ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟಕ್ಕೆ ನೀತಿಸಂಹಿತೆ ಅಡ್ಡಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆ ಖರೀದಿ ಆಸೆ ಹೊಂದಿದ್ದ ನಾರಿಯರಿಗೆ ನಿರಾಸೆ

ಮೈಸೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಕಡಿಮೆ ಬೆಲೆಗೆ ರೇಷ್ಮೆ ಸೀರೆ ಖರೀದಿಸಬೇಕು ಎನ್ನುವ ಹೆಂಗಳೆಯರ ಆಸೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನೀತಿಸಂಹಿತೆ ಅಡ್ಡಿಯಾಗಿದೆ.

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದಿಂದ 7ರಿಂದ 15 ಸಾವಿರ ರೂ.ವರೆಗಿನ ರೇಷ್ಮೆ ಸೀರೆಯನ್ನು ಕೇವಲ 4 ಸಾವಿರ ರೂ.ಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿತ್ತು. ಈ ಬಗ್ಗೆ ರೇಷ್ಮೆ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಮೊದಲೇ ಘೋಷಣೆ ಮಾಡಿದ್ದರು. ಅದರಂತೆ ಸ್ವಾತಂತ್ರೃ ದಿನವಾದ ಆಗಸ್ಟ್ 15ರಂದು ಒಂದು ದಿನ ಮಾತ್ರ 7 ಸಾವಿರ ರೂ.ಮೌಲ್ಯದ ಸೀರೆಯನ್ನು 4 ಸಾವಿರ ರೂ.ಗೆ ಮಾರಾಟ ಮಾಡಲು ನಿರ್ಧರಿಸಲಾಗಿತ್ತು.

ನಗರದ ರೇಷ್ಮೆ ಕಾರ್ಖಾನೆ ಆವರಣ, ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕೆಎಸ್‌ಐಸಿ ಷೋ ರೂಮ್, ಕೆಂಪೇಗೌಡ ರಸ್ತೆಯಲ್ಲಿರುವ ಎಫ್‌ಕೆಸಿಸಿ ಕಟ್ಟಡದ ಸಿಲ್ಕ್ ಷೋರೂಂ, ಚನ್ನಪಟ್ಟಣದ ಸ್ಪನ್‌ಸಿಲ್ಕ್ ಷೋರೂಮ್, ದಾವಣಗೆರೆಯ ಮಹಾನಗರಪಾಲಿಕೆ ಕಟ್ಟಡದಲ್ಲಿರುವ ಕೆಎಸ್‌ಐಸಿ ಷೋರೂಂಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮೊದಲೇ ಘೋಷಣೆ ಮಾಡಿದಂತೆ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡಲು ಎಲ್ಲ ಕ್ರಮಕೈಗೊಂಡಿದ್ದರೂ ಈಗ ಚುನಾವಣೆ ನೀತಿಸಂಹಿತೆ ಅಡ್ಡಿಯಾದ್ದರಿಂದ ಮಾರಾಟದ ದಿನಾಂಕವನ್ನು ಮುಂದೂಡಲಾಗಿದೆ. ಈ ಮಾಹಿತಿ ಅರಿಯದೆ ಬಂದ ನೂರಾರು ಮಹಿಳೆಯರು ನಿರಾಸೆಯಿಂದ ವಾಪಸ್ ತೆರಳುವಂತಾಯಿತು.

