ಪ್ರತಿದಿನವೂ ಪ್ರೇಮಿಗಳ ದಿನವೇ ಆದರೂ, ಫೆ.14ರಂದು ವಿಶೇಷವಾಗಿ ವ್ಯಾಲಂಟೈನ್ಸ್ ಡೇ ಆಚರಿಸಲಾಗುತ್ತದೆ. ವಿಶೇಷ ಉಡುಗೊರೆ ಅಥವಾ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಆ ದಿನವನ್ನು ಪ್ರೀತಿ ಪಾತ್ರರಿಗೆ ಮೀಸಲಿಡುತ್ತಾರೆ. ಸ್ಯಾಂಡಲ್‌ವುಡ್‌ನಲ್ಲೂ ಹಲವರು ಪ್ರೀತಿ ಗೆದ್ದವರಿದ್ದಾರೆ. ಅದರಲ್ಲಿ ನಟ ಧನಂಜಯ್, ನಟಿಯರಾದ ಹರ್ಷಿಕಾ ಪೂಣಚ್ಚ, ಸಿರಿ ಪ್ರಹ್ಲಾದ್ ತಮ್ಮ ಪ್ರೀತಿ ಅರಳಿದ ಹಾಗೂ ಅರ್ಥ ಮಾಡಿಕೊಂಡಿರುವ ಪರಿಯನ್ನು ‘ವ್ಯಾಲೆಂಟೈನ್ ಡೇ’ ಪ್ರಯುಕ್ತ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ನಮ್ಮಿಬ್ಬರ ಆಲೋಚನೆ ಒಂದೇ: ನಟ ಧನಂಜಯ್, ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದುರ್ಗ ಮೂಲದ ಡಾ. ಧನ್ಯತಾರನ್ನು ಮದುವೆಯಾಗುತ್ತಿರುವ ಧನಂಜಯ್, ಇಬ್ಬರ ನಡುವೆ ‘ಪ್ರೇಮ ಅರಳಿದ’ ಪರಿ ಬಗ್ಗೆ, ‘ಧನ್ಯತಾ ವಿದ್ಯಾರ್ಥಿನಿಯಾಗಿದ್ದಾಗ ನನ್ನ ಅಭಿಮಾನಿ. ಆಗ ಜಯನಗರದಲ್ಲಿ ಒಮ್ಮೆ ಭೇಟಿ ಮಾಡಿದ್ದೆ. ನನ್ನ ಸಿನಿಮಾ ನೋಡಿದಾಗ, ಪ್ರಶಸ್ತಿ ಬಂದಾಗ ಜಾಲತಾಣದಲ್ಲಿ ಹಾರೈಸುತ್ತಿದ್ದರು. ಕಳೆದ ವರ್ಷ ಇನ್ನೊಮ್ಮೆ ಭೇಟಿ ಮಾಡಿದೆವು. ಅವರ ಸರಳತೆ, ನಮ್ಮಿಬ್ಬರ ಆಲೋಚನೆ, ಅವರ ವೃತ್ತಿಪರತೆ ಬಹಳ ಇಷ್ಟವಾಯಿತು. ಅವರ ಜತೆಗಿದ್ದರೆ ಬದುಕು ಚೆನ್ನಾಗಿರುತ್ತೆ ಅಂತನ್ನಿಸಿತು. ಧನ್ಯತಾ ಜತೆಯಲ್ಲೇ ಜೀವನ ಮಾಡಬೇಕು ಅಂತನ್ನಿಸಿತು.’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಇದೇ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಿರುವ ಧನಂಜಯ ಹಾಗೂ ಧನ್ಯತಾ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಆರಂಭವಾಗಿವೆ. ಗುರುವಾರ ಧನಂಜಯ್ ಸ್ವಗ್ರಾಮ ಕಾಳೇನಹಳ್ಳಿಯಲ್ಲಿ ಪೂಜೆ ನೆರವೇರಿಸಿದ್ದಾರೆ. ಧನ್ಯತಾ ಮನೆಯಲ್ಲಿ ಮೆಹೆಂದಿ ಶಾಸ ನಡೆದಿದೆ. ಶುಕ್ರವಾರ ಅರಿಸಿನ ಶಾಸ ನಡೆಯಲಿದೆ.
