ವಾಹನ ಸಂಪರ್ಕ ಕಳೆದುಕೊಂಡ ಗೋಯರ

ವಿಜಯವಾಣಿ ವಿಶೇಷ ಕಾರವಾರ: ಅರಣ್ಯ ಇಲಾಖೆಯ ವಿರೋಧದ ಕಾರಣದಿಂದಾಗಿ ತಾಲೂಕಿನ ಗೋಯರ ಗ್ರಾಮ ಕಳೆದ ಎರಡು ತಿಂಗಳಿಂದ ವಾಹನ ಸಂಪರ್ಕ ಕಳೆದುಕೊಂಡಿದೆ.

ಆಗಸ್ಟ್ 13 ರಂದು ಸುರಿದ ಭಾರಿ ಮಳೆಯಿಂದಾಗಿ, ಸಾಕಳಿ ಹೊಳೆಗೆ ಕಟ್ಟಲಾಗಿದ್ದ ಗೋಯರ ಸೇತುವೆಯ ಸಂಪರ್ಕ ರಸ್ತೆ ಕಿತ್ತು ಹೋಗಿತ್ತು. ವಿಪತ್ತು ಪರಿಹಾರ ನಿಧಿಯ ನಿರೀಕ್ಷೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಮೌಖಿಕ ಒಪ್ಪಿಗೆಯೊಂದಿಗೆ ಲೋಕೋಪಯೋಗಿ ಇಲಾಖೆಯು ರಿಪೇರಿ ಕಾಮಗಾರಿ ಕೈಗೊಂಡಿತ್ತು. ಆದರೆ, ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಅರಣ್ಯಾಧಿಕಾರಿಗಳು ಕಾಮಗಾರಿಗೆ ತಡೆ ನೀಡಿದ್ದಾರೆ. ಗೋಯರ ಗ್ರಾಮಕ್ಕೆ ತೆರಳಿದ್ದ ನಾಲ್ಕು ಚಕ್ರಗಳ ಎರಡು ವಾಹನ ಹಾಗೂ ಪವರ್ ಟಿಲ್ಲರ್​ಗಳು ಅಲ್ಲಿಯೇ ಸಿಕ್ಕಿಹಾಕಿಕೊಂಡಿವೆ. ಊರಿಗೆ ತಾಲೂಕು ಕೇಂದ್ರದಿಂದ ಬೇರೆ ವಾಹನಗಳೂ ಕಳೆದ ಆಗಸ್ ್ಟಂದ ತೆರಳಲು ಸಾಧ್ಯವಾಗುತ್ತಿಲ್ಲ.

ವರ್ಷದ ಹಿಂದಷ್ಟೇ ಸೇತುವೆ ನಿರ್ವಣ: 2013ರಲ್ಲೇ ಗೋಯರ ಗ್ರಾಮಕ್ಕೆ ಸೇತುವೆ ಮಂಜೂರಾಗಿತ್ತು. ಆದರೆ, ಅನುಮತಿ ದೊರೆತಿಲ್ಲ ಎಂದು ಅರಣ್ಯ ಇಲಾಖೆ ಕಾಮಗಾರಿಗೆ ತಡೆ ನೀಡಿತ್ತು. ಆಗಿನ ಶಾಸಕ ಸತೀಶ ಸೈಲ್ ಹೋರಾಟ ನಡೆಸಿ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮಾಡಿದ್ದರು. ವರ್ಷದ ಹಿಂದಷ್ಟೇ ಕಾಮಗಾರಿ ಮುಕ್ತಾಯವಾಗಿ ಜನರಿಗೆ ಸಂಪರ್ಕ ದೊರಕಿತ್ತು. ಮತ್ತೆ ಸಂಪರ್ಕ ಕಳೆದುಕೊಂಡಂತಾಗಿದೆ.