ಜಿಲ್ಲಾಧಿಕಾರಿಗೆ ನಿರ್ದೇಶನ:  ವರಮಹಾಲಕ್ಷ್ಮಿಹಬ್ಬ ಹತ್ತಿರವಾಗುತ್ತಿರುವುದರಿಂದ ಸೀರೆ ಮಾರಾಟಕ್ಕೆ ಅನುಮತಿ ನೀಡುವ ಕುರಿತು ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವ ಸಾ.ರಾ.ಮಹೇಶ್ ನಿರ್ದೇಶನ ನೀಡಿದ್ದಾರೆ.
ಹಬ್ಬ ಇರುವ ಕಾರಣ ಜನರು ಸೀರೆ ಕೊಳ್ಳುವುದರಿಂದ ಅದಕ್ಕೆ ಅನುಮತಿ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ವರಮಹಾಲಕ್ಷ್ಮಿಹಬ್ಬಕ್ಕೆ ಬಂಪರ್: ಪೂರ್ವಸಿದ್ಧತೆ ಇಲ್ಲದಿದ್ದರಿಂದ ಸ್ವಾತಂತ್ರೃ ದಿನಾಚರಣೆಯಂದು ಸೀರೆ ಮಾರಾಟಕ್ಕೆ ಅವಕಾಶ ಆಗಲಿಲ್ಲ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆ.24ರಂದು ಒಂದು ದಿನ ಮಾತ್ರ 14 ಸಾವಿರ ರೂ.ಬೆಲೆಯ ಸೀರೆಯನ್ನು 4 ಸಾವಿರ ರೂ.ಗೆ ಮಾರಾಟ ಮಾಡಲು ನಿಗಮ ಉದ್ದೇಶಿಸಿದೆ. ಈ ಕಾರ್ಯಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಆ.21ರಂದು ಚನ್ನಪಟ್ಟಣದಲ್ಲಿ ಚಾಲನೆ ನೀಡಲು ಉದ್ದೇಶಿಸಲಾಗಿದೆ.

ಆಧಾರ್ ಕಾರ್ಡ್ ಕಡ್ಡಾಯ: ಕಡಿಮೆ ಬೆಲೆಗೆ ದುಬಾರಿ ದರದ ರೇಷ್ಮೆ ಸೀರೆಗಳು ಅರ್ಹರಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಸೀರೆ ಕೊಳ್ಳುವ ಮಹಿಳೆಯರು ಆಧಾರ್ ಕಾರ್ಡ್ ತರುವುದು ಕಡ್ಡಾಯಗೊಳಿಸಲಾಗಿದೆ. ವ್ಯಾಪಾರಸ್ಥರು ಕಡಿಮೆ ಬೆಲೆಗೆ ಸೀರೆಕೊಂಡು ಲಾಭ ಗಳಿಸುವ ಉದ್ದೇಶ ಇರುವುದರಿಂದ ಸಚಿವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಒಂದು ಆಧಾರ್ ಕಾರ್ಡ್‌ಗೆ ಒಂದು ಸೀರೆಯನ್ನು ಮಾತ್ರ ನೀಡಲಾಗುವುದು. ಅದು ಒಮ್ಮೆ ಕೊಂಡರೆ ಮತ್ತೆ ಅದೇ ಆಧಾರ್ ಕಾರ್ಡ್‌ನಲ್ಲಿ ಸೀರೆ ಕೊಳ್ಳಲು ಸಾಧ್ಯವಿಲ್ಲ, ಕಂಪ್ಯೂಟರ್‌ನಲ್ಲಿ ಆಧಾರ್ ಸಂಖ್ಯೆ ನಮೂದಿಸಿಕೊಳ್ಳುವುದರಿಂದ ಕಾಳಸಂತೆಯಲ್ಲಿ ಮಾರಾಟ ತಡೆಯುವುದು ಸರ್ಕಾರದ ಉದ್ದೇಶವಾಗಿದೆ.

 

ಸ್ಥಳೀಯ ಸಂಸ್ಥೆ ಚುನಾವಣೆ ನೀತಿಸಂಹಿತೆ ಘೋಷಣೆಯಾಗಿರುವುದರಿಂದ ವಿರೋಧ ವ್ಯಕ್ತವಾಗುವ ದೃಷ್ಟಿಯಲ್ಲಿ ಮಾರಾಟವನ್ನು ಮುಂದೂಡಲಾಗಿದೆ. ಚುನಾವಣಾ ಆಯೋಗದಿಂದ ಅನುಮತಿ ಪಡೆದು ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು.
ಸಾ.ರಾ.ಮಹೇಶ್
ರೇಷ್ಮೆ, ಪ್ರವಾಸೋದ್ಯಮ ಸಚಿವ.