More

  ಮಹಿಳೆಯರ ರೋಲ್ ಮಾಡೆಲ್ ವಾಣಿಶ್ರೀ: ಸ್ತ್ರೀಯರ ಆರ್ಥಿಕಾಭಿವೃದ್ಧಿಗೆ ಭದ್ರ ನೆಲೆ ಕಲ್ಪಿಸಿದ ನಾಯಕಿ

  ಬೆಂಗಳೂರು ನಗರ ಜಿಪಂ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ ನಂತರದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ವಾಣಿಶ್ರೀ ವಿಶ್ವನಾಥ್. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಮೂಹದ ಜೀವನಭದ್ರತೆ ಒದಗಿಸಿ, ಅವರ ಸ್ವಾವಲಂಬನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಯಲಹಂಕದ ಸಿಂಗನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್​ನ ಅಧ್ಯಕ್ಷ ಸ್ಥಾನವನ್ನು 5 ಬಾರಿ ಪ್ರತಿನಿಧಿಸಿ ಗ್ರಾಮೀಣ ಭಾಗದ ರೈತರು, ಬಡವರು ಹಾಗೂ ಎಲ್ಲ ವರ್ಗಗಳ ಜನರಿಗೆ ಸಾಲಸೌಲಭ್ಯ ಒದಗಿಸಿ ಗ್ರಾಮೀಣಾಭಿವೃದ್ಧಿ ಕೆಲಸವನ್ನು ಸದ್ದಿಲ್ಲದೆ ನಡೆಸಿದ್ದಾರೆ. ತಮ್ಮ ಜತೆ ಹತ್ತಾರು ಸಂಘಗಳ ಪದಾಧಿಕಾರಿಗಳ ತಂಡದೊಂದಿಗೆ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಮಹಿಳೆಯರನ್ನು ಸಂಘಟಿಸುವಲ್ಲಿ ನಿರತರಾಗಿದ್ದಾರೆ. ತಮ್ಮ ಜೀವನಸಂಗಾತಿ, ಶಾಸಕ ಎಸ್.ಆರ್. ವಿಶ್ವನಾಥ್ ಜತೆಗೂಡಿ ‘ವಿಶ್ವವಾಣಿ ಫೌಂಡೇಶನ್’ ಮೂಲಕ ಯಲಹಂಕ ವಿಧಾನಸಭಾ ಕ್ಷೇತ್ರದೆಲ್ಲೆಡೆ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತ ಬಂದಿದ್ದಾರೆ. ಇಂಥ ವಿಶಿಷ್ಟ ಸಾಧಕಿಗೆ ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಗೌರವ ನೀಡಿದೆ.

  ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ- ಎಂಬ ನಾಣ್ನುಡಿ ಇದೆ. ಅದರಲ್ಲೂ ಪದವೀಧರೆ ಆಗಿದ್ದಲ್ಲಿ ಇಡೀ ಹಳ್ಳಿ/ ಪಟ್ಟಣಕ್ಕೊಂದು ಬೆಳಕಿಂಡಿ ಎಂಬ ಮಾತಿದೆ. ಇದರನ್ವಯ ತಾನು ವಾಸಿಸುವ ಪ್ರದೇಶದಲ್ಲಿ ಮಹಿಳಾ ಸಮುದಾಯವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವಿರತವಾಗಿ ಶ್ರಮವಹಿಸಿದ ಪರಿಣಾಮ ಯಲಹಂಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸ್ತ್ರೀಶಕ್ತಿ ಸಂಘಗಳು ಸ್ಥಾಪನೆಯಾಗಿ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡಿವೆ. ಇದರ ಜತೆಗೆ ಸ್ವಾವಲಂಬಿ ಬದುಕು ನಡೆಸಲು ಟೇಲರಿಂಗ್ ಕೋರ್ಸ್, ಬ್ಯೂಟಿಷಿಯನ್ ಕೋರ್ಸ್, ಕೌಶಲ ಕೋರ್ಸ್, ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ನಡೆಸಿ ಮಾನಿನಿಯರ ಬದುಕಿಗೆ ಭದ್ರ ನೆಲೆ ಒದಗಿಸಿರುವ ವಾಣಿಶ್ರೀ ವಿಶ್ವನಾಥ್ ಅವರು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಮಾದರಿ ಹೆಣ್ಣು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  Vanishree Vishwanath

  ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಇವರು, ನಗರದ ಐಷಾರಾಮಿ ಬದುಕಿನ ಸೆಳೆತಕ್ಕೆ ಒಳಗಾಗದೆ ಹಳ್ಳಿಹೈದನನ್ನೇ ಮದುವೆಯಾದರು. ವರ್ಷಗಳು ಉರುಳಿದಂತೆ ಪತಿ ಎಸ್.ಆರ್. ವಿಶ್ವನಾಥ್ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದಂತೆಲ್ಲ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಅವರು ಯಲಹಂಕ ಶಾಸಕರಾಗಿ ಆಯ್ಕೆಯಾದ ಬಳಿಕ ವಾಣಿಶ್ರೀ ಅವರು ಮಹಿಳಾ ಸಬಲೀಕರಣಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅವುಗಳ ಅನುಷ್ಠಾನಕ್ಕಾಗಿ ಹಳ್ಳಿ- ಹಳ್ಳಿಗೆ ಭೇಟಿ ನೀಡಿ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿದರು. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಯ ಜಿಪಂ ಅಧ್ಯಕ್ಷೆಯಾದ ಬಳಿಕ ರಾಜಧಾನಿ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಚಟುವಟಿಕೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಕೈಗೊಂಡರು. ಇದಕ್ಕೆ ಪೂರಕವಾಗಿ ಸಾಮಾಜಿಕ ಚಟುವಟಿಕೆಯನ್ನು ಕೈಗೊಳ್ಳಲು ‘ವಿಶ್ವವಾಣಿ ಫೌಂಡೇಷನ್’ ಸ್ಥಾಪಿಸಿ ಬಡವರು ಸೇರಿ ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಅಶಕ್ತ ಜನರ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

  ಸಮಾಜ ಸೇವೆ ಜತೆಗೆ ಸಹಕಾರ ಕ್ಷೇತ್ರದಲ್ಲೂ ವಾಣಿಶ್ರೀ ವಿಶ್ವನಾಥ್ ದೊಡ್ಡ ಹೆಸರು ಮಾಡಿದ್ದಾರೆ. ಸಿಂಗನಾಯಕನಹಳ್ಳಿ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘವು ದಶಕಗಳಿಂದಲೂ ರೈತರ ಶ್ರೇಯೋಭಿವೃದ್ಧಿಯಲ್ಲಿ ನಿರತವಾಗಿದೆ. ಈ ಸಂಘದ ಅಧ್ಯಕ್ಷ ಸ್ಥಾನವನ್ನು ಐದು ಬಾರಿ ವಹಿಸಿರುವ ವಾಣಿಶ್ರೀ, ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಸಾಧನೆಯನ್ನು ರಾಜ್ಯಮಟ್ಟದವರೆಗೆ ಕೊಂಡೊಯ್ದಿದ್ದಾರೆ. 2005ರಲ್ಲಿ 5 ಕೋಟಿ ರೂ. ಇದ್ದ ವಹಿವಾಟು, ಈಗ 800 ಕೋಟಿ ರೂ.ಗೆ ಹಿಗ್ಗಿದೆ. ಇದರ ಶ್ರೇಯಸ್ಸು ವಾಣಿಶ್ರೀ ಅವರಿಗೆ ಸಲ್ಲುತ್ತದೆ. ಸ್ವಸಹಾಯ ಗುಂಪುಗಳು ಹಾಗೂ ರೈತರಿಗೆ 25 ಲಕ್ಷ ರೂ. ಮೊತ್ತದವರೆಗೂ ಸಾಲ ನೀಡುವುದಲ್ಲದೆ ಮರುಪಾವತಿಯಲ್ಲೂ ಪ್ರತಿಶತ 95 ಸಾಧನೆ ಮಾಡಿ ರಾಜ್ಯದ ಸಹಕಾರಿಗಳ ಗಮನ ಸೆಳೆಯುವಂತೆ ಮಾಡಿದ್ದಾರೆ.

