ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ವಾಲ್ಮೀಕಿ ನಿಗಮ ಹಗರಣದ ಆರೋಪಿಗಳ ಕುಣಿಕೆ ಇನ್ನಷ್ಟು ಬಿಗಿಯಾಗಿದೆ. ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿರುವುದರಿಂದ ಆರೋಪಿಗಳಿಗೆ ಆದಾಯ ಮೀರಿದ ಆಸ್ತಿ ಕೈತಪ್ಪುವ ಆತಂಕ ಶುರುವಾಗಿದೆ.
ವಾಲ್ಮೀಕಿ ನಿಗಮದ ಅಕ್ರಮಗಳ ಕುರಿತ ಎಲ್ಲ ಪ್ರಕರಣಗಳ ತನಿಖೆ ಕೈಗೊಂಡ ಎಸ್‌ಐಟಿ ಅಧಿಕಾರಿಗಳು ತನಿಖೆ ವೇಳೆ 12 ಆರೋಪಿಗಳನ್ನು ಬಂಧಿಸಿ 3ನೇ ಎಸಿಎಂಎಂ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ನಿಗಮದ ಮಾಜಿ ವ್ಯವಸ್ಥಾಪಕ ಜೆ.ಜಿ. ಪದ್ಮನಾಭ್, ಮಾಜಿ ಲೆಕ್ಕಾಧಿಕ್ಷಕ ಪರಶುರಾಮ ದುರ‌್ಗಣ್ಣನವರ್, ತೆಲಂಗಾಣದ ಸ್ಟ್ ೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ಬಿ. ನಾಗೇಂದ್ರ ಆಪ್ತ ನೆಕ್ಕುಂಟೆ ನಾಗರಾಜ್, ಈತನ ಭಾವಮೈದುನ ನಾಗೇಶ್ವರ ರಾವ್, ಹೈದರಾಬಾದ್ ಮೂಲದ ಎಂ. ಚಂದ್ರಮೋಹನ್, ಗಾದಿರಾಜು ಸತ್ಯನಾರಾಯಣ ವರ್ಮ, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶ ಮೂಲದ ಪಿಟ್ಟಲ ಶ್ರೀನಿವಾಸ, ಹೈದರಾಬಾದ್ ಮೂಲದ ಸಾಯಿತೇಜ ಮತ್ತು ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ ರಾವ್ ಎಂಬುವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದೆ.
ಲೋಕಾ ಕೋರ್ಟ್‌ಗೆ
ಎಲ್ಲ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವಿವಿಧ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿ ಎಸ್‌ಐಟಿ ಅಧಿಕಾರಿಗಳು 3ನೇ ಎಸಿಎಂಎಂ ಕೋರ್ಟ್ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಮುಂದಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ನಡೆಸಲಿದೆ. ಇದಲ್ಲದೆ ಆರೋಪಿ ಸರ್ಕಾರಿ ಅಧಿಕಾರಿಗಳ ಆಸ್ತಿಯನ್ನು ಕೆದಕಲಿದೆ.
ಮುಂದಿನ ಪ್ರಕ್ರಿಯೆ?
* ಲೋಕಾ ವಿಶೇಷ ಕೋರ್ಟ್ ವಿಚಾರಣೆ
* ಆರೋಪಿತರ ಆಸ್ತಿ ದಾಖಲೆ ಸಂಗ್ರಹ
* ಪಡೆದ ವೇತನ, ಆಸ್ತಿ ಮೌಲ್ಯ ವಿಚಾರಣೆ
* ಆದಾಯ ಮೀರಿದ ಆಸ್ತಿಗಾಗಿ ಪರಿಶೀಲನೆ
* ಸಿಕ್ಕಿಬಿದ್ದರೆ ಎಲ್ಲ ಆರೋಪಿಗಳ ಆಸ್ತಿ ಸೀಜ್
600 ಬ್ಯಾಂಕ್ ಖಾತೆ ಪತ್ತೆ
ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆ್ ಇಂಡಿಯಾದಲ್ಲಿ ಖಾತೆ ತೆರೆದು ಹಣಕಾಸು ಇಲಾಖೆಯಿಂದ 187 ಕೋಟಿ ರೂ. ವರ್ಗಾವಣೆ ಮಾಡಿಸಿಕೊಳ್ಳಲಾಗಿತ್ತು. ಈ ಪೈಕಿ 89.62 ಕೋಟಿ ರೂ. ತೆಲಂಗಾಣದ ಸ್ಟ್ ೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 18 ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.ಇದಾದ ಮೇಲೆ 250ಕ್ಕೂ ಅಧಿಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಅಲ್ಲಿಂದ 600ಕ್ಕೂ ಅಧಿಕ ಖಾತೆಗೆ ವರ್ಗಾವಣೆ ಮಾಡಿ ಆನಂತರ ಖಾತೆದಾರರಿಗೆ ಕಮಿಷನ್ ಕೊಟ್ಟು ಸಣ್ಣ ಸಣ್ಣ ಪ್ರಮಾಣದ ನಗದು ಡ್ರಾ ಮಾಡಿದ್ದಾರೆ. ಈ ಎಲ್ಲ ಖಾತೆದಾರರ ಮಾಹಿತಿ ಕಲೆ ಹಾಕಲಾಗಿದೆ.
