ್ರಶ್ನೆ ಇಲ್ಲಿಗೆ ಭೇಟಿ ನೀಡಿದ ಪ್ರತಿಯೊಬ್ಬನಿಗೂ ಕಾಡಿದೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬರುವವರೆಗೆ ಕಾಂಗ್ರೆಸ್ ಪಕ್ಷವೇ ಇಲ್ಲಿ ಅಧಿಕಾರದಲ್ಲಿತ್ತೆನ್ನುವುದು ಗಮನಾರ್ಹ.

ಹಾಗೆ ನೋಡಿದರೆ 2014ರ ತನಕ ವಾರಾಣಸಿಯದ್ದೂ ಇದೇ ಕಥೆ. ಆದರೆ ಮೋದಿ ಕಾರಣದಿಂದ ವಾರಾಣಸಿ ಬದಲಾವಣೆ ಬಗ್ಗೆ ಈಗ ವಿದೇಶಗಳೂ ಮಾತನಾಡುತ್ತಿವೆ. ಕಾಶಿ ಕಾರಿಡಾರ್ ಮೂಲಕ ಚಹರೆಯೇ ಬದಲಾಗುತ್ತಿದೆ. ಇಲ್ಲಿನ ರಸ್ತೆಗಳೇ ಅಭಿವೃದ್ಧಿಯ ಯಶೋಗಾಥೆ ಹೇಳುತ್ತಿವೆ. ಕಾಶಿಯಿಂದ ಗಂಗಾ ನದಿ ಮೂಲಕ ಕೋಲ್ಕತಕ್ಕೆ ಜಲ ಸಾರಿಗೆ ಆರಂಭಗೊಂಡಿರುವ ಬಗ್ಗೆ ಕಾಶಿ ಮಂದಿಗೆ ಹೆಮ್ಮೆ ಇದೆ. ಎಲ್ಲಕ್ಕಿಂತ ಮೇಲಾಗಿ 5 ವರ್ಷಗಳಿಂದ ಯಾರಿಗೂ ಬೇಡವಾಗಿದ್ದ ಮಡ್ವಾಡಿ ರೈಲ್ವೆ ನಿಲ್ದಾಣ ಇಂದು ವಿಶ್ವ ದರ್ಜೆಯ ನಿಲ್ದಾಣವಾಗಿ ಬದಲಾಗಿದೆ. 5 ವರ್ಷದ ಹಿಂದೆ ರಾತ್ರಿ 10 ಗಂಟೆ ನಂತರ ಇಲ್ಲಿ ಓಡಾಡುವುದು ಅಪಾಯಕಾರಿ ಎಂದುಕೊಂಡಿದ್ದ ಜನರಲ್ಲಿ ಈಗ ಸುರಕ್ಷಿತ ಭಾವ ಕಾಣುತ್ತಿದೆ. ವಾರಾಣಸಿ-ದೆಹಲಿ ಮಧ್ಯೆ 8 ಗಂಟೆ ಅಂತರದಲ್ಲಿ ಗಮ್ಯ ತಲುಪುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಓಡಾಡುತ್ತಿದೆ. ಉನ್ನತ ದರ್ಜೆಯ ಆಸ್ಪತ್ರೆಗಳು ಸ್ಥಾಪನೆಗೊಂಡಿವೆ.

ಮತದಾರನೊಬ್ಬ ತನ್ನ ಕ್ಷೇತ್ರದ ಸಂಸದರಿಂದ ಇನ್ನೇನು ತಾನೆ ನಿರೀಕ್ಷಿಸುತ್ತಾನೆ? ಅಮೇಠಿ ಪಟ್ಟಣದ ಪುಸ್ತಕ ಅಂಗಡಿಯಲ್ಲಿ ಸಿಕ್ಕ ಶಿವಶಂಕರ ತಿವಾರಿ ಎಂಬ ಹಿರಿಯ ಗ್ರಾಹಕರು ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್​ಗೆ ಮತ ಹಾಕುತ್ತಿದ್ದಾರೆ. ಈ ಬಾರಿ ಬದಲಾವಣೆ ಬೇಕು ಎನ್ನುವ ಅವರು, ‘ಮುಲಾಯಂ ಸಿಂಗ್ ಯಾದವ್ ಮೈನ್​ಪುರಿ ಲೋಕಸಭೆ ಕ್ಷೇತ್ರ ಹಾಗೂ ಹುಟ್ಟೂರಾದ ಸೈಫೈಯನ್ನು ಹೇಗೆ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ನೋಡಿ ರಾಹುಲ್ ಕಲಿತುಕೊಳ್ಳಬೇಕು. ಆದರೆ ಅವರಲ್ಲಿ ಅಭಿವೃದ್ಧಿಯ ಕಲ್ಪನೆಗಳೇ ಇಲ್ಲ, ದೂರದೃಷ್ಟಿಯೂ ಇಲ್ಲ. 15 ವರ್ಷ ಕಾದು ರೋಸಿ ಹೋಗಿದ್ದೇವೆ’ ಎಂದು ಅಸಮಾಧಾನ ಹೊರಹಾಕಿದರು.