  Vanishree Vishwanath

  ಬಡವರ ಬಂಧು- ವಿಶ್ವವಾಣಿ ಪ್ರತಿಷ್ಠಾನ
  ಸಮಾಜ ಸೇವೆಗಾಗಿ ಹುಟ್ಟುಹಾಕಿರುವ ‘ವಿಶ್ವವಾಣಿ ಪ್ರತಿಷ್ಠಾನ’ವು ಅಕ್ಷರಶಃ ಬಡವರ ಬಂಧುವಾಗಿ ಕಾರ್ಯನಿರ್ವಹಿಸುತ್ತಿದೆ. ಎಂಟು ವರ್ಷಗಳಿಂದ ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸಿ ಅಲ್ಲಿ ಬಡವರಿಗೆ ಬೇಕಿರುವ ಸವಲತ್ತು, ನೆರವು ವಿತರಿಸಲಾಗುತ್ತಿದೆ. ಮಹಿಳೆಯರ ಏಳ್ಗೆಗೆ ಟೇಲರಿಂಗ್ ಕೋರ್ಸ್ ನೀಡಿದ ಬಳಿಕ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಬ್ಯೂಟಿಷಿಯನ್ ಕೋರ್ಸ್, ಕಸೂತಿ ತರಬೇತಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಕೌಶಲ ತರಗತಿಗಳನ್ನು ಏರ್ಪಡಿಸುತ್ತಿದೆ. ಈವರೆಗೆ ಲಕ್ಷಾಂತರ ಜನರಿಗೆ ವಿವಿಧ ರೀತಿಯ ನೆರವು ಒದಗಿಸಲಾಗಿದೆ. ವೃದ್ಧರು ಸೇರಿ ಅಶಕ್ತ ವರ್ಗದವರಿಗೆ ಆರೋಗ್ಯ ತಪಾಸಣೆ ಶಿಬಿರ, ನೇತ್ರ ತಪಾಸಣಾ ಶಿಬಿರ ಆಯೋಜಿಸಿ ಬಡವರ ಆರೋಗ್ಯ ಸುಧಾರಣೆಗೆ ನೆರವು ಒದಗಿಸಲಾಗಿದೆ. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಗುರುತಿನಚೀಟಿ ಮಾಡಿಸಿ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಯುವಜನರಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಿ ವಿವಿಧ ಆಸ್ಪತ್ರೆಗಳಿಗೆ ವಾರ್ಷಿಕ 1 ಸಾವಿರ ಯೂನಿಟ್ ರಕ್ತವನ್ನು ನೀಡಲಾಗಿದೆ. ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಾವಿರಾರು ಸಂಖ್ಯೆಯಲ್ಲಿ ನೋಟ್​ಬುಕ್ ವಿತರಿಸಲಾಗುತ್ತಿದೆ. ಜತೆಗೆ ಗ್ರಾಮೀಣ ಶಾಲೆಗಳಲ್ಲಿ ಸ್ಮಾರ್ಟ್​ಕ್ಲಾಸ್ ನಡೆಸಲು ನವೀನ ಸಾಫ್ಟ್​ವೇರ್ ಒಳಗೊಂಡಿರುವ ಕಂಪ್ಯೂಟರ್​ಗಳನ್ನು ಒದಗಿಸಲಾಗಿದೆ. ಪ್ರತಿಭಾವಂತ ಕಾಲೇಜು ವಿದ್ಯಾರ್ಥಿಗಳಿಗೆ 750ಕ್ಕೂ ಹೆಚ್ಚು ಲ್ಯಾಪ್​ಟಾಪ್​ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಪರಿಸರ ದಿನದಂದು ಇಡೀ ಯಲಹಂಕ ಕ್ಷೇತ್ರದೆಲ್ಲೆಡೆ ನಾಗರಿಕರ ಜತೆಗೂಡಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಹಸಿರು ಕಾರ್ಯಕ್ರಮವನ್ನು ಕೈಗೊಳ್ಳುತ್ತ ಬರಲಾಗಿದೆ.

  ವಿಶ್ವವಾಣಿ ಫೌಂಡೇಷನ್ ಪ್ರತಿಷ್ಠಾನದಿಂದ ಕೈಗೊಂಡಿರುವ ಜನಪರ ಕೆಲಸವನ್ನು ಸಮಾಜಸೇವೆಯ ಒಂದು ಭಾಗವಾಗಿ ಕೈಗೊಂಡಿದ್ದೇನೆ. ಯಾವುದೇ ಲಾಭದ ಉದ್ದೇಶದಿಂದ ಕೆಲಸ ಮಾಡದೆ ಕಷ್ಟದಲ್ಲಿರುವ ಜನರಿಗೆ ನೆರವಾಗಬೇಕೆಂಬ ಆಶಯ ನಮ್ಮದಾಗಿದೆ. ಜನರಿಂದಲೂ ನಮಗೆ ಹೆಚ್ಚು ಪ್ರೀತಿ, ವಿಶ್ವಾಸ ದೊರೆತಿದೆ. ಹಳ್ಳಿಗಳಿಗೆ ಹೋದಾಗ ಅಲ್ಲಿನ ಜನರು ಗೌರವಿಸುವುದನ್ನು ನೋಡಿದರೆ ನಾವು ಮಾಡಿರುವ ಕೆಲಸ ಸಾರ್ಥಕ ಎನಿಸುತ್ತಿದೆ. ಮುಂದೆಯೂ ಪ್ರತಿಷ್ಠಾನದಿಂದ ವಿವಿಧ ಸೇವಾ ಚಟುವಟಿಕೆಗಳು ಮುಂದುವರಿಯಲಿವೆ. ಈ ಸೇವೆಯನ್ನು ಗುರುತಿಸಿ ‘ವಿಜಯವಾಣಿ’ ಪತ್ರಿಕೆಯು ನನಗೆ ಬೆಂಗಳೂರು ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮ ಹೆಗಲ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ವಹಿಸಿದಂತಾಗಿದೆ.

