ತೂಕ ಇಳಿಸುವ ವೆನಿಲ್ಲಾ ಬೀನ್ಸ್

ವೆನಿಲ್ಲಾ ಎಂದಕೂಡಲೇ ಆ ಪ್ಲೇವರ್​ನ ಐಸ್ಕ್ರೀಮ್ ನೆನಪಿಗೆ ಬರುತ್ತದೆ. ಇದರ ಆರೋಗ್ಯ ಸಹಾಯಕಾರಿ ಗುಣಗಳು ಅನೇಕಾನೇಕ. ಆದರೆ ಇಂದು ಮಾರುಕಟ್ಟೆಯಲ್ಲಿ ಕೃತ್ರಿಮವಾದ ವೆನಿಲ್ಲಾ ಪ್ಲೇವರ್​ಗಳನ್ನು ಬಳಸಿ ಆಹಾರಪದಾರ್ಥಗಳನ್ನು ತಯಾರಿಸಿರುತ್ತಾರೆ. ಶುದ್ಧ ವೆನಿಲ್ಲಾ ಸಾರ ಬಳಸುವುದು ಉತ್ತಮ. ಬೊಜ್ಜು ಒಂದು ತೊಂದರೆ. ಜತೆಗೆ ಬಹಳಷ್ಟು ತೊಂದರೆಗಳನ್ನೂ, ಕಾಯಿಲೆಗಳನ್ನೂ ಹೊತ್ತುತರುವ ಮಾಧ್ಯಮ. ವೆನಿಲ್ಲಾ ಸಾರವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಹಳ ಸಹಕಾರಿ. ವಾಕರಿಕೆ ಬಂದಂತಾಗುವುದನ್ನು ತಡೆಯುವ ಸಾಮರ್ಥ್ಯ ವೆನಿಲ್ಲಾಕ್ಕಿದೆ. ಹೊಟ್ಟೆಗೆ ಸಂಬಂಧಪಟ್ಟ ಅನೇಕ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳುವುದರ ಜತೆಗೆ ಹೊಟ್ಟೆಯನ್ನು ಸಮಾಧಾನದಿಂದ ಇಡಲು ಸಹಾಯ ಮಾಡುತ್ತದೆ.

ಹೊಟ್ಟೆಗೆ ಸಂಬಂಧಿತ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲು ವೆನಿಲ್ಲಾವನ್ನು ಈ ರೀತಿಯಾಗಿ ಬಳಸಬಹುದು. ವೆನಿಲ್ಲಾದ ಹರ್ಬಲ್ ಟೀ ಸೇವಿಸಬಹುದು. ಇಲ್ಲದಿದ್ದಲ್ಲಿ ನೀರಿಗೆ ವೆನಿಲ್ಲಾ ಬೀನ್ಸ್ ಹಾಕಿ ಕುದಿಸಿ ನಂತರ ಆ ಡಿಕಾಕ್ಷನ್​ನ್ನು ಸೇವಿಸಬಹುದು. ಇಲ್ಲವಾದಲ್ಲಿ ವೆನಿಲ್ಲಾ ಸಾರವನ್ನು ನೀರಿಗೆ ಸೇರಿಸಿ ನಿಧಾನವಾಗಿ ಕುಡಿಯಬೇಕು. ಕಫಕ್ಕೆ ನೀಡುವ ಔಷಧಗಳ ತಯಾರಿಕೆಯಲ್ಲಿ ವೆನಿಲ್ಲಾ ಸಾರವನ್ನು ಬಳಸಿರುತ್ತಾರೆ. ಇದಕ್ಕೆ ಒಂದು ಕಾರಣ ಔಷಧದ ಕಹಿ ಅಂಶ ಅಷ್ಟು ಅರಿವಾಗದಿರಲಿ ಎಂಬುದಕ್ಕಾಗಿ. ಇದು ಔಷಧಕ್ಕೆ ಉತ್ತಮ ಫ್ಲೇವರ್ ನೀಡುತ್ತದೆ. ಇನ್ನೊಂದು ಕಾರಣ ವೆನಿಲ್ಲಾವು ಸ್ವಲ್ಪ ಮಟ್ಟಿಗೆ ಅರವಳಿಕೆ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣ, ಆಂಟಿ ಇನ್​ಫ್ಲಮೇಟರಿ ಗುಣವನ್ನು ಹೊಂದಿದೆ. ಇದರಿಂದಾಗಿ ಕಫದ ಛಾಯೆ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಯಲ್ಲಿ ಗಂಟಲಲ್ಲಿ ಉರಿ, ಜ್ವರ, ತಲೆನೋವು ಕಡಿಮೆಯಾಗಲು ವೆನಿಲ್ಲಾ ಸಹಕಾರಿ.

ವೆನಿಲ್ಲಾ ಸಾರವನ್ನು ಹೊಂದಿರುವ ಕಫ್ ಸಿರಪ್ ದೊರೆಯುವುದು ಸ್ವಲ್ಪ ಕಷ್ಟ. ಅಂತಹ ಸಮಯದಲ್ಲಿ ಉಗುರುಬೆಚ್ಚಗಿನ ನೀರಿಗೆ ವೆನಿಲ್ಲಾ ಸಾರವನ್ನು (ಎಕ್ಸ್ಟ್ರಾಕ್ಟ್‌) ಹಾಕಿ ಕುಡಿಯಬಹುದು. ಇದು ಔಷಧದಂತೆ ಕೆಲಸ ಮಾಡುತ್ತದೆ. ಮಕ್ಕಳಿಗಂತೂ ಬಹಳ ಪರಿಣಾಮಕಾರಿ. ವೆನಿಲ್ಲಾದ ಇನ್ನೂ ಅನೇಕ ಔಷಧೀಯ ಗುಣಗಳನ್ನು ನಾಳಿನ ಅಂಕಣದಲ್ಲಿ ತಿಳಿದುಕೊಳ್ಳೋಣ.