PHOTOS: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಕಲ ರೀತಿಯಲ್ಲೂ ಶೃಂಗಾರಗೊಂಡಿರುವ ವಾರಾಣಸಿ

ವಾರಾಣಸಿ: ತಾವು ತುಂಬಾ ಪ್ರೀತಿಸಿ, ಗೌರವಿಸುವ ಹಾಗೂ ಭಾರಿ ನಿರೀಕ್ಷೆಗಳೊಂದಿಗೆ ಮತ ಹಾಕಿ ಭರ್ಜರಿ ಅಂತರದಿಂದ ಗೆಲ್ಲುವಂತೆ ಮಾಡಿ ಸಂಸತ್​ಗೆ ಕಳುಹಿಸಿರುವ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ವಾರಾಣಸಿ ಸಕಲ ರೀತಿಯಲ್ಲೂ ಶೃಂಗಾರಗೊಂಡು ಕಂಗೊಳಿಸುತ್ತಿದೆ.

ಎಲ್ಲ ರಸ್ತೆಗಳು ತಳಿರು ತೋರಣ, ಬಿಜೆಪಿ ಪಕ್ಷದ ಕೇಸರಿ ಬಣ್ಣದ ಬಲೂನ್​ಗಳು ಸೇರಿ ನಾನಾ ಬಗೆಯ ಶೃಂಗಾರ ವಸ್ತುಗಳಿಂದ ಶೃಂಗಾರಗೊಂಡು ನಿಯೋಜಿತ ಪ್ರಧಾನಿಯ ಸ್ವಾಗತಕ್ಕೆ ವಾರಾಣಸಿ ತನ್ನನ್ನು ತಾನು ಸಜ್ಜುಗೊಳಿಸಿಕೊಂಡಿದೆ.

ಕೆಲವು ರಸ್ತೆಗಳಲ್ಲಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ ಅವರನ್ನು ಸ್ವಾಗತಿಸುವ ಭಿತ್ತಿಪತ್ರಗಳು ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳ ಆಯಕಟ್ಟಿನ ಜಾಗದಲ್ಲಿರುವ ಕಟ್ಟಡಗಳ ಮಾಡಿನ ಮೇಲೆ ಬೃಹತ್​ ಟಿವಿ ಪರದೆಗಳನ್ನು ಅಳವಡಿಸಲಾಗಿದೆ. ಕಾಶಿ ವಿಶ್ವನಾಥನ ದೇಗುಲದ ಪ್ರವೇಶದ್ವಾರದಲ್ಲೂ ಬೃಹತ್​ ಟಿವಿ ಪರದೆಯನ್ನು ಅಳವಡಿಸಲಾಗಿದ್ದು, ನಿಯೋಜಿತ ಪ್ರಧಾನಿ ಅವರ ಮೆರವಣಿಗೆಯ ಪ್ರತಿಕ್ಷಣದ ದೃಶ್ಯಗಳನ್ನು ನೇರವಾಗಿ ಪ್ರಸಾರ ಮಾಡಲಾಗುತ್ತದೆ.

ವಾರಾಣಸಿಯ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಅರೆಮಿಲಿಟರಿ ಪಡೆ ಸಿಬ್ಬಂದಿ ನಿಯೋಜಿತರಾಗಿದ್ದು, ಸೋಮವಾರ ಬೆಳಗ್ಗೆ ಫ್ಲಾಗ್​ಮಾರ್ಚ್​ ಕೂಡ ಮಾಡಿದರು. (ಏಜೆನ್ಸೀಸ್​)



Leave a Reply

Your email address will not be published. Required fields are marked *