  | ವಾಣಿಶ್ರೀ ವಿಶ್ವನಾಥ್ ವಿಶ್ವವಾಣಿ ಪ್ರತಿಷ್ಠಾನದ ಅಧ್ಯಕ್ಷೆ

  Vanishree Vishwanath

  ಕ್ರೀಡೆಗೆ ಪ್ರೋತ್ಸಾಹ
  ಶಾಲಾ ಹಂತದಲ್ಲಿರುವಾಗಲೇ ವಾಣಿಶ್ರೀ ಅವರು ಬಹುಮುಖ ಪ್ರತಿಭೆಯನ್ನು ಹೊಂದಿದವರಾಗಿದ್ದರು. ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ರಾಜ್ಯ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಿಂದಾಗಿ ಇವರು ಪ್ರತಿವರ್ಷ ತಮ್ಮ ಪ್ರತಿಷ್ಠಾನದಿಂದ ಯುಜನರಿಗಾಗಿ ಕ್ರಿಕೆಟ್, ಕಬಡ್ಡಿ ಹಾಗೂ ಇತರ ಕ್ರೀಡಾಕೂಟಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳಲು ಧನಸಹಾಯ ಮಾಡಿದ್ದಾರೆ. ಮಹಿಳಾ ದಿನಾಚರಣೆ ವೇಳೆ ಸ್ತ್ರೀಯರಿಗೆ ಪ್ರತ್ಯೇಕ ಕ್ರೀಡಾ ಚಟುವಟಿಕೆಗಳನ್ನು ನಡೆಸಿ ಅವರಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಿಸಲು ಕಾರಣರಾಗಿದ್ದಾರೆ.

  ಪ್ರಶಸ್ತಿ-ಪುರಸ್ಕಾರ

  *ಸಹಕಾರ ರತ್ನ

  * ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ

  * ಎನ್​ಸಿಬಿಸಿ ಅವಾರ್ಡ್

  ವಿದ್ಯಾರ್ಥಿಗಳಿಗೆ ಉಚಿತ ನೋಟ್​ಬುಕ್ ವಿತರಣೆ
  ವಿಶ್ವವಾಣಿ ಫೌಂಡೇಷನ್ ಪ್ರತಿವರ್ಷ ಸರ್ಕಾರಿ ಶಾಲಾಮಕ್ಕಳಿಗೆ ನೋಟ್​ಬುಕ್ ವಿತರಿಸುವ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳುತ್ತ ಬಂದಿದೆ. 16 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಈ ಶೈಕ್ಷಣಿಕ ನೆರವು ಕಾರ್ಯಕ್ರಮದಲ್ಲಿ ಈವರೆಗೆ 3 ಲಕ್ಷಕ್ಕಿಂತಲೂ ಅಧಿಕ ನೋಟ್​ಬುಕ್ ನೀಡಲಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಕೈಬರಹ ಶೈಲಿ ಹೆಚ್ಚಿಸಿಕೊಳ್ಳಲು ಹಾಗೂ ತರಗತಿಯಲ್ಲಿ ವಿಷಯ ಗ್ರಹಿಕೆಗೆ ಅನುಕೂಲವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 10 ಸಾವಿರ ಜಾಮಿಟ್ರಿ ಬಾಕ್ಸ್ ವಿತರಿಸಲಾಗಿದೆ.

