ನವದೆಹಲಿ/ ಜಮ್ಮು: ಕಣಿವೆ ರಾಜ್ಯದ ಹಳ್ಳಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮುಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಸಚಿವರ ತಂಡಕ್ಕೆ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನ ಮಾನ ರದ್ದುಪಡಿಸಿದ ನಂತರ, ಕೇಂದ್ರ ಸರ್ಕಾರದ 38 ಸಚಿವರ ತಂಡ ಅಲ್ಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಜನರನ್ನು ಭೇಟಿಯಾಗಿ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಂತೆ ಪ್ರಧಾನಿ ಸೂಚಿಸಿದ್ದಾರೆ.
ಕೇಂದ್ರದ 38 ಸಚಿವರ ತಂಡ ಕಣಿವೆ ರಾಜ್ಯದಲ್ಲಿ ಜ.18ರಿಂದ 24ರವರೆಗೆ ಪ್ರವಾಸ ನಡೆಸಿ, 60 ಸ್ಥಳಗಳಿಗೆ ಭೇಟಿ ನೀಡಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಕಾರ್ಯದರ್ಶಿ ಬಿ.ವಿ.ಆರ್.ಸುಬ್ರಮಣ್ಯಂ ತಿಳಿಸಿದ್ದಾರೆ.
ಸಚಿವರ ತಂಡ ಪ್ರವಾಸವನ್ನು ಕೇವಲ ನಗರ ಪ್ರದೇಶಗಳಿಗೆ ಸೀಮಿತಗೊಳಿಸದೆ, ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟದಲ್ಲಿರುವ ಜನರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಅವರಿಗೆ ಸರಳವಾಗಿ ತಿಳಿಸಲು ಮುಂದಾಗಿದೆ.
ಸಚಿವರ ತಂಡ 2 ವಿಭಾಗಗಳಲ್ಲಿ ಕಣಿವೆ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ. ಜಮ್ಮುವಿನ 51 ಹಾಗೂ ಕಾಶ್ಮೀರದ 8 ಪ್ರದೇಶಗಳಿಗೆ ತಂಡ ಭೇಟಿ ನೀಡಲಿದೆ.
ಕೇಂದ್ರ ಸಚಿವ ಸ್ಮೃತಿ ಇರಾನಿ ಜನವರಿ 19 ರಂದು ಕತ್ರಾ ಮತ್ತು ಪಂಥಾಲ್ ಪ್ರದೇಶಗಳಿಗೆ. ಸಚಿವ ಪಿಯೂಷ್ ಗೋಯಲ್ ಶ್ರೀನಗರಕ್ಕೆ ಭೇಟಿ ನೀಡಲಿದ್ದಾರೆ.
ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಜ. 22 ರಂದು ಗಂಡರ್‌ಬಾಲ್ ಹಾಗೂ ಜ.23ರಂದು ಮಣಿಗಂ ಪ್ರದೇಶಕ್ಕೆ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಜ. 24 ರಂದು ಬಾರಾಮುಲ್ಲಾ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. (ಏಜೆನ್ಸೀಸ್)