ಮತ್ತೊಂದು ದಾಖಲೆಯತ್ತ ‘ವಂದೇ ಮಾತರಂ’

«ಜ.12ರಂದು ರಾಷ್ಟ್ರ ಜಾಗೃತಿ ಸಂದೇಶ * ಮಲ್ಪೆ ಬೀಚ್‌ನಲ್ಲಿ ಮತ್ತೆ ಮೊಳಗಲಿದೆ ವಂದೇಮಾತರಂ»

– ಅವಿನ್ ಶೆಟ್ಟಿ, ಉಡುಪಿ

ಬಂಕಿಮಚಂದ್ರ ಚಟರ್ಜಿ ರಚಿತ ವಂದೇ ಮಾತರಂ ಗೀತೆ ಮತ್ತೊಮ್ಮೆ ವಿಶ್ವದಾಖಲೆಯತ್ತ ಸಾಗುತ್ತಿದೆ.
ಮಲ್ಪೆಯ ಕಡಲ ತೀರದಲ್ಲಿ ಕಳೆದ ವರ್ಷ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಡಿದ ವಂದೇಮಾತರಂ ವಿಶ್ವದಾಖಲೆಗೆ ಪಾತ್ರವಾಗಿತ್ತು. ಜಗತ್ತಿನಲ್ಲಿ ಒಂದೇ ಸಾಹಿತ್ಯ (ವಂದೇ ಮಾತರಂ) ಹಲವು ರಾಗ, ಸಂಗೀತದೊಂದಿಗೆ ಪ್ರಸ್ತುತಗೊಳ್ಳುತ್ತಿರುವುದು ಮೊದಲ ಪ್ರಯತ್ನ.
ಇಂಥದ್ದೊಂದು ಮಹತ್ವದ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಪ್ರಯುಕ್ತ ಉಡುಪಿಯ ಸಂವೇದನ ಫೌಂಡೇಶನ್ ಪ್ರಸ್ತುತಪಡಿಸುತ್ತಿದೆ. ಜ.12ರಂದು ಮಲ್ಪೆ ಕಡಲತೀರದಲ್ಲಿ ದೇಶದ 29 ರಾಜ್ಯದ ತಂಡದ 150ರಿಂದ 200 ಹಿನ್ನೆಲೆ ಗಾಯಕರು, 15 ಸಾವಿರ ಸ್ಪರ್ಧಿಗಳು ಸೇರಿದಂತೆ ಒಟ್ಟು 50 ಸಾವಿರ ಪ್ರತಿನಿಧಿಗಳು, ಚಲನಚಿತ್ರ, ಸುಗಮ ಸಂಗೀತ ಕ್ಷೇತ್ರದ ಗಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶ್ವದಾಖಲೆ ಹೇಗೆ?
ಕಾಶ್ಮಿರದಿಂದ, ಕನ್ಯಾಕುಮಾರಿವರೆಗಿನ ದೇಶದ 29 ರಾಜ್ಯಗಳ ವೃತ್ತಿನಿರತ ಗಾಯಕ, ಗಾಯಕಿಯರು ವಂದೇಮಾತರಂ ಸಾಹಿತ್ಯಕ್ಕೆ ವಿಭಿನ್ನ ರಾಗ ಸಂಯೋಜನೆ ಮಾಡಲಿದ್ದಾರೆ. ತಮ್ಮ ರಾಜ್ಯದ ಪ್ರಕೃತಿ, ಸಂಸ್ಕೃತಿ ಬಿಂಬಿಸುವ ದೃಶ್ಯವನ್ನು ಅದಕ್ಕೆ ಅಳವಡಿಸಲಿದ್ದಾರೆ. ಈ ಆಲ್ಬಬ್‌ಗಳು ಯೂಟ್ಯೂಬ್ ಚಾನೆಲ್ ಮೂಲಕ ಅಪ್‌ಲೋಡ್ ಆಗುತ್ತವೆ. ಈ ಮೂಲಕ ವಂದೇ ಮಾತರಂ ಸಾಹಿತ್ಯ ಹಲವು ರಾಗ, ಸಂಗೀತ, ದೃಶ್ಯ ಸಂಯೋಜನೆಯೊಂದಿಗೆ ದೇಶಾದ್ಯಂತ ಮೊಳಗುತ್ತದೆ. ಜಗತ್ತಿನಲ್ಲಿ ಬೇರಾವ ಸಾಹಿತ್ಯವೂ ಇಷ್ಟೊಂದು ಪ್ರಮಾಣದಲ್ಲಿ ರಾಗ, ಸಂಗೀತ ಬದಲಾವಣೆ ಆಗಿರುವ ಇತಿಹಾಸವಿಲ್ಲ. ಹೀಗೆ ಪ್ರಸ್ತುತಗೊಂಡರೆ ವಂದೇ ಮಾತರಂ ಹೊಸ ದಾಖಲೆಗೆ ಸೇರ್ಪಡೆಗೊಳ್ಳುತ್ತದೆ ಎಂದು ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಮಲ್ಪೆ ಹೇಳುತ್ತಾರೆ.
ಕಳೆದ ವರ್ಷ ಮಲ್ಪೆ ಕಡಲತೀರದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ 2 ಸಾವಿರ ವಿದ್ಯಾರ್ಥಿಗಳು, 20ಕ್ಕೂ ಹೆಚ್ಚು ಹಿನ್ನೆಲೆ ಗಾಯಕರ ಧ್ವನಿಯಲ್ಲಿ ವಂದೇ ಮಾತರಂ ಗೀತೆ ಇತಿಹಾಸ ಸೃಷ್ಟಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿತ್ತು.