  Vanishree Vishwanath

  ಯಲಹಂಕ ಸುತ್ತಮುತ್ತಲಿನ ಭಾಗದಲ್ಲಿ ಬಡ ಮಹಿಳೆಯರಿಗೆ ಟೇಲರಿಂಗ್ ಕೋರ್ಸ್, ಬ್ಯೂಟಿಷಿಯನ್ ತರಗತಿಗಳನ್ನು ನಡೆಸುವಲ್ಲಿ ವಾಣಿಶ್ರೀಯವರು ಗಮನ ಸೆಳೆದಿದ್ದಾರೆ. ಜನಪರ ಕೆಲಸಗಳನ್ನು ಮಾಡಲು ಅವರು ಸದಾ ಬೆಂಬಲಿಸುತ್ತಾರೆ. ಜನರೊಂದಿಗೆ ಬೆರೆತು ಮಾತನಾಡಿ ಅವರ ಕಷ್ಟ-ಸುಖ ಆಲಿಸುವ ಗುಣ ನಮಗೆ ಹಿಡಿಸಿದೆ. ಶಾಸಕ ವಿಶ್ವನಾಥ್ ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಅವರ ಸಮಾಜಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

  | ಸುನಂದ ಸಿಂಗನಾಯಕನಹಳ್ಳಿ ಗ್ರಾಪಂ ಸದಸ್ಯೆ

  ಗೃಹಿಣಿಯರಿಗೆ ‘ಸ್ಪೋಕನ್ ಇಂಗ್ಲಿಷ್’ ತರಗತಿ
  ಯಲಹಂಕ ಗ್ರಾಮೀಣ ಭಾಗದಲ್ಲಿ ಗೃಹಿಣಿಯರಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳು ಭಾರಿ ಸದ್ದು ಮಾಡಿದೆ. ಪಿಯುಸಿ, ಪದವಿ ಪಡೆದಿರುವ ಮಹಿಳೆಯರು ಈಗ ಉದ್ದಿಮೆದಾರರಾಗಿ ಬದಲಾಗಿದ್ದಾರೆ. ಇಂತಹವರಿಗೆ ನುರಿತ ಆಂಗ್ಲ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್ ತರಗತಿ ಆಯೋಜಿಸಿ, ಯಾರಿಗೇನೂ ಕಮ್ಮಿ ಇಲ್ಲದಂತೆ ಸಜ್ಜುಗೊಳಿಸಲಾಗಿದೆ. ಇದರಿಂದ ಪ್ರೇರಿತವಾಗಿರುವ ಇತರ ಮಹಿಳೆಯರು ಕೂಡ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಹಮ್ಮಿಕೊಳ್ಳುವಂತೆ ವಿಶ್ವವಾಣಿ ಫೌಂಡೇಷನ್​ಗೆ ಬೇಡಿಕೆ ಇಟ್ಟಿವೆ.

  ಸಹಕಾರ ಬ್ಯಾಂಕ್ ಪ್ರಗತಿಗೆ ಅವಿರತ ಶ್ರಮ
  ರಾಜ್ಯವು ಸಹಕಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರೂ, ಮಹಿಳಾ ಸಹಕಾರಿಗಳ ಸಂಖ್ಯೆ ಕಡಿಮೆ ಇದೆ. ಆದರೆ, ವಾಣಿಶ್ರೀ ಅವರು ಸಮಾಜಮುಖಿ ಕಾರ್ಯದ ಜತೆಗೂ ಸಹಕಾರ ಕ್ಷೇತ್ರದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಪ್ರಸ್ತುತ ಯಲಹಂಕ ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, 5ನೇ ಬಾರಿಗೆ ಸಂಸ್ಥೆಯ ಸಾರಥ್ಯ ವಹಿಸಿದ್ದಾರೆ. ಸಂಘದ ಮೂಲಕ ರೈತರು ಸೇರಿ ಸ್ವಉದ್ಯೋಗ ಕೈಗೊಳ್ಳುವ ಯುವಜನತೆ ಹಾಗೂ ಮಹಿಳೆಯರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನೆರವು ಒದಗಿಸಲಾಗಿದೆ. ಪ್ರತಿವರ್ಷ ನೂರಾರು ಮಂದಿಗೆ ಸಾಲಸೌಲಭ್ಯ ಒದಗಿಸುತ್ತಿದ್ದು, ಮರುಪಾವತಿಯಲ್ಲೂ ಸಾಧನೆ ಮಾಡಲಾಗಿದೆ. ಸಂಘದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಷಿಕ ಕಾರ್ಯಕ್ರಮ ರೂಪಿಸಿ ಅದರಂತೆ ಅನುಷ್ಠಾನಗೊಳಿಸುವ ಕಾರ್ಯವೈಖರಿ ವಾಣಿಶ್ರೀ ಅವರ ಸಾಧನೆಗೆ ನೆರವಾಗಿದೆ. ಇವರಿಗೆ 2011ರಲ್ಲಿ ‘ರಾಷ್ಟ್ರೀಯ ಸಹಕಾರಿ ಸಾಧನಾ ಪ್ರಶಸ್ತಿ’, ‘ರಾಜ್ಯ ಸಹಕಾರ ರತ್ನ ಪ್ರಶಸ್ತಿ’ ಸೇರಿ ಹಲವು ಪುರಸ್ಕಾರಗಳು ಸಂದಿವೆ.