62 ಕೋಟಿ ರೂ. ಸಂಗ್ರಹ?
ಪ್ರಸ್ತುತ 16.83 ಕೋಟಿ ರೂ. ನಗದು, 11.70 ಕೋಟಿ ರೂ. ಮೌಲ್ಯದ 16 ಕೆಜಿ 256 ಗ್ರಾಂ ಚಿನ್ನ, 4.51 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಕಾರು, ತನಿಖಾಧಿಕಾರಿ ಹೆಸರಿನಲ್ಲಿ 3.19 ಕೋಟಿ ರೂ. ಹಾಗೂ ಜಪ್ತಿಯಾಗಿರುವ ಬ್ಯಾಂಕ್ ಖಾತೆಯಲ್ಲಿ 13.72 ಕೋಟಿ ರೂ. ಸೇರಿದಂತೆ ಒಟ್ಟಾರೆ 49.96 ಕೋಟಿ ರೂ.ಅನ್ನು ಜಪ್ತಿ ಮಾಡಿದ್ದಾರೆ. ಎಲ್ಲ ಖಾತೆದಾರರಿಗೆ ತಮ್ಮ ಖಾತೆಗೆ ಬಂದಿರುವ ಹಣ ವಾಪಸ್ ಜಮೆ ಮಾಡುವಂತೆ ಸೂಚಿಸಲಾಗಿದೆ. ಒಟ್ಟಾರೆ 62 ಕೋಟಿ ರೂ. ಸಂಗ್ರಹ ಆಗುವ ಸಾಧ್ಯತೆ ಇದೆ ಎಂದು ಎಸ್‌ಐಟಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಎಸ್‌ಐಟಿ ತನಿಖೆ ಮುಗಿದಿಲ್ಲ
ಸಿಐಡಿ ಅಧಿಕಾರಿಗಳು ನೋಟಿಸ್ ಕೊಟ್ಟು ಮಾಜಿ ಸಚಿವ ಬಿ. ನಾಗೇಂದ್ರ , ಶಾಸಕ ಬಸನಗೌಡ ದದ್ದಲ್ ವಿಚಾರಣೆ ನಡೆಸಿದ್ದರು. ನಾಗೇಂದ್ರರನ್ನು ಒಮ್ಮೆ ವಿಚಾರಣೆ ನಡೆಸಿದ್ದರೆ, ದದ್ದಲ್‌ಗೆ ಮೂರ‌್ನಾಲ್ಕು ಬಾರಿ ಕರೆದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಅಷ್ಟರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಾಗೇಂದ್ರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದೆ. ತನಿಖೆ ಮುಂದುವರಿಸಿರುವ ಎಸ್‌ಐಟಿ ಅಧಿಕಾರಿಗಳು, ಅಗತ್ಯಬಿದ್ದಲ್ಲಿ ಮತ್ತಷ್ಟು ಜನರನ್ನು ಬಂಧಿಸಿ ಅಂತಿಮ ಆರೋಪಪಟ್ಟಿ ಸಲ್ಲಿಸುವವರಿದ್ದಾರೆ.
ಏನಿದು ಪ್ರಕರಣ?
ನಿಗಮದ ಹೆಸರಿನಲ್ಲಿ ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆ್ ಇಂಡಿಯಾದಲ್ಲಿ ಖಾತೆ ತೆರೆದು 187 ಕೋಟಿ ರೂ.ಗಳನ್ನು ಹಣಕಾಸು ಇಲಾಖೆಯಿಂದ ವರ್ಗಾಯಿಸಲಾಗಿತ್ತು. ಈ ಪೈಕಿ 89.62 ಕೋಟಿ ರೂ. ತೆಲಂಗಾಣದ 18 ಬ್ಯಾಂಕ್ ಖಾತೆಗೆ ವರ್ಗಾಯಿಸಿ ಲಪಟಾಯಿಸಿದ್ದರು. ಪ್ರಕರಣದ ತನಿಖೆ ನಡೆಸುವ ಜತೆಗೆ ಸರ್ಕಾರದ ಹಣ ಜಪ್ತಿ ಮಾಡುವುದಕ್ಕಾಗಿ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿಯ ಎಸ್‌ಐಟಿ ಅಧಿಕಾರಿಗಳು ನಿಗಮದ ಹಗರಣ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿತ್ತು. ಇದರ ಜತೆಗೆ ದಾಖಲೆ ಪತ್ರಗಳನ್ನು ದುರ್ಬಳಕೆ ಸಂಬಂಧ ಖಾಸಗಿ ಕಂಪನಿಗಳು ಸಲ್ಲಿಸಿದ್ದ 7 ಪ್ರತ್ಯೇಕ ಎ್ಐಆರ್ ದಾಖಲಾಗಿದ್ದವು.