100 ಉತ್ಕೃಷ್ಟ ಪ್ರಸ್ತುತಿಗಳ ಆಯ್ಕೆ
ಇದರಲ್ಲಿ ಖ್ಯಾತ ನಿರ್ದೇಶಕರು, ಸಂಗೀತ ನಿರ್ದೇಶಕರು, ತಾಂತ್ರಿಕ ತಜ್ಞರ ತೀರ್ಪುಗಾರರ ತಂಡ ದೇಶದ 29 ರಾಜ್ಯದ 100 ಉತ್ಕೃಷ್ಟ ಗೀತೆಗಳನ್ನು ಆಯ್ಕೆ ಮಾಡುತ್ತದೆ. ಮಲ್ಪೆಯಲ್ಲಿ ಜ.12ರಂದು ನಡೆಯುವ ಕಾರ್ಯಕ್ರಮದಲ್ಲಿ ಬೆಸ್ಟ್ 10 ಆಯ್ಕೆಯಾಗುತ್ತದೆ. ಇದರಲ್ಲಿ ಉತ್ಕೃಷ್ಟ ಮೊದಲ ಪ್ರಸ್ತುತಿಗೆ 2 ಲಕ್ಷ ರೂ.ಬಹುಮಾನ, ದ್ವಿತೀಯ 1 ಲಕ್ಷ ರೂ., ಬಹುಮಾನವಿದೆ. ಮಲ್ಪೆಯಲ್ಲಿ ಜ.12ರಂದು ಬೃಹತ್ ಶೋಭಾಯಾತ್ರೆ ಇದ್ದು, ವಿವಿಧ ರಾಜ್ಯದ ಸ್ಪರ್ಧಿಗಳು ಸಂಸ್ಕೃತಿ ಬಿಂಬಿಸುವ, ಉಡುಗೆ, ತೊಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗವ ಹಿಸಲಿದ್ದಾರೆ.

ದೇಶಾದ್ಯಂತ ಸಂಪರ್ಕ ಹೇಗೆ
ಸಂವೇದನ ಫೌಂಡೇಶನ್ ಈ ನಿಟ್ಟಿನಲ್ಲಿ ಒಂದು ತಿಂಗಳಿನಿಂದ ತಯಾರಿ ನಡೆಸುತಿದ್ದು, 30-40 ಉತ್ಸಾಹಿ ಯುವಕರು ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಮಣಿಪಾಲ ಸೇರಿದಂತೆ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿನ ಹೊರರಾಜ್ಯಗಳ ವಿದ್ಯಾರ್ಥಿಗಳ ಮೂಲಕ ಕಾರ್ಯಕ್ರಮ ಪ್ರಚಾರವನ್ನು 29 ರಾಜ್ಯಗಳಿಗೆ ಮುಟ್ಟಿಸಲಾಗುತ್ತಿದೆ. ಹೊರರಾಜ್ಯದ ವಿಶ್ವವಿದ್ಯಾಲಯ, ಸಂಘ, ಸಂಸ್ಥೆಗಳಿಗೆ ದೂರವಾಣಿಗೆ, ಇ-ಮೇಲ್, ಜಾಲತಾಣದ ಮೂಲಕ ಸಂಪರ್ಕ ಸಾಧಿಸಲಾಗುತ್ತಿದೆ. ಮಾಹಿತಿ ಮತ್ತು ನೋಂದಣಿಗೆ ಟ್ರಸ್ಟ್ <http://samvedanafoundationudupi.org> ವೆಬ್‌ಸೈಟ್ ರಚಿಸಿದೆ.