  Vanishree Vishwanath

  ವಾಣಿಶ್ರೀ ಅವರು ನನ್ನ ಪತ್ನಿಯಾಗಿ ಮೂರು ದಶಕದಿಂದಲೂ ನಿರಂತರವಾಗಿ ಕುಟುಂಬವನ್ನು ಅಚ್ಚುಕಟ್ಟಾಗಿ ನೋಡಿ ಕೊಂಡಿದ್ದಾರೆ. ಅಷ್ಟೇ ಮುತುವರ್ಜಿ ಯಿಂದ ನನ್ನನ್ನು ರಾಜಕೀಯವಾಗಿ ಹುರಿದುಂಬಿಸಿದ್ದಾರೆ. ವಿಶ್ವವಾಣಿ ಫೌಂಡೇಷನ್ ಸ್ಥಾಪಿಸಿ ಅದರ ಮೂಲಕ ಸಮಾಜಸೇವೆ ಮಾಡುವ ಶ್ರೇಯ ಕೂಡ ಅವರಿಗೆ ಸಲ್ಲುತ್ತದೆ. ವಾಣಿಶ್ರೀ ಅವರು ಪ್ರತಿಷ್ಠಾನದ ಮೂಲಕ ಕೈಗೊಳ್ಳುವ ಎಲ್ಲ ಕಾರ್ಯಕ್ಕೂ ನನ್ನ ಸಂಪೂರ್ಣ ಬೆಂಬಲ ಇದೆ. ಅವರಿಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ದೊರೆತಿರುವುದಕ್ಕೆ ತುಂಬ ಸಂತೋಷವಾಗಿದೆ.

  | ಎಸ್.ಆರ್. ವಿಶ್ವನಾಥ್ ಯಲಹಂಕ ಶಾಸಕ

  ವಾಣಿಶ್ರೀ ಅವರು ನಮ್ಮ ಭಾಗ ದಲ್ಲಿ 30 ಸ್ತ್ರೀಶಕ್ತಿ ಸಂಘಗಳನ್ನು ಆರಂಭಿಸಿ ಮಹಿಳೆಯರಿಗೆ ಬೆನ್ನೆಲುಬಾಗಿದ್ದಾರೆ. ಬಡ ವರ್ಗದ ಮಹಿಳೆಯರಿಗೆ ಸಾಲ ಕೊಡಿಸಿ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ. ಕಷ್ಟ ಎಂದು ಯಾರೇ ಬಂದಲೂ ಅವರಿಗೆ ನೆರವಾಗುತ್ತಾರೆ. ಅತ್ತಿಗೆ ಸ್ಥಾನದಲ್ಲಿ ನಿಂತು ಸಹಾಯ ಮಾಡುವ ಗುಣದಿಂದ ಜನಮನ ಗೆದ್ದಿದ್ದಾರೆ.

  | ಎಸ್.ಸಿ. ಪದ್ಮಶ್ರೀ ಸಿಂಗನಾಯಕನಹಳ್ಳಿ ಗ್ರಾಪಂ ಸದಸ್ಯೆ

  ನಮಗೆಲ್ಲ ವಾಣಿಶ್ರೀ ಅವರು ಮನೆಯ ಸದಸ್ಯೆಯಂತೆ ಕಾಣುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅವರು ತುಂಬ ಕೆಲಸ ಮಾಡಿದ್ದಾರೆ. ವಿಶ್ವವಾಣಿ ಪ್ರತಿಷ್ಠಾನದಿಂದ ಹೆಚ್ಚಿನ ಜನರಿಗೆ ಸಹಾಯ ಆಗಿದೆ. ಹಳ್ಳಿ-ಹಳ್ಳಿಗೆ ಬಂದು ಬಡಜನರಿಗೆ ನೆರವು ನೀಡಿದ್ದನ್ನು ನಾವು ಮರೆಯುವುದಿಲ್ಲ. ಅವರ ಸಮಾಜಸೇವೆಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಹಾರೈಸುವೆ.

  | ಕೆ.ಆರ್. ಭಾಗ್ಯಲಕ್ಷ್ಮೀ ಆವಲಹಳ್ಳಿ

  ವಾಣಿಶ್ರೀ ಅವರು ಕ್ರಿಯಾಶೀಲ ಸಮಾಜಸೇವಕಿಯಾಗಿ ಹೆಣ್ಣುಮಕ್ಕಳಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಬಹಳಷ್ಟು ಹೆಂಗಳೆಯರಿಗೆ ಸ್ವಂತ ಕಾಲ ಮೇಲೆ ನಿಲ್ಲಲು ಸರ್ಕಾರದಿಂದ ವಿವಿಧ ಸವಲತ್ತುಗಳನ್ನು ಕೊಡಿಸಿದ್ದಾರೆ. ಜನರೊಂದಿಗೆ ಸ್ನೇಹಪರವಾಗಿ ಮಾತನಾಡುತ್ತಾರೆ. ಕಷ್ಟಕ್ಕೆ ಸ್ಪಂದಿಸುತ್ತಾರೆ. ಸಮಸ್ಯೆ ಹೇಳಿಕೊಳ್ಳಲು ಬರುವವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುತ್ತಾರೆ.

  | ಜೀವಿತಾ ಮುನಿಕೃಷ್ಣ ಸಿಂಗನಾಯಕನಹಳ್ಳಿ ಗ್ರಾಪಂ ಸದಸ್ಯೆ

  ನನ್ನ ತಾಯಿಯವರು ಸಮಾಜಸೇವೆ ಹಾಗೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವವಾಣಿ ಫೌಂಡೇಶನ್ ಸಂಸ್ಥಾಪಕ ಟ್ರಸ್ಟಿಯಾಗಿ ಸಮಾಜದ ಬಡ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಮಹಿಳೆಯರ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದರ ಜತೆಗೆ ಕೌಶಲ ತರಗತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸದಾ ನೆರವು ನೀಡುತ್ತ ಬಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಫೌಂಡೇಷನ್​ನಿಂದ ಹೆಚ್ಚಿನ ಕೆಲಸ ಮಾಡಲು ಅಮ್ಮ ನಮಗೆಲ್ಲ ಸ್ಪೂರ್ತಿ. ತಂದೆಗೂ ರಾಜಕೀಯವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಪಬ್ಲಿಕ್ ಲೈಫ್- ಫ್ಯಾಮಿಲಿ ಲೈಫ್​ಗಳನ್ನು ಬ್ಯಾಲೆನ್ಸ್ ಮಾಡುತ್ತ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರೊಬ್ಬ ಮಾದರಿ ಮಹಿಳೆ.

  | ಅಲೋಕ್ ವಾಣಿಶ್ರೀ ವಿಶ್ವನಾಥ್ ಪುತ್ರ

  ನಮ್ಮ ತಂದೆಯವರ ರಾಜಕಾರಣದ ಜೊತೆಜೊತೆಯಲ್ಲೇ ನಮ್ಮ ತಾಯಿಯವರು ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಅವರಿಗೆ ತಂದೆಯವರ ರೀತಿಯಲ್ಲೇ ಸಮಾಜದ ಬಗ್ಗೆ ತುಡಿತ. ರಾಜಕೀಯ, ಸಾಮಾಜಿಕ ಕ್ಷೇತ್ರಗಳೊಂದಿಗೆ ಸಹಕಾರ ಕ್ಷೇತ್ರದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿಶ್ವವಾಣಿ ಫೌಂಡೇಶನ್ ಸಂಸ್ಥಾಪಕ ಟ್ರಸ್ಟಿಯಾಗಿ ಹೊಲಿಗೆ ಯಂತ್ರ ತರಬೇತಿ ಸೇರಿದಂತೆ ಇನ್ನಿತರೆ ಸ್ವಯಂ-ಉದ್ಯೋಗಾಧಾರಿತ ಕೌಶಲ್ಯಗಳ ಬಗ್ಗೆ ತರಬೇತಿ ನೀಡುವ ಮೂಲಕ ಬಡವರು, ದೀನದಲಿತ ಮಹಿಳೆಯರಿಗೆ ಆಸರೆಯಾಗಿದ್ದಾರೆ. ರಾಜಕೀಯದ ಜೊತೆಜೊತೆಯಲ್ಲೇ ಕುಟುಂಬವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಬರುವ ಮೂಲಕ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿರುವುದಲ್ಲದೇ, ಅನೇಕ ಯುವತಿಯರನ್ನು ಸಮಾಜದಲ್ಲಿ ಉತ್ತಮ ಜೀವನ ನಿರ್ವಹಣೆಗೆ ಕಾರಣರಾಗಿದ್ದು, ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ಈ ಮೂಲಕ ನಮ್ಮ ತಾಯಿ ನಮಗೆ ಹೆಮ್ಮೆ, ಆದರ್ಶಪ್ರಾಯರಾಗಿದ್ದಾರೆ. ಅವರಿಗೆ ವಿಜಯವಾಣಿ ದಿನಪತ್ರಿಕೆಯ ‘ಬೆಂಗಳೂರು ರತ್ನ ದೊರಕಿರುವುದು ಅತ್ಯಂತ ಸಂತಸ ತಂದಿದೆ.

