ವಳಚ್ಚಿಲ್‌ನಲ್ಲಿ ಗುಡ್ಡ ಕುಸಿತ ಭೀತಿ

ಭರತ್ ಶೆಟ್ಟಿಗಾರ್ ಮಂಗಳೂರು
ಪ್ರತಿವರ್ಷ ಮಳೆಗಾಲದಲ್ಲಿ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗುವ ಪ್ರಕರಣಗಳು ವರದಿಯಾಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಅಂತಹುದೇ ಘಟನೆ ನಡೆಯಬಹುದು ಎಂಬ ಭೀತಿಯಲ್ಲಿ ವಳಚ್ಚಿಲ್‌ನಲ್ಲಿ ಉಂಟಾಗಿದೆ.

ನಗರ ಹೊರವಲಯದ ವಳಚ್ಚಿಲ್‌ನಲ್ಲಿ ಸಣ್ಣ ಗುಡ್ಡವೊಂದು ಕುಸಿಯುವ ಭೀತಿಯಲ್ಲಿದ್ದು, ಸುಮಾರು ನಾಲ್ಕು ಮನೆಗಳು ಅಪಾಯದಲ್ಲಿದೆ. ಕಳೆದ ಬಾರಿಯೂ ಇಲ್ಲಿ ಗುಡ್ಡ ಕುಸಿದಿದ್ದು, ಈ ಸಲ ಮತ್ತೆ ಕುಸಿಯುವ ಆತಂಕ ಉಂಟಾಗಿದೆ. ಕಾರಣ ಒಂದು ಬಾರಿ ಜರಿದುಬಿದ್ದ ಗುಡ್ಡ ಪ್ರತಿ ವರ್ಷ ಕುಸಿಯುತ್ತಲೇ ಇರುತ್ತದೆ. ಗುಡ್ಡ ಕುಸಿಯದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು ಎಂದು ಮನೆಯವರು ಆಗ್ರಹಿಸಿದ್ದಾರೆ.

900 ರೂ. ಪರಿಹಾರ !
ಕಳೆದ ವರ್ಷ ಗುಡ್ಡ ಕುಸಿದು ಒಂದು ಮನೆಯ ಹಿಂಭಾಗಕ್ಕೆ ಅಪಾರ ಹಾನಿಯಾಗಿತ್ತು. ಗೋಡೆ, ಮಾಡಿನ ಹೆಂಚುಗಳು ಒಡೆದು ಹೋಗಿತು. ಆಗ ಮನೆಯವರೇ ಕಾರ್ಮಿಕರ ಮೂಲಕ ಮಣ್ಣು ತೆಗೆಸಿ, ಮಣ್ಣು ತೆಗೆಸಿದ್ದರು. ಸುಮಾರು 20 ಸಾವಿರ ರೂ. ವೆಚ್ಚವಾಗಿತ್ತು. ಗುಡ್ಡ ಕುಸಿದು ಹಾನಿಯಾಗಿರುವ ಕುರಿತು ಫೋಟೋ ಸಹಿತ ಪಂಚಾಯಿತಿಗೆ ನೀಡಲಾಗಿತ್ತು. ಆದರೆ ಪಂಚಾಯಿತಿಯಿಂದ ಬಂದ ಪರಿಹಾರ ಕೇವಲ 900 ರೂಪಾಯಿ ಮಾತ್ರ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು- ಬೆಂಗಳೂರು ರೈಲು ಮಾರ್ಗದ ನಡುವೆ ಮನೆಗಳಿವೆ. ಹಿಂಭಾಗದಲ್ಲಿರುವ ಗುಡ್ಡದ ಮೇಲೆಯೇ ರೈಲು ಮಾರ್ಗವಿದೆ. ಗುಡ್ಡದಲ್ಲಿ ಎರಡು ಮರಗಳಿದ್ದು, ಬೇರುಗಳು ಹೊರಗೆ ಕಾಣಿಸುತ್ತಿವೆ. ಅವುಗಳನ್ನು ಕಡಿಯದಿದ್ದರೆ ಈ ಬಾರಿಯ ಮಳೆಗೆ ಬೀಳುವ ಸಾಧ್ಯತೆಯಿದೆ ಎನ್ನುತ್ತಾರೆ ಮನೆಯವರು.

ಚರಂಡಿ ನಿರ್ಮಿಸಲು ಆಗ್ರಹ
ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿಯಿಲ್ಲದೆ ವಳಚ್ಚಿಲ್‌ಪದವಿನಿಂದ ಹರಿದು ಬರುವ ನೀರು ರಸ್ತೆಯಲ್ಲೇ ನಿಲ್ಲುತ್ತದೆ. ನೀರಿನ ಜತೆ ಮಣ್ಣ- ಕಲ್ಲುಗಳು ರಸ್ತೆಗೆ ಹರಿದು ಬರುತ್ತದೆ. ಇದರಿಂದ ರಸ್ತೆ ಬದಿಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ರಾತ್ರಿ ವೇಳೆ ಮದರಸಾಗಳಿಂದ ಬರುವ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ವರ್ಷದ ಹಿಂದೆ ರಾತ್ರಿ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದ. ಹೆದ್ದಾರಿಯಲ್ಲಿ ಬೀದಿದೀಪ ವ್ಯವಸ್ಥೆಯೂ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ವರ್ಷ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಅಪಾರ ಹಾನಿಯುಂಟಾಗಿತ್ತು. ಈ ಬಾರಿ ಮತ್ತೆ ಕುಸಿಯುವ ಭೀತಿ ಉಂಟಾಗಿದೆ. ಪಂಚಾಯಿತಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗುಡ್ಡ ಕುಸಿಯದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕು.
ಶರೀಫ್ ಮನೆ ಮಾಲೀಕ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಕೆಲಸಗಳು ಭರದಿಂದ ನಡೆಯುತ್ತಿದೆ. ಗುಡ್ಡ ಕುಸಿದ ಜಾಗದ ಪರಿಶೀಲನೆ ನಡೆಸಲಾಗುವುದು. ಕಳೆದ ವರ್ಷ ಕುಸಿದಿರುವುದರಿಂದ ಈ ಬಾರಿ ಮತ್ತೆ ಕುಸಿಯುವ ಸಾಧ್ಯತೆ ಕಡಿಮೆ.
ಕೃಷ್ಣ ನಾಯ್ಕ ಎಚ್. ಅಡ್ಯಾರ್ ಗ್ರಾಪಂ ಪಿಡಿಒ

Leave a Reply

Your email address will not be published. Required fields are marked *