<ಮಧುಕರ ಶೆಟ್ಟಿ ಪಾರ್ಥೀವ ಶರೀರ ಆಗಮನ * ಸಾರ್ವಜನಿಕ ಅಂತಿಮ ದರ್ಶನ ಬಳಿಕ ಅಂತ್ಯಸಂಸ್ಕಾರ>
ವಿಜಯವಾಣಿ ಸುದ್ದಿಜಾಲ ಜನ್ನಾಡಿ/ಕುಂದಾಪುರ
ಮಧುಕರ್ ಶೆಟ್ರ್ ಇನ್ನಿಲ್ಲ ಎಂಬುದ್ ನಂಬುಕ್ ಆತಿಲ್ಲ. ನಾವ್ ನಮ್ಮೂರ್ ಹೆಸ್ರನ್ ರಘುರಾಮ್ ಶೆಟ್ರ್ ಬೆಟ್ಟದಷ್ಟ್ ಎತ್ತ್ರಕ್ ಏರ್ಸಿರ್. ಮಧುಕರ್ ಶೆಟ್ರ್ ಇನ್ನೂ ಎತ್ತರಕ್ ಏರ್ಸಿರ್. ಇನ್ ನಮ್ಮೂರ್ ಹೆಸ್ರ್ ಎತ್ತ್ರಕ್ ಏರ್ಸುವರ್ ಯಾರಿದ್ರೆ…?
ಅನಾರೋಗ್ಯದಿಂದ ನಿಧನರಾದ ಮಧುಕರ ಶೆಟ್ಟಿ ಬಗ್ಗೆ ಯಡಾಡಿ-ಮತ್ಯಾಡಿ, ವಡ್ಡರ್ಸೆ ಜನರಾಡುವ ಮಾತಿದು. ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖದಿಂದ ಎರಡೂ ಗ್ರಾಮಗಳು ರೋಧಿಸುತ್ತಿವೆ, ನೀರವ ಮೌನ ಆವರಿಸಿದೆ.
ಮಧುಕರ ಶೆಟ್ಟಿ ಅವರಿಗೆ ಕೃಷಿ ಬಗ್ಗೆ ಅಪಾರ ಆಸಕ್ತಿ. ಮನೆ ಸಮೀಪದ ಎರಡು ಎಕರೆ ಅಡಕೆ ತೋಟ ಸ್ವ ಪರಿಶ್ರಮದಿಂದ ಬೆಳೆಸಿದ್ದರು. ಊರಿಗೆ ವರ್ಷಕ್ಕೆ ನಾಲ್ಕು ಬಾರಿ ಬರುತ್ತಿದ್ದು, ಅವರೇ ನಿಂತು ಅಡಕೆ ತೋಟಕ್ಕೆ ಗೊಬ್ಬರ, ಮಣ್ಣು ಹಾಕಿ ಆರೈಕೆ ಮಾಡುತ್ತಿದ್ದರು. ಊರಿನಿಂದ ಹೊರಗಡೆ ಇದ್ದರೂ, ದಿನಕ್ಕೆ ಎರಡು ಬಾರಿ ದೂರವಾಣಿ ಮೂಲಕ ತೋಟದ ಬಗ್ಗೆ ವಿಚಾರಿಸುತ್ತಿದ್ದರು. ಮನೆಗೆ ಬಂದಾಗಲೂ ಕೂಡ ಬೆಳಗ್ಗೆ ಎದ್ದು ವಾಕಿಂಗ್, ವ್ಯಾಯಾಮ ತಪ್ಪದೆ ಮಾಡುತ್ತಿದ್ದರು ಎಂದು ಸಂಬಂಧಿ ಮೋಹನದಾಸ್ ಹೆಗ್ಡೆ ‘ವಿಜಯವಾಣಿ’ಗೆ ತಿಳಿಸಿದರು.
ಮಧುಕರ ಶೆಟ್ಟಿ ಊರಿಗೆ ಬಂದಾಗಲೆಲ್ಲ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮನೆಗೆ ಆಗಮಿಸುತ್ತಿದ್ದರು. ಅತಿಥಿ ಸತ್ಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದ ಅವರು, ಪರಿಸರ ಉಳಿಸುವ ನಿಟ್ಟಿನಲ್ಲಿ ವಡ್ಡರ್ಸೆ ಪ್ರತಿಷ್ಠಾನ ಹುಟ್ಟುಹಾಕಿದ್ದರು ಎನ್ನುತ್ತಾರೆ ಇನ್ನೋರ್ವ ಸಂಬಂಧಿ ಪ್ರಕಾಶ್ ಶೆಟ್ಟಿ.
