ವಳಗೇರಮ್ಮ ಉತ್ಸವ ಸ್ಥಗಿತ

ಚನ್ನರಾಯಪಟ್ಟಣ: ಪಟ್ಟಣದ ಬಾಗೂರು ರಸ್ತೆಯಲ್ಲಿ ಎರಡು ಕೋಮಿನ ನಡುವೆ ನಡೆದ ಗಲಭೆಯಿಂದ ಈ ಬಾರಿ ವಳಗೇರಮ್ಮ ದೇವಾಲಯದಲ್ಲಿ ನಡೆಯಬೇಕಿದ್ದ ಬೆಳ್ಳಿಪಲ್ಲಕ್ಕಿ ಉತ್ಸವವನ್ನು ಸ್ಥಗಿತ ಮಾಡಲಾಗಿತ್ತು.

ಪ್ರತಿ ವರ್ಷ ಕಡೆ ಕಾರ್ತಿಕ ಸೋಮವಾರ ಪಟ್ಟಣದ ಅಧಿದೇವತೆ ವಳಗೇರಮ್ಮ ದೇವಾಲಯದಲ್ಲಿ ಭಕ್ತರು ಪಲ್ಲಕ್ಕಿ ಉತ್ಸವ ಮಾಡುತ್ತಿದ್ದರು. ಕಳೆದ ವಾರದಲ್ಲಿ ನಡೆದ ಗಲಭೆಯಿಂದ ಬಾಗೂರು ರಸ್ತೆಯಲ್ಲಿನ ಚಿಕ್ಕಮೊಹಲ್ಲ, ದೊಡ್ಡಮೊಹಲ್ಲ, ವಳಗೇರಮ್ಮ ದೇವಾಲಯ ಬೀದಿ, ಗಾಣಿಗರ ಬೀದಿ, ಬೆಸ್ತರಬೀದಿಯಲ್ಲಿ ನಿಷೇಧಾಜ್ಞೆಯಿಂದ ಪರಿಸ್ಥಿತಿ ತಣ್ಣದಾಗಿದೆ.

ಈ ವೇಳೆಯಲ್ಲಿ ಉತ್ಸವ ನಡೆದರೆ ಮತ್ತೆ ಗಲಭೆ ಉಂಟಾಗಬಹುದೆಂದು ಮುಂಜಾಗ್ರತೆಯಾಗಿ ಪಟ್ಟಣದ ಪೊಲೀಸರು ಉತ್ಸವ ಮಾಡದಂತೆ ದೇವಾಲಯ ಆಡಳಿತ ಮಂಡಳಿಗೆ ತಿಳಿಸಿದ್ದರಿಂದ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಪೂಜೆ ನಡೆಸಿದ್ದು ಧ್ವನಿವರ್ಧಕ ಬಳಸುತ್ತಿಲ್ಲ, ಭಕ್ತರ ಸಂಖ್ಯೆ ಮಾತ್ರ ಇಳಿಮುಖವಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು.