ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಕರಿಗೆ ಸಿಗುತ್ತೆ ಜನಪ್ರಿಯ ಹೋಟೆಲ್​ಗಳ ಆಹಾರ

ನವದೆಹಲಿ: ರಾಷ್ಟ್ರದ ಅತಿ ವೇಗವಾಗಿ ಸಂಚರಿಸುವ ಅತ್ಯಾಧುನಿಕವಾದ ಇಂಜಿನ್​ರಹಿತ ರೈಲು ವಂದೇ ಭಾರತದ ಸಂಚಾರ ಆರಂಭವಾಗುವ ಕ್ಷಣಗಣನೆ ಆರಂಭವಾಗಿದೆ. ಇದೇ ವೇಳೆ ಆ ರೈಲಿನಲ್ಲಿ ಪ್ರಯಾಣಿಕರಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.

ಈ ರೈಲಿನ ಪ್ರಯಾಣಿಕರಿಗೆ ಆಹಾರ ಒದಗಿಸಲಾಗುತ್ತದೆ. ಅದರ ವೆಚ್ಚವನ್ನು ಟಿಕೆಟ್​ ದರದಲ್ಲೇ ಸೇರಿಸಲಾಗಿದೆ ಎಂಬ ಅಂಶದಿಂದಾಗಿ ಆ ರೈಲಿನಲ್ಲಿ ಕೊಡಬಹುದಾದ ಆಹಾರದ ಕುರಿತು ಚರ್ಚೆಗಳು ಆರಂಭವಾಗಿದ್ದವು. ಈಗ ಜನಪ್ರಿಯವಾದ ಪಿಂಡ್​ ಬಲೂಚಿ ಮತ್ತು ಲ್ಯಾಂಡ್​ಮಾರ್ಕ್​ ಹೋಟೆಲ್​ನ ಆಹಾರವನ್ನು ಒದಗಿಸುವುದಾಗಿ ಹೇಳುವ ಮೂಲಕ ಐಆರ್​ಸಿಟಿಸಿ ಈ ಎಲ್ಲ ಚರ್ಚೆಗಳಿಗೆ ಇತಿಶ್ರೀ ಹಾಡಿದೆ.

ಪ್ರಯಾಗ್​ರಾಜ್​ ಮತ್ತು ಕಾನ್ಪುರದಲ್ಲಿ ಈ ಎರಡು ಹೋಟೆಲ್​ಗಳು ತುಂಬಾ ಜನಪ್ರಿಯವಾಗಿವೆ. ಈ ಹೋಟೆಲ್​ಗಳೊಂದಿಗೆ ಒಪ್ಪಂದ ಮಾಡಿಕೊಂಡು ಉತ್ತಮ ಗುಣಮಟ್ಟದ ಆಹಾರವನ್ನು ಸರಬರಾಜು ಮಾಡಲಾಗುವುದು. ದೆಹಲಿಯಿಂದ ವಾರಾಣಸಿಗೆ ರೈಲು ಸಂಚರಿಸುವಾಗ ಅಲಹಾಬಾದ್​ನ ಪಿಂಡ್​ ಬಲೂಚಿ ಹೋಟೆಲ್​ನಿಂದ ಮಧ್ಯಾಹ್ನದ ಊಟ ತರಿಸಿ, ವಿತರಿಸಲಾಗುವುದು. ವಾರಾಣಸಿಯಿಂದ ದೆಹಲಿಗೆ ರೈಲು ಹೋಗುವಾಗ ಕಾನ್ಪುರದ ಲ್ಯಾಂಡ್​ಮಾರ್ಕ್​ ಹೋಟೆಲ್​ನಿಂದ ರಾತ್ರಿ ಭೋಜನ ಸರಬರಾಜು ಮಾಡಲಾಗುವುದು ಎಂದು ಐಆರ್​ಸಿಟಿಸಿ ಹೇಳಿದೆ.

ದೆಹಲಿಯಿಂದ ವಾರಾಣಸಿಗೆ ಎಕ್ಸಿಕ್ಯೂಟೀವ್​ ಚೇರ್​ ಕಾರ್​ಗೆ 3,310 ರೂ. ಹಾಗೂ ವಾರಾಣಸಿಯಿಂದ ದೆಹಲಿಗೆ 3,260 ರೂ. ಶುಲ್ಕ ನಿಗದಿಯಾಗಿದೆ. ಚೇರ್​ಕಾರ್​ನ ಶುಲ್ಕ ಕ್ರಮವಾಗಿ 1,760 ರೂ. ಮತ್ತು 1,700 ರೂ. ನಿಗದಿಯಾಗಿದೆ. ರೈಲಿನಲ್ಲಿ ಸರಬರಾಜು ಮಾಡುವ ಆಹಾರದ ಶುಲ್ಕವೂ ಇದರಲ್ಲಿ ಅಡಕವಾಗಿದೆ. ದೆಹಲಿಯಿಂದ ವಾರಾಣಸಿಗೆ ತೆರಳುವಾಗ ಎಕ್ಸಿಕ್ಯೂಟೀವ್​ ಚೇರ್​ ಕಾರ್​ ಪ್ರಯಾಣಿಕರು ಪಾವತಿಸಿರುವ ಟಿಕೆಟ್​ ಶುಲ್ಕದಲ್ಲಿ 399 ರೂ. ಅನ್ನು ಬೆಳಗಿನ ಉಪಹಾರ, ಚಹಾ ಮತ್ತು ಮಧ್ಯಾಹ್ನದ ಭೋಜನಕ್ಕೆ ತೆಗೆದುಕೊಳ್ಳಲಾಗುತ್ತದೆ. ಅಂತೆಯೇ ವಾರಾಣಸಿಯಿಂದ ದೆಹಲಿಗೆ ಮರಳುವಾಗ 349 ರೂ. (ಸಂಜೆ ಲಘು ಉಪಹಾರ, ಚಹಾ, ರಾತ್ರಿ ಭೋಜನ) ತೆಗೆದುಕೊಳ್ಳಲಾಗುತ್ತದೆ. ಚೇರ್​ ಕಾರ್​ ಪ್ರಯಾಣಿಕರು ಕ್ರಮವಾಗಿ 344 ರೂ. ಮತ್ತು 288 ರೂ. ತೆಗೆದುಕೊಳ್ಳಲಾಗುತ್ತದೆ. (ಏಜೆನ್ಸೀಸ್​)