
ದೊಡ್ಡಬಳ್ಳಾಪುರ: ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನದ ಅಂಗವಾಗಿ ನಗರದ ಕನ್ನಡ ಜಾಗೃತ ಪರಿಷತ್‌ನಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತು.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮಾತನಾಡಿ, ವಾಜಪೇಯಿ ಅವರ ತತ್ವ ಸಿದ್ಧಾಂತವನ್ನು ಸಾಮಾನ್ಯ ಮತದಾರರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ. ಚತುಷ್ಪಥ ರಸ್ತೆ, ಸರ್ವ ಶಿಕ್ಷಣ ಅಭಿಯಾನ, ಮಾಹಿತಿ ತಂತ್ರಜ್ಞಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮುಂತಾದವುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಮಾತನಾಡಿ, ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ದೇಶಪ್ರೇಮ, ಸೇವಾ ಮನೋಭಾವನೆ, ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಟಲ್‌ಜಿ ಅವರು ದೇಶಾದ್ಯಂತ ಸಂಚರಿಸಿ ಭಾರತೀಯ ಜನಸಂಘ ಹಾಗೂ ಬಿಜೆಪಿಯನ್ನು ದೇಶದ ಪ್ರತಿಯೊಂದು ಮನೆ ಹಾಗೂ ಪ್ರತಿಯೊಬ್ಬರ ಮನ ಮುಟ್ಟುವಂತೆ ಪ್ರಚಾರ ಮಾಡಿದರು. ಅದೇ ಮಾದರಿಯಲ್ಲಿ ನರೇಂದ್ರ ಮೋದಿ ಅವರು ನಡೆಯುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ತಾಲೂಕು ಅಧ್ಯಕ್ಷ ಟಿ.ಎನ್.ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾಶಿವಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಶಿವಾನಂದರೆಡ್ಡಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಶಿವಕುಮಾರ್, ಶಿವ,ಪ್ರಶಾಂತ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಡಿ.ವಿ.ಚಂದ್ರೇಗೌಡ, ನಿಕಟಪೂರ್ವ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಬಿ.ಮುದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಕುಮಾರ್, ಮಾಜಿ ಸದಸ್ಯ ಪ್ರಸನ್ನಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ಜಿಪಂ ಮಾಜಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್,ಹಿಂದು ಜಗರಣಾ ವೇದಿಕೆ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಮತ್ತಿತರರಿದ್ದರು.