ಅಮೇಠಿ ಹೃದಯ ಭಾಗದಲ್ಲಿರುವ ಶೌಚಗೃಹ ಕ್ಷೇತ್ರದ ಶೋಚನೀಯ ಸ್ಥಿತಿಗೆ ಕನ್ನಡಿ. ಇಲ್ಲಿ ಸ್ವಚ್ಛತೆ ಬಿಡಿ, ಕೈ ಕಾಲು ಹಾಕಲಾಗದ ಸ್ಥಿತಿ. ಶೌಚಗೃಹ ಹಾಗೂ ಪಕ್ಕದ ಕೊಠಡಿಯನ್ನೇ ಸಫಾಯಿ ಕಾರ್ವಿುಕರು ತಮ್ಮ ಮನೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತವೂ ತಲೆಕೆಡಿಸಿಕೊಂಡಿಲ್ಲ. 2014ಕ್ಕೂ ಮುನ್ನ ಈ ಶೌಚಗೃಹಕ್ಕೆ ಇದೇ ಗತಿಯಿತ್ತು. ಈಗಲೂ ಮುಂದುವರಿದಿದೆ. 5 ವರ್ಷಗಳ ಸಂಸದ ನಿಧಿಯಲ್ಲಿ ಸಣ್ಣ ಪ್ರಮಾಣದ ಮೊತ್ತವನ್ನು ಶೌಚಗೃಹದ ಅಭಿವೃದ್ಧಿಗೆ ವ್ಯಯಿಸಿದ್ದರೆ ಸುತ್ತಮುತ್ತಲಿನ ಸಾರ್ವಜನಿಕರಾದರೂ ರಾಹುಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೇನೋ!

ಪ್ರಧಾನಿಯಾಗುತ್ತಿದ್ದಂತೆಯೇ ಮೋದಿ ಮೊದಲು ಮಾಡಿದ್ದು ಕಾಶಿಯ ರವೀಂದ್ರಪುರಿಯಲ್ಲಿ ಸಂಸದರ ಕಚೇರಿ ಸ್ಥಾಪನೆ. ಪ್ರತಿ ಶನಿವಾರದಂದು ಕೇಂದ್ರ ಸರ್ಕಾರದ ಸಚಿವರೊಬ್ಬರು ಈ ಕಚೇರಿಗೆ ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜನರ ಪ್ರತಿ ಪತ್ರಕ್ಕೂ ಉತ್ತರ ನೀಡಲಾಗುತ್ತದೆ ಮತ್ತು ಸಂಬಂಧಪಟ್ಟ ಇಲಾಖೆಗೆ ಪತ್ರ ಕಳುಹಿಸಿ ಕ್ರಮ ಕೈಗೊಂಡ ವರದಿಯನ್ನು ಪ್ರಧಾನಿ ಕಚೇರಿಗೆ ಕಳುಹಿಸಬೇಕು ಎಂದು ನಿರ್ದೇಶಿಸಲಾಗುತ್ತದೆ. ತಮ್ಮ ಕೆಲಸದ ಮೇಲೆ ಪ್ರಧಾನಿ ಕಚೇರಿಯ ಕಣ್ಗಾವಲು ಇರುವುದು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದರಿಂದಲೇ ಎಲ್ಲ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಗಿಸಲಾಗುತ್ತದೆ ಮತ್ತು ಪಾರದರ್ಶಕತೆ ಬರಲೂ ಇದು ಸಹಕಾರಿಯಾಗಿದೆ ಎಂದು ಬನಾರಸ್ ಹಿಂದು ವಿವಿಯ ಪ್ರಾಧ್ಯಾಪಕ ಬಸವಪ್ರಭು ಜಿರ್ಲಿ ಮಾಹಿತಿ ನೀಡುತ್ತಾರೆ. ಅಮೇಠಿಯಲ್ಲಿ ಕೂಡ ಕಾಂಗ್ರೆಸ್ ಸಂಸದರ ಕಚೇರಿಯಿದೆ. ಆದರೆ, ಸಂಸದರ ಪ್ರತಿನಿಧಿಗಳು ಕೈಗೆಟಕುವುದಿಲ್ಲ. ಸಿಕ್ಕರೂ ಸರಿಯಾಗಿ ಉತ್ತರಿಸುವ ಸೌಜನ್ಯವನ್ನೂ ತೋರುವುದಿಲ್ಲ ಎಂದು ದೂರುತ್ತಾರೆ ಸ್ಥಳೀಯರು. ಇನ್ನು, ರಾಹುಲ್ ಗಾಂಧಿಯವರ ಸಂಸದ ಆದರ್ಶ ಗ್ರಾಮ ಜಗದೀಶಪುರದಲ್ಲಿಯೂ ಆದರ್ಶ ಎನ್ನುವಂಥದ್ದು ಏನೂ ಇಲ್ಲ ಎಂಬುದು ಆ ಗ್ರಾಮಕ್ಕೆ ಕಾಲಿಟ್ಟ ಕೂಡಲೇ ಅರ್ಥವಾಗಿಬಿಡುತ್ತದೆ. ಅಮೇಠಿ ಮತ್ತು ರಾಯ್ ಬರೇಲಿಯಲ್ಲಿ ಗಾಂಧಿ ಮನೆತನದೊಂದಿಗೆ ಮತದಾರರಿಗೆ ಭಾವನಾತ್ಮಕ ನಂಟಿದೆ. ಹೀಗಾಗಿ, ಕೆಲಸ ಮಾಡದಿದ್ದರೂ ಕಾಂಗ್ರೆಸ್​ಗೇ ನಮ್ಮ ಮತ ಎಂದು ಅನೇಕರು ಹೇಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಚುನಾವಣಾ ಪ್ರಚಾರ ಮಾಡುವ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಬಿಜೆಪಿಗೆ ಬಯ್ಯುತ್ತಾ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಹಾಕುತ್ತಾರೆ. ಈ ಸಲ ವಾರಾಣಸಿಯಲ್ಲಿ ಮೋದಿ ಗೆಲುವು ನಿಶ್ಚಿತವಾಗಿದ್ದರೂ ಅಮೇಠಿಯಲ್ಲಿ ರಾಹುಲ್ ಗೆಲುವು ಮರುಕಳಿಸುವುದೇ ಎಂಬುದಕ್ಕೆ ಮೇ 23ರಂದು ಉತ್ತರ ಸಿಗಲಿದೆ.