ನವದೆಹಲಿ: ದೇಶದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದು ಕಿಟಕಿಯ ಗಾಜುಗಳಿಗೆ ಹಾನಿಯಾಗಿತ್ತು. ಆದರೆ ಇದೀಗ ಮತ್ತೆ ಉತ್ತರಪ್ರದೇಶದ ಅಚಲ್ದಾ ಬಳಿ ರೈಲಿನ ಮೇಲೆ ಭಾರದ ಕಲ್ಲುಗಳು ತೂರಿಬಂದಿದ್ದು, ಪಕ್ಕದ ಕಿಟಕಿಗಳು ಮತ್ತು ಮುಖ್ಯ ಚಾಲಕನ ಪರದೆಯು ಹಾನಿಗೆ ಒಳಗಾಗಿದೆ.
ದಿಬ್ರುಗಢದ ರಾಜಧಾನಿ ಕ್ರಾಸಿಂಗ್ ಬಳಿಯಲ್ಲಿ ಪಕ್ಕದ ಸಾಲಿನಲ್ಲಿ ಹಸುಗಳ ಹಿಂಡು ಸಾಗುತ್ತಿರುವಾಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಕಡೆಗೆ ಕಲ್ಲಿನ ಮಳೆಗರೆಯಲಾಗಿದೆ. ಸಣ್ಣ ಸಣ್ಣ ಕಲ್ಲಿನ ತುಂಡುಗಳು ರೈಲಿನ ಚಾಲಕನ ವಾಯುನಿರೋಧಕ ಪರದೆ ಮತ್ತು ಕೋಚ್ಗಳ ಕಿಟಕಿಗಳಿಗೆ ತಾಗಿದೆ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ರೈಲನ್ನು ನಿಲ್ಲಿಸಿ ವೈಜ್ಞಾನಿಕ ತಂಡವು ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸೂಕ್ತ ತಪಾಸಣೆಗೆ ಒಳಪಡಿಸಿದೆ. ಬಳಿಕ ಯಾವುದೇ ಗಂಭೀರ ಹಾನಿಯಾಗಿಲ್ಲದಿದ್ದರಿಂದಾಗಿ ಪ್ರಯಾಣವನ್ನು ಮುಂದುವರಿಸಿ ಸಾಮಾನ್ಯ ವೇಗದಲ್ಲಿ ದೆಹಲಿ ರೈಲ್ವೆ ನಿಲ್ದಾಣವನ್ನು 11.05ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಾನಿಗೊಳಗಾದ ಕಿಟಕಿಗಳಿಗೆ ಅಧಿಕಾರಿಗಳು ರಕ್ಷಣಾ ಶೀಟ್ಸ್ಗಳನ್ನು ಅಳವಡಿಸಲಾಗಿದ್ದು, ರೈಲು ಎಂದಿನಂತೆ ಚಲಿಸಲಿದೆ. ಇದರಿಂದಾಗಿ ಪ್ರಯಾಣಿಕರಿಗೆ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಉತ್ತರ ರೈಲ್ವೆಯ ಸಿಪಿಆರ್ಒ ತಿಳಿಸಿದ್ದಾರೆ.
ಸೆಮಿ ಹೈ ಸ್ಪೀಡ್ ರೈಲಿಗೆ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫೆ. 15ರಂದು ಚಾಲನೆ ನೀಡಿದ್ದರು. ಫೆ. 17ರಿಂದ ವಾಣಿಜ್ಯ ಸಂಚಾರ ಆರಂಭಿಸಿತ್ತು. (ಏಜೆನ್ಸೀಸ್)