ಸಮಸ್ಯೆ ಏನು?: ಗೋಟೆಗಾಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಗೋಯರ, ಕೋಟೆ, ಬಿಚೋಲಿ, ಲಾಂಡೆ, ಕಮರಗಾಂವ… ಹೀಗೆ ಹಲವು ಗ್ರಾಮಗಳು ದಟ್ಟ ಅರಣ್ಯದ ನಡುವೆ ಇರುವ ಕುಗ್ರಾಮಗಳು. ಗೋವಾ ರಾಜ್ಯದ ಗಡಿಯಲ್ಲಿರುವ ಈ ಗ್ರಾಮಗಳ ನಡುವೆ ಸಾಕಳಿ ಹೊಳೆ ಹರಿಯುತ್ತದೆ. ಸಾಕಳಿ ಹೊಳೆಯ ಬಲಬದಿಗೆ ಅಂದರೆ, ಮುಖ್ಯ ರಸ್ತೆಯ ಭಾಗದ ಪ್ರದೇಶವು ಕಾರವಾರ ಅರಣ್ಯ ವಿಭಾಗಕ್ಕೆ ಸೇರಿದರೆ ಎಡದಿಕ್ಕು ಅಂದರೆ ಗ್ರಾಮಗಳ ಭಾಗ ಕಾಳಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಗೆ ಸೇರುತ್ತವೆ. ಇಲ್ಲಿ ರಸ್ತೆ, ಸೇತುವೆ ಮಾಡುವಾಗ ಕೇಂದ್ರ ಅರಣ್ಯ ಮಂತ್ರಾಲಯದಿಂದ ಅನುಮತಿ ಪಡೆದು ಒಟ್ಟು 1.7 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂಬುದು ಅರಣ್ಯ ಇಲಾಖೆಯ ವಾದ. ಇದರಿಂದ ಗೋಯರ ಸೇತುವೆ ಕಾಮಗಾರಿ 3 ವರ್ಷ ವಿಳಂಬವಾಗಿತ್ತು.

ಮತ್ತೊಂದು ಅರ್ಜಿ: ಲೋಕೋಪಯೋಗಿ ಇಲಾಖೆ ಅರಣ್ಯ ಮಂತ್ರಾಲಯಕ್ಕೆ 1.7 ಹೆಕ್ಟೇರ್ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಕಾಳಿ ಸಂರಕ್ಷಿತ ಅರಣ್ಯ ಪ್ರದೇಶದ ಭಾಗದ 1 ಹೆಕ್ಟೇರ್ ಜಾಗದಲ್ಲಿ ಯಾವುದೇ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಕಾರವಾರ ಅರಣ್ಯ ವಿಭಾಗದ ಪ್ರದೇಶದಲ್ಲಿ 0.7 ಹೆಕ್ಟೇರ್ ಪ್ರದೇಶವನ್ನು ಪರಿವರ್ತನೆ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆ ಮರು ಪ್ರಸ್ತಾವನೆ ಸಲ್ಲಿಸಿದೆ. ಅದಕ್ಕೆ ಒಪ್ಪಿದ ಅರಣ್ಯ ಇಲಾಖೆ ಪ್ರಾಥಮಿಕ ಒಪ್ಪಿಗೆ ನೀಡಿದೆ. ಅಂತಿಮ ಒಪ್ಪಿಗೆ ನೀಡಲು ಹಣ ಭರಣ ಮಾಡಲು ಸೂಚಿಸಿದೆ. ಆದರೆ, ಎಷ್ಟು ಹಣ ತುಂಬಬೇಕು ಎಂಬ ಬೇಡಿಕೆ ಪತ್ರ ನೀಡಿಲ್ಲ ಎಂಬುದು ಪಿಡಬ್ಲ್ಯುಡಿ ಅಧಿಕಾರಿಗಳ ಹೇಳಿಕೆಯಾಗಿದೆ.

ಕಾಲು ಸಂಕವೂ ಹಾಳು: ಬಾರಗದ್ದಾ ಸಮೀಪ ಗೋಯರ ಗ್ರಾಮಕ್ಕೆ ತೆರಳಲು 2009ರಲ್ಲಿ ನಿರ್ವಿುಸಿದ ಕಾಲು ಸಂಕದ ಕಂಬವೂ ಹಾಳಾಗಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮಸ್ಥರು ಈಗ ಅನಿವಾರ್ಯವಾಗಿ ಅದೇ ಕಾಲು ಸಂಕದ ಮೇಲೆ ಅಪಾಯಕಾರಿ ಹಂತದಲ್ಲಿ ಓಟಾಟ ನಡೆಸಿದ್ದಾರೆ.