ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ಇಡಿ), ಬುಧವಾರ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಧೂಳೆಬ್ಬಿಸಿತು. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಬಳ್ಳಾರಿ ಹಾಗೂ ಬೆಂಗಳೂರಿನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.
ಬೆಂಗಳೂರಿನ 3 ಕಡೆ ಮತ್ತು ಬಳ್ಳಾರಿಯ 5 ಕಡೆ 8 ಪ್ರತ್ಯೇಕ ತಂಡಗಳಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಲ್ಯಾಪ್ಟಾಪ್, ಮೊಬೈಲ್ ಹಾಗೂ ಬ್ಯಾಂಕ್ ದಾಖಲೆ ಸೇರಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಅಧಿ ಕಾರಿಗಳು ಸತತ 12 ಗಂಟೆ ಶೋಧ ನಡೆಸಿ ಪ್ರತಿಯೊಬ್ಬರಿಗೂ 28 ಹೆಚ್ಚು ಪ್ರಶ್ನೆ ಕೇಳಿದ್ದಾರೆ. ದಾಳಿಯು ಮುಂದುವರಿಯಲಿದ್ದು, ದಾಳಿಗೀಡಾದವರಿಗೆ ಸದ್ಯದಲ್ಲೇ ನೋಟಿಸ್ ಜಾರಿ ಮಾಡಿ ಹೆಚ್ಚಿನ ವಿಚಾರಣೆ ನಡೆಸುವುದಾಗಿ ಇ.ಡಿ. ಮೂಲಗಳು ತಿಳಿಸಿವೆ.
ಏನೇನಾಯ್ತು?: ಇ.ಡಿ. ಅಧಿಕಾರಿಗಳು ಆರಂಭದಲ್ಲಿ ಶಾಸಕ ಗಣೇಶ ಅವರ ಕಂಪ್ಲಿ ನಿವಾಸದ ಬದಲು ಕುರುಗೋಡಿನ ಕಚೇರಿಗೆ ತೆರಳಿದರು. ಬಾಗಿಲು ಹಾಕಿದ್ದರಿಂದ ಕಂಪ್ಲಿ ನಿವಾಸಕ್ಕೆ ಆಗಮಿಸಿ ಶೋಧ ನಡೆಸಿದರು. ಸಂಸದ ಈ.ತುಕಾರಾಮ್ ಬೆಂಗಳೂರಿಗೆ ತೆರಳುವ ಉದ್ದೇಶದಿಂದ ಬ್ಯಾಂಕ್ನಿಂದ 1 ಲಕ್ಷ ರೂ. ಡ್ರಾ ಮಾಡಿ ತಂದಿದ್ದ ಹಣ ವಶಕ್ಕೆ ಪಡೆದು ಕಾರು ಪರಿಶೀಲಿಸಲಾಯಿತು. ದಾಳಿ ವೇಳೆ ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಮನೆಯಲ್ಲಿ ಇರಲಿಲ್ಲ. ಕೆಲಸ ನಿಮಿತ್ತ ತುಮಕೂರಿಗೆ ಹೋಗಿದ್ದರು. ವಿಷಯ ತಿಳಿದು ಮಧ್ಯಾಹ್ನ ವೇಳೆಗೆ ಶಾಸಕರು ಸ್ವಗ್ರಾಮದ ಮನೆಗೆ ಆಗಮಿಸಿ ತನಿಖೆಗೆ ಸಹಕರಿಸಿದರು.
ಡೈರಿ ಇಟ್ಟುಕೊಂಡು ಪ್ರಶ್ನೆ ಕೇಳಿದ ಇ.ಡಿ
ಬಿ.ನಾಗೇಂದ್ರ ಪಿ.ಎ ಗೋವರ್ಧನ್ ಬಳಿ ಸಿಕ್ಕ ಡೈರಿ ಆಧಾರವಾಗಿಟ್ಟುಕೊಂಡು ಶಾಸಕರು ಮತ್ತು ಸಂಸದ ಅವರನ್ನು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿಯಲ್ಲಿ ಎಲ್ಲೆಲ್ಲಿ ದಾಳಿ?
* ಸಂಸದ ತುಕಾರಾಮ್ ಅವರ ಸಂಡೂರು ಪಟ್ಟಣದ ಮನೆ
* ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಕುರುಗೋಡಿನ ಮನೆ, ಕಚೇರಿ
* ಬಳ್ಳಾರಿ ನೆಹರು ಕಾಲನಿಯ ಶಾಸಕ ನಾರಾ ಭರತರೆಡ್ಡಿ ಅವರ ನಿವಾಸ
* ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಮನೆ, ಹುಟ್ಟೂರು ನರಸಿಂಹಗಿರಿ ನಿವಾಸ
* ಬಿ.ನಾಗೇಂದ್ರ ಅವರ ನಿವಾಸ, ಇವರ ಆಪ್ತ ಸಹಾಯಕ ಗೋವರ್ಧನರೆಡ್ಡಿ ಮನೆ
ಯಾವೆಲ್ಲ ವಸ್ತು ವಶ?
* ಲ್ಯಾಪ್ಟಾಪ್, ಮೊಬೈಲ್, ಬ್ಯಾಂಕ್ ದಾಖಲೆ
* ತುಕಾರಾಮ್ ಮನೆಯಲ್ಲಿದ್ದ 1 ಲಕ್ಷ ನಗದು
* ಎಲ್ಲರ ಹೇಳಿಕೆಗಳ ವಿಡಿಯೋ ರೆಕಾರ್ಡ್
ದುಡ್ಡಿನ ಫೋಟೋ ರಿಕವರಿ ಮಾಡಿದ್ದ ಇ.ಡಿ
21 ಕೋಟಿ ರೂ.ಗಳ ಫೋಟೋವನ್ನು ಇಡಿ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ನಾಗೇಂದ್ರ ಪಿ.ಎ ಗೋವರ್ಧನ ಮೂಲಕ ಹವಾಲ ಹಣ ನೀಡಲಾಗಿದೆ. ಹವಾಲಕ್ಕೆ ಬಳಸಿದ್ದ 20 ರೂಪಾಯಿ ನೋಟಿನ ಫೋಟೋ ಮತ್ತು ಹವಾಲಾ ಮೂಲಕ ಪಡೆದ ಕಂತೆಕಂತೆ ಹಣದ ಫೋಟೋ ಹಾಗೂ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಪಟ್ಟಿಯೂ ಇ.ಡಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಹಗರಣದ ಹಿನ್ನೆಲೆ
* 2023ರಲ್ಲಿ ನಡೆದಿದ್ದ 187 ಕೋಟಿ ಅಕ್ರಮ ಹಣ ವರ್ಗಾವಣೆ ಕೇಸ್
* ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು
* ರಾಜ್ಯ ಸರ್ಕಾರ ಸಿಐಡಿಯ ಎಸ್ಐಟಿ ತನಿಖೆಗೆ ಆದೇಶಿಸಿತ್ತು
* ನಿಗಮದ ವ್ಯವಸ್ಥಾಪಕ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದರು
* 12 ಆರೋಪಿಗಳ ವಿರುದ್ಧ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿತ್ತು
* ಇ.ಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು
* ನಾಗೇಂದ್ರ ನಿವಾಸ ಸೇರಿ 20 ಕಡೆ ದಾಳಿ ಇಡಿ ದಾಳಿ
* ಸಚಿವರಾಗಿದ್ದ ಬಿ.ನಾಗೇಂದ್ರ ಬಂಧನ
* ಬಳಿಕ ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು
ಪ್ರಕರಣವೇನು?
ಕಳೆದ ವರ್ಷ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅನುದಾನ ದುರುಪಯೋಗವಾಗಿದೆ ಎಂದು ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪತ್ನಿಯ ದೂರಿನ ಮೇರೆಗೆ ಶಿವಮೊಗ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ನಿಗಮದ ಹಣ ಬ್ಯಾಂಕ್ ಮೂಲಕ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಜೆಪಿಯೂ ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಸಿಕೊಂಡಿದ್ದಾಗಿ ಆರೋಪಿಸಿದ್ದರಿಂದ ಸರ್ಕಾರ ಎಸ್ಐಟಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು. ಶಾಸಕ ಬಿ. ನಾಗೇಂದ್ರ ಪಾತ್ರ ಏನು ಇಲ್ಲ ಎಂಬುದಾಗಿ ಎಸ್ಐಟಿ ವರದಿ ಸಲ್ಲಿಸಿತು. ಆದರೆ, ನೆರೆ ರಾಜ್ಯಕ್ಕೂ ಹಣ ವರ್ಗಾವಣೆಗೊಂಡಿದ್ದರಿಂದ ಇ.ಡಿ. ದೂರು ದಾಖಲಿಸಿಕೊಂಡು ತನಿಖೆ ನಡೆಸಿತು. ಈ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರಲ್ಲದೇ ಜೈಲು ಕೂಡ ಸೇರಿದ್ದರು.