11-11-11 ಪ್ರೀತಿಯ ಮೊದಲ ಅಧ್ಯಾಯ: ನಟಿ ಹರ್ಷಿಕಾ ಪೂಣಚ್ಚ ಬಹುಕಾಲದ ಗೆಳೆಯ, ನಟ ಭುವನ್ ಪೊನ್ನಣ್ಣ ಅವರನ್ನು ಪ್ರೀತಿಸಿ 2023ರ ಆ.24ರಂದು ಮದುವೆಯಾಗಿದ್ದರು. ಲವ್‌ಸ್ಟೋರಿ ಬಗ್ಗೆ ಹರ್ಷಿಕಾ, ‘ನಾನು ಮೊದಲ ಬಾರಿ ಭುವನ್‌ರನ್ನು 2011ರ ನವೆಂಬರ್ 11ರಂದು ಭೇಟಿಯಾಗಿದ್ದೆ. ಅಂದು ಬೆಂಗಳೂರಿನಲ್ಲಿ ಕೊಡವ ಸಮಾಜದ ವಾರ್ಷಿಕೋತ್ಸವ ಆಚರಣೆ ಇತ್ತು. ಅದರಲ್ಲಿ ನಾನು ಶೋ ಸ್ಟಾಪರ್ ಆಗಿದ್ದೆ. ಅದಕ್ಕೆ ಭುವನ್ ಕೊರಿಯೋಗ್ರರ್ ಆಗಿದ್ದರು. ಅವತ್ತೇ ಅವರನ್ನು ಭೇಟಿಯಾಗಿದ್ದು. ಮೊದಲ ಭೇಟಿಯಲ್ಲೇ ಅವರು ಇಷ್ಟವಾದರು. ಶೋ ಕೂಡ ತುಂಬಾ ಯಶಸ್ವಿಯಾಯಿತು. ಬಳಿಕ ಇಬ್ಬರು ನಂಬರ್ ವಿನಿಮಯ ಮಾಡಿಕೊಂಡೆವು. ಕುಶಲೋಪರಿ ಮೆಸೇಜ್‌ನಲ್ಲಿ ನಡೆಯುತ್ತಿತ್ತು. 2012ರ ಆ. 15ರಂದು ‘ಅಗ್ರಜ’ ಚಿತ್ರದ ಮುಹೂರ್ತ ಇತ್ತು. ಆ ಕಾರ್ಯಕ್ರಮದಲ್ಲಿ ಇಬ್ಬರು ಪಾಲ್ಗೊಂಡಿದ್ದೆವು. ಬಳಿಕ ಅವರು ನನ್ನನ್ನು ಮನೆಗೆ ಡ್ರಾಪ್ ಮಾಡುವಾಗ ಪ್ರಪೋಸ್ ಮಾಡಿದ್ದರು. ನಾನು ಕೂಡ ಒಪ್ಪಿಕೊಂಡೆ. ನಂತರ ಮದುವೆಯಾದೆವು’ ಎಂದು ಹೇಳಿಕೊಳ್ಳುತ್ತಾರೆ. ಹರ್ಷಿಕಾ ಕಳೆದ ಸೆ.3ರಂದು ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ತಾಯಿಯಾದ ಬಳಿಕ ಮೊದಲ ‘ವ್ಯಾಲಂಟೈನ್ ಡೇ’ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರೀತಿಯಲ್ಲಿ ಇಬ್ಬರ ಕನಸುಗಳಿವೆ: ‘ವಿಜಯಾನಂದ’ ಖ್ಯಾತಿಯ ನಟಿ ಸಿರಿ ಪ್ರಹ್ಲಾದ್ ಕಳೆದ 2024ರ ಪ್ರೇಮಿಗಳ ದಿನದಂದು ನಟ ಮಧುಸೂದನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂತೆಯೇ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಈ ತಾರಾ ದಂಪತಿ ಮೊದಲನೇ ವರ್ಷದ ‘ಪ್ರೇಮಿಗಳ ದಿನ’ ಆಚರಿಸಿಕೊಳ್ಳುತ್ತಿದ್ದಾರೆ. ‘ಪ್ರೀತಿ ಇದ್ದಲ್ಲಿ ಜೀವನ ಚೆನ್ನಾಗಿರುತ್ತದೆ. ಮಾಡುವ ಕೆಲಸ ಹಾಗೂ ಯೋಚನೆ ಎಲ್ಲದರಲ್ಲಿಯೂ ಪ್ರೀತಿ ಇರಲೇಬೇಕು. ಇನ್ನು ಅದಕ್ಕೆ ತಕ್ಕಂತೆ ಸಂಗಾತಿ ಸಿಕ್ಕರೆ ನಮ್ಮ ಕೆಲಸ, ವೃತ್ತಿಯಲ್ಲಿ ಯಶಸ್ಸು ಕಾಣಬಹುದು. ಈ ವಿಚಾರದಲ್ಲಿ ಪತಿ ಮಧುಸೂದನ್ ಬೆಂಬಲವಾಗಿದ್ದಾರೆ. ನಾವು ಪ್ರೀತಿಸಿ ಮದುವೆಯಾಗಿದ್ದು. ನಮ್ಮ ಪ್ರೀತಿಗೆ ಸಿನಿಮಾನೇ ಕಾರಣ. ಪ್ರತಿನಿತ್ಯ ನಾವು ಸಿನಿಮಾದ ಬಗ್ಗೆಯೇ ಯೋಚಿಸಬಹುದು, ಮಾತನಾಡಬಹುದು ಎಂಬ ಕಾರಣಕ್ಕೆ ಇಬ್ಬರು ಮದುವೆಯಾದೆವು. ಈಗಲೂ ನಾವು ಹಾಗೆಯೇ ಇದ್ದೇವೆ. ನಮಗೆ ಪ್ರತಿದಿನವೂ ಪ್ರೇಮಿಗಳ ದಿನವೇ. ನಮ್ಮ ಕನಸು, ಗುರಿ ಹಾಗೂ ಆಲೋಚನೆಗಳನ್ನು ಪ್ರೀತಿಪೂರ್ವಕವಾಗಿಯೇ ಹಂಚಿಕೊಳ್ಳುತ್ತೇವೆ. ಇದಕ್ಕಿಂತ ವಿಶೇಷ ಸಮಯ ಬೇರೆ ಇಲ್ಲ. ಮುಂದಿನ ‘ಪ್ರೇಮಿಗಳ ದಿನಾಚರಣೆ’ಯೊಳಗೆ ಇಬ್ಬರೂ ಸೇರಿ ಒಂದು ಸಿನಿಮಾ ಉಡುಗೊರೆ ನೀಡುತ್ತೇವೆ.’ ಎಂದು ಮಾಹಿತಿ ನೀಡುತ್ತಾರೆ.