ಮೌಲ್ಯಾಧಾರಿತ ಶಿಕ್ಷಣದಿಂದ ಸುಭದ್ರ ರಾಷ್ಟ್ರ ನಿರ್ಮಾಣ

ಬೆಳಗಾವಿ: ಭಾರತವು ಸಂಪೂರ್ಣ ಸುಶಿಕ್ಷಿತರ ದೇಶವಾದರೆ ಮಾತ್ರ ಅಭಿವೃದ್ಧಿ ಸುಲಭ. ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಹೇಳಿದ್ದಾರೆ.

ಕೆಎಲ್‌ಇ ಸಂಸ್ಥೆಯ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಅಕಾಡೆಮಿಯ (ಕಹೆರ್) 8ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಂಗಳವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆಗೆ ದೊಡ್ಡ ಕಟ್ಟಡಗಳು, ಕಾರ್ಖಾನೆಗಳನ್ನು ನಿರ್ಮಿಸುವುದಕ್ಕಿಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ದೇಶವನ್ನು ಸುಭದ್ರವಾಗಿ ನಿರ್ಮಿಸಲು ಏನು ಅಗತ್ಯವೋ ಆ ಕೆಲಸ ಮೊದಲು ಆಗಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ತಕ್ಕಂತೆ ಕೌಶಲ ತರಬೇತಿ ನೀಡಿ ಯುವಕರನ್ನು ದೇಶದ ರೂವಾರಿಗಳನ್ನಾಗಿ ಅಣಿಗೊಳಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಹೃದಯಲ್ಲಿ ಪ್ರೀತಿ, ಮಮತೆ ಹಾಗೂ ಸಂವೇದನಶೀಲ ಗುಣಗಳಿದ್ದರೆ ಅವುಗಳೇ ನಿಜವಾದ ಚಿನ್ನದ ಪದಕಗಳು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಚಿನ್ನದ ಪಡೆಯವುದು ಒಂದು ಸಾಧನೆ. ಆದರೆ ಉತ್ತಮ ಸಂಸ್ಕಾರ ಪಡೆದು ಯಶಸ್ವಿ ಜೀವನ ನಡೆಸುವುದು ಮಹತ್ ಸಾಧನೆ ಎಂದು ಪ್ರತಿಭಾವಂತರಿಗೆ ಕಿವಿಮಾತು ಹೇಳಿದರು.

ತಾಯಿ ಗರ್ಭದಲ್ಲಿ ಇರುವಾಗಲೇ ಪ್ರತಿಯೊಬ್ಬ ಮನುಷ್ಯರಿಗೆ ಉತ್ತಮ ಸಂಸ್ಕಾರಗಳು ಬಳುವಳಿಯಾಗಿ ಬರುತ್ತವೆ. ಬಳಿಕ ಪರಿಸರ ಬಂಧು-ಬಾಂಧವರಿಂದ ಮೌಲ್ಯಗಳು ವೃದ್ಧಿಯಾಗುತ್ತ ಹೋಗುತ್ತವೆ. ಸಂಸ್ಕಾರ ಇದ್ದಲ್ಲಿ ವಿವೇಕದ ಸದ್ಬಳಕೆಯಾಗುತ್ತದೆ ಎಂದು ಅವರು ಹೇಳಿದರು.
ಕುಲಾಧಿಪತಿ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಡಾ.ವಿ.ಡಿ.ಪಾಟೀಲ ಘಟಿಕೋತ್ಸವದ ಕಾರ್ಯಕಲಾಪ ನಡೆಸಿಕೊಟ್ಟರು.

ಕೆಎಲ್‌ಇ ಸೇವೆ ಶ್ಲಾಘನೆ

ಕೆಎಲ್‌ಇ ಸಂಸ್ಥೆಯು 102 ವಸಂತಗಳಿಂದ ನಿರಂತರ ಶಿಕ್ಷಣ ದಾಸೋಹ ನೀಡುತ್ತಿದೆ. ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಪ್ರಶಂಸೆ ವ್ಯಕ್ತಪಡಿಸಿದರು.
ಸಪ್ತರ್ಷಿಗಳಿಂದ ಸ್ಥಾಪನೆಯಾಗಿರುವ ಈ ಸಂಸ್ಥೆಯು ಇದೀಗ ಹೆಮ್ಮರವಾಗಿ ಬೆಳೆದಿದೆ. ಕಳೆದ 32 ವರ್ಷಗಳಿಂದ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ದೂರದೃಷ್ಟಿಯ ನಾಯಕ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ 255 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆಗೆ ಈ ಸಂಸ್ಥೆ ಬುನಾದಿ ಹಾಕಿದೆ. ತನ್ಮೂಲಕ ದೇಶ ಕಟ್ಟುವ ಕೆಲಸಕ್ಕೆ ತನ್ನದೇ ಆದ ಸೇವೆಯನ್ನು ಕೆಎಲ್‌ಇ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

51 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಎಂಬಿಬಿಎಸ್, ಎಂ.ಡಿ, ಪಿಎಚ್‌ಡಿ, ಬಿಎಎಂಎಸ್ ಒಳಗೊಂಡು ವಿವಿಧ ಶಾಖೆಗಳಲ್ಲಿ ಉತ್ತೀರ್ಣರಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿರುವ 51 ಜನ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಈ ಬಾರಿ 1,290 ಜನ ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದುಕೊಂಡಿದ್ದಾರೆ. ಈ ಪೈಕಿ 18 ಪಿಎಚ್‌ಡಿ, 348 ಸ್ನಾತಕೋತ್ತರ ಪದವಿ, 754 ವಿದ್ಯಾರ್ಥಿಗಳು ಪದವಿ, 121 ವಿದ್ಯಾರ್ಥಿಗಳು ಪಿಜಿ ಡಿಪ್ಲೋಮಾ, 28 ವಿದ್ಯಾರ್ಥಿಗಳು ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿ ಉತ್ತೀರ್ಣರಾಗಿದ್ದಾರೆ. 6 ೆಲೋಶಿಪ್‌ಗಳು,12 ಪೋಸ್ಟ್ ಡಾಕ್ಟರಲ್ ಪದವಿ ನೀಡಿ ಗೌರವಿಸಲಾಗುತ್ತಿದೆ. ಮೂವರು ಡಿಪ್ಲೋಮಾ ಶಿಕ್ಷಣದಲ್ಲಿ ಸಾಧನೆ ಮಾಡಿದವರಿದ್ದಾರೆ ಎಂದು ಕುಲಪತಿ ಡಾ.ವಿವೇಕ ಸಾವಜಿ ತಿಳಿಸಿದರು.

ನಮ್ಮ ವಿಶ್ವವಿದ್ಯಾಲಯವು ಅಮೆರಿಕದ ಜೇರಸನ್ ವಿಶ್ವವಿದ್ಯಾಲಯದ ಜತೆ ಒಡಂಬಡಿಕೆ ಮಾಡಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹವಾದ ಸಂಶೋಧನೆ ಕೈಗೊಂಡಿದೆ. ವಿಶ್ವವಿದ್ಯಾಲಯದ ಸಂಶೋಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು ಹೆಮ್ಮೆ ಪಡುವಂಥದು ಎಂದರು.

Leave a Reply

Your email address will not be published. Required fields are marked *