ಇ.ಡಿ. ಮೊದಲಿನಿಂದಲೂ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡುತ್ತಿದೆ. ವರ್ಷದ ಹಿಂದಿನ ಚುನಾವಣೆ ಖರ್ಚು ಎಂಬ ಕಾರಣಕೊಟ್ಟು ಇದೀಗ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದೆ. ಚುನಾವಣೆಯಲ್ಲಿ ಎಲ್ಲ ಪಕ್ಷದವರ ಸಾವಿರಾರು ಕೋಟಿ ರೂ. ಜಪ್ತಿ ಮಾಡಲಾಗಿತ್ತು. ಆ ಹಣ ಎಲ್ಲಿಗೆ ಹೋಯ್ತು ಎಂಬುದು ಈವರೆಗೆ ತಿಳಿದಿಲ್ಲ. ಇ.ಡಿ ಕಡೆಯಿಂದ ಕಿರುಕುಳ ಕೊಟ್ಟರೆ ಪಕ್ಷದಲ್ಲಿ ಭೇದ ಉಂಟಾಗುತ್ತದೆ. ಇದರಿಂದ ನಾವು ಲಾಭ ಮಾಡಿಕೊಳ್ಳಬಹುದೆಂಬುದು ಬಿಜೆಪಿ ಲೆಕ್ಕಾಚಾರ.
| ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ದಾಳಿಗೀಡಾದ ನಾಯಕರು
* ಬಳ್ಳಾರಿ ಸಂಸದ ಈ. ತುಕಾರಾಂ
* ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ
* ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್ ಗಣೇಶ್
* ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್
* ಬಳ್ಳಾರಿ ನಗರ ಶಾಸಕ ನಾರಾ ಭರತ್ರೆಡ್ಡಿ
* ಬಿ.ನಾಗೇಂದ್ರ ಆಪ್ತ ಸಹಾಯಕ ಗೋವರ್ಧನ್
ಕಾನೂನಿನ ಪ್ರಕಾರ ಯಾವುದೇ ಕೆಲಸಗಳಿಗೆ ಅಡ್ಡಿ ಮಾಡುವುದಿಲ್ಲ. ಆದರೆ, ದುರುದ್ದೇಶಪೂರಿತ ಕೆಲಸ ಮಾಡಬಾರದಷ್ಟೇ. ಕಾಂಗ್ರೆಸ್ ನಾಯಕರ ಮನೆ ಮೇಲೆ ಇಡಿ ದಾಳಿ ಮಾಡಿದರೆ ನಾನು ಏನು ಮಾಡುವುದಕ್ಕಾಗುತ್ತದೆ?
| ಸಿದ್ದರಾಮಯ್ಯ ಸಿಎಂ
ವಾಲ್ಮೀಕಿ ಹಗರಣಕ್ಕೂ ನಮ್ಮ ಶಾಸಕ, ಸಂಸದರಿಗೂ ಸಂಬಂಧವಿಲ್ಲ. ನಮ್ಮವರು ಚುನಾವಣೆಯಲ್ಲಿ ಹಣ ಹಂಚಿಲ್ಲ. ಹಗರಣದಲ್ಲಿ ಅಧಿಕಾರಿಗಳಿಂದ ದುರ್ಬ ಳಕೆ ಆಗಿದ್ದ ಶೇ.90 ಹಣ ವಶಕ್ಕೆ ಪಡೆದಿದ್ದೇವೆ.
| ಡಿ.ಕೆ.ಶಿವಕುಮಾರ್ ಡಿಸಿಎಂ
ದಾಳಿ ನಡೆದಿದ್ದು ಏಕೆ?
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ್ದ 187 ಕೋಟಿ ರೂ. ದುರ್ಬಳಕೆಯಾಗಿರುವ ಆರೋಪ ಕೇಳಿ ಬಂದಿತ್ತು. ಈ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗದು ರೂಪದಲ್ಲಿ ಹಂಚಲಾಗಿತ್ತು. ನಿಗಮದ 94 ಕೋಟಿ ರೂ.ಗಳನ್ನು ಯೂನಿಯನ್ ಬ್ಯಾಂಕ್ ಅಧಿಕಾರಿಗಳ ಸಹಕಾರದಲ್ಲಿ ನಕಲಿ ಖಾತೆ ಸೃಷ್ಟಿಸುವ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಆ ಹಣ ತೆಲಂಗಾಣ ವಿಧಾನಸಭೆ ಚುನಾವಣೆ, ಬಳ್ಳಾರಿಯ ಲೋಕಸಭೆ ಚುನಾವಣೆ ಖರ್ಚಿಗೆ ಬಳಸಲಾಗಿತ್ತೆಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ದಾಳಿ ನಡೆದಿದೆ.
ತೃತೀಯ ಲಿಂಗಿಗಳಿಂದ ಈ ವಸ್ತುಗಳನ್ನು ತೆಗೆದುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆಯಂತೆ! Transgender women