ಚಿಕ್ಕಮಗಳೂರು ಎಸ್ಪಿ ಆಗಿದ್ದ ಸಂದರ್ಭ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಳ್ಳವರ ವಶದಲ್ಲಿದ್ದ ದಲಿತರ ಜಾಗವನ್ನು ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತ ಜತೆ ಸೇರಿ ದಲಿತರಿಗೆ ಹಿಂದಿರುಗಿಸುವ ಮೂಲಕ ಅವರ ಬದುಕಿಗೆ ಹೊಸ ದಿಕ್ಕು ತೋರಿಸಿದ್ದರು. ಇಂದಿಗೂ ಸಹ ಆ ಹಳ್ಳಿಯನ್ನು ಗುಪ್ತಶೆಟ್ಟಿ ಹಳ್ಳಿ ಎಂದೇ ಕರೆಯುತ್ತಾರೆ.
‘ಚಿಕ್ಕಮಗಳೂರಿನಲ್ಲಿ ನಕ್ಸಲ್ ನಿಗ್ರಹಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮಧುಕರ ಶೆಟ್ಟಿಯವರನ್ನು ಸರ್ಕಾರ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ನಕ್ಸಲರು ಕರಪತ್ರ ಚಳವಳಿ ಮೂಲಕ ಮನೆಮನೆಗೆ ಹಂಚಿದ್ದು ಅವರ ಪ್ರಾಮಾಣಿಕತೆಗೆ ಸಿಕ್ಕ ಗೌರವ. ವನ್ಯಜೀವಿ ಹಾಗೂ ಪರಿಸರ ವಿಭಾಗದಲ್ಲಿ ಅವರಿಗೆ ಭಾರಿ ಪ್ರೀತಿ ಇತ್ತು. ಕೆಲವು ಸಂದರ್ಭಗಳಲ್ಲಿ ಸಂತೋಷ್ ಹೆಗ್ಡೆಯವರ ಮೃದು ಧೋರಣೆ ವಿರೋಧಿಸುತ್ತಿದ್ದರು’ ಎಂದು ಒಡನಾಡಿ ವಸಂತ ಗಿಳಿಯಾರ್ ಹೇಳುತ್ತಾರೆ.
ಯಡಾಡಿ ಮತ್ಯಾಡಿಯಲ್ಲಿ ಇಂದು ಅಂತ್ಯಸಂಸ್ಕಾರ: ಅನಾರೋಗ್ಯದಿಂದ ಶುಕ್ರವಾರ ನಿಧನರಾದ ಐಪಿಎಸ್ ಅಧಿಕಾರಿ ಡಾ.ಕೆ. ಮಧುಕರ ಶೆಟ್ಟಿಯವರ ಅಂತ್ಯಸಂಸ್ಕಾರ ಹುಟ್ಟೂರಾದ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿ ಭಾನುವಾರ ನಡೆಯಲಿದೆ. ತಡರಾತ್ರಿ ಯಡಾಡಿ ಮತ್ಯಾಡಿಯ ನಿವಾಸಕ್ಕೆ ಪಾರ್ಥೀವ ಶರೀರ ತರಲಾಗಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ಕ್ಕೆ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ, ತಾಯಿ ಪ್ರಫುಲ್ಲಾ ರೈ ಅವರ ಸಮಾಧಿ ಬಳಿ ಅಂತ್ಯಸಂಸ್ಕಾರ ನಡೆಯಲಿದೆ. ಸ್ಥಳದಲ್ಲಿ ಬ್ರಹ್ಮಾವರ ಹಾಗೂ ಕೋಟ ಪೊಲೀಸರು ಮೊಕ್ಕಾಂ ಹೂಡಿದ್ದು, ಅಂತಿಮ ವಿಧಿವಿಧಾನ ನೆರವೇರಿಸಲು ಸಕಲ ಸಿದ್ಧತೆ ಮಾಡಲಾಗಿದೆ.
ಪೊಲೀಸ್ ತರಬೇತಿ ಸಂಸ್ಥೆಗೆ ಮಧುಕರ ಶೆಟ್ಟಿ ನಾಮಕರಣಕ್ಕೆ ಬಿ.ವೈ.ರಾಘವೇಂದ್ರ ಒತ್ತಾಯ
ಕುಂದಾಪುರ: ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ, ಚನ್ನಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಶಾಲೆ, ಯಲಹಂಕದಲ್ಲಿರುವ ಸಶಸ್ತ್ರ ಪೊಲೀಸ್ ತರಬೇತಿ ಶಾಲೆ – ಇವುಗಳಲ್ಲಿ ಯಾವುದಾದರೊಂದು ಸಂಸ್ಥೆಗೆ ಮಧುಕರ ಶೆಟ್ಟಿಯವರ ಹೆಸರಿಡುವ ಮೂಲಕ ಗೌರವಿಸಬೇಕೆಂದು ಬೈಂದೂರು-ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿವರ್ಷ ಉತ್ಕೃಷ್ಟ ಸೇವೆಗಾಗಿ ಪೊಲೀಸ್ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಧುಕರ ಶೆಟ್ಟಿಯವರ ಹೆಸರಿನಲ್ಲಿ ನೀಡುವ ಮೂಲಕ ಅವರ ಆದರ್ಶಗಳನ್ನು ಜೀವಂತವಾಗಿಡಬಹುದು, ಯುವ ಪೊಲೀಸ್ ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗುವ ನಿಟ್ಟಿನಲ್ಲಿಯೂ ಇದು ಸಹಕಾರಿ. ಮಧುಕರ ಶೆಟ್ಟಿಯವರನ್ನು ಕಳೆದುಕೊಂಡಿರುವುದು ಪೊಲೀಸ್ ಇಲಾಖೆ, ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಶಯವಿದ್ದರೆ ತನಿಖೆ ಗೃಹಸಚಿವ ಪಾಟೀಲ್
ಬೆಂಗಳೂರು: ಮಧುಕರ ಶೆಟ್ಟಿ ಸಾವಿನ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆಯಾಗಬೇಕೆಂಬ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ. ಪಾಟೀಲ್, ಸಂಶಯವಿದ್ದರೆ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರವಷ್ಟೇ ತನಿಖೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಚಿಕಿತ್ಸೆ ನೀಡಿದ ಹೈದರಾಬಾದ್ ಆಸ್ಪತ್ರೆಯಿಂದಲೂ ವರದಿ ತರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರಿನಲ್ಲಿ ಅಂತಿಮ ನಮನ
ಮಂಗಳೂರು: ಬೆಂಗಳೂರಿನಿಂದ ಮಧುಕರ್ ಶೆಟ್ಟಿ ಅವರ ಪಾರ್ಥೀವ ಶರೀರವನ್ನು ಶನಿವಾರ ರಾತ್ರಿ 9.50ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಹುಟ್ಟೂರಿಗೆ ಕೊಂಡೊಯ್ಯಲಾಯಿತು.
ವಿಮಾನ ನಿಲ್ದಾಣ ಆವರಣದಲ್ಲಿ ಸುಮಾರು ಅರ್ಧಗಂಟೆ ಕಾಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅಮರ್ ರಹೇ ಅಮರ್ ರಹೇ ಎಂದು ಪೊಲೀಸರು ಶ್ರದ್ಧಾಂಜಲಿ ಅರ್ಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ, ಸಂಸದೀಯ ಕಾರ್ಯದರ್ಶಿ ಐವನ್ ಡಿಜೋಜ, ಮೇಯರ್ ಭಾಸ್ಕರ ಕೆ, ಎಡಿಜಿಪಿ ಪ್ರತಾಪ್ ರೆಡ್ಡಿ, ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸ್ಪಿ ಡಾ.ಬಿ.ಆರ್.ರವಿಕಾಂತೇ ಗೌಡ, ಜಿಪಂ ಸಿಇಒ ಡಾ.ಸೆಲ್ವಮಣಿ ಆರ್, ಅಪರ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಮನಪಾ ಆಯುಕ್ತ ಮೊಹಮ್ಮದ್ ನಝೀರ್, ಗೃಹ ರಕ್ಷಕ ದಳ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು, ಮಾಜಿ ಸಚಿವ ಅಭಯಚಂದ್ರ ಜೈನ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.