  | ಅಪೂರ್ವ ವಾಣಿಶ್ರೀ ವಿಶ್ವನಾಥ್ ಪುತ್ರಿ

  Vanishree Vishwanath

  ಕರೊನಾ ವಾರಿಯರ್
  ಕೋವಿಡ್ ಸಾಂಕ್ರಾಮಿಕದ ವೇಳೆ ವಾಣಿಶ್ರೀ ವಿಶ್ವನಾಥ್ ಅವರು ತಮ್ಮ ಫೌಂಡೇಷನ್ ಮೂಲಕ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಎರಡೂ ಅಲೆ ವೇಳೆ ಹಲವು ತಿಂಗಳು ಕಾಲ ವಾಣಿಶ್ರೀ ಹಾಗೂ ಅವರ ತಂಡವು ಯಲಹಂಕ ಕ್ಷೇತ್ರದ ವಿವಿಧ ವಾರ್ಡ್ ಹಾಗೂ ಗ್ರಾಮಗಳಲ್ಲಿ ಜನರಿಗೆ ನೆರವು ನೀಡಿದರು. ಕಾರ್ವಿುಕರು ಸೇರಿ ಅಶಕ್ತರಿಗೆ ನಿತ್ಯ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ಪೊಟ್ಟಣಗಳನ್ನು ಪೂರೈಸಿದ್ದಾರೆ. 50 ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯಗಳ ಕಿಟ್, ದಿನಸಿ ಕಿಟ್ ಹಾಗೂ ತರಕಾರಿ ಹಂಚಿದ್ದಾರೆ. ರೋಗಿಗಳಿಗೆ ವೆಂಟಿಲೇಟರ್ ಕೊರತೆ ಉಂಟಾದಾಗ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಫೌಂಡೇಷನ್ ವತಿಯಿಂದ ಐಸಿಯು ಘಟಕವನ್ನು ಸಜ್ಜುಗೊಳಿಸಲಾಯಿತು. ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಗೆ ಉಚಿತವಾಗಿ 120 ಆಕ್ಸಿಜನ್ ಯಂತ್ರಗಳನ್ನು ಪೂರೈಸಲಾಯಿತು. ಯಲಹಂಕ ಸುತ್ತಮುತ್ತಲಿನ ವಿವಿಧ ಲೇಔಟ್​ಗಳಲ್ಲಿ ಔಷಧ ಸಿಗದವರಿಗೆ ಮನೆಬಾಗಿಲಿಗೆ ರೆಮ್​ಸಿವಿರ್ ಔಷಧ, ಲಸಿಕೆ ಸಹಿತ ಇತರ ಅಗತ್ಯ ವೈದ್ಯೋಪಚಾರ ತಲುಪಿಸುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಇದಕ್ಕಾಗಿ ವಾಣಿಶ್ರೀಯವರನ್ನು ‘ಕರೊನಾ ವಾರಿಯರ್’ ಎಂದು ಜನರು ಮೆಚ್ಚುಗೆಗೆ ವ್ಯಕ್ತಪಡಿಸಿದ್ದರು.

  ಕಿಡ್ನಿಗೆ ನೋವು ನೀಡುವ ಪೇನ್ ಕಿಲ್ಲರ್​ಗಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts