ಅಂಬಾರಿ ಮೇಲೆ ವಚನ ಕಟ್ಟುಗಳ ಮೆರವಣಿಗೆ

ಧಾರವಾಡ: ನಗರದ ಮುರುಘಾ ಮಠದ ಜಗದ್ಗುರು ಶ್ರೀ ಮುರುಘ ರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವದ ನಿಮಿತ್ತ ಬಸವಾದಿ ಶಿವಶರಣರ ಸಹಸ್ರಾರು ವಚನದ ಕಟ್ಟುಗಳನ್ನು ಆನೆ ಅಂಬಾರಿಯ ಮೇಲೆ ಇಟ್ಟು ನಗರದಲ್ಲಿ ಶುಕ್ರವಾರ ಮೆರವಣಿಗೆ ಮಾಡಲಾಯಿತು. ಬೆಳಗಾವಿ ರುದ್ರಾಕ್ಷಿ ಮಠದ ಡಾ. ಸಿದ್ಧರಾಮ ಸ್ವಾಮೀಜಿ ವಚನ ಕಟ್ಟುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಇಲ್ಲಿನ ಕಲಾಭವನದಿಂದ ಆರಂಭಗೊಂಡ ಆನೆ ಅಂಬಾರಿಯ ಮೆರವಣಿಗೆಯಲ್ಲಿ ಮುರುಘಾಮಠದ ಸಾವಿರಾರು ಭಕ್ತರು ಷಟ್​ಸ್ಥಲ ಧ್ವಜ ಹಿಡಿದು ಕಾವಿ ಶಾಲು ಧರಿಸಿ, ತಲೆ ಮೇಲೆ ವಚನದ ಕಟ್ಟುಗಳನ್ನು ಇಟ್ಟುಕೊಂಡು ಸಿಬಿಟಿ, ಶಿವಾಜಿ ವೃತ್ತದ ಮಾರ್ಗವಾಗಿ ಮುರುಘಾಮಠ ತಲುಪಿದರು. ಭಕ್ತರು ಕಾವಿ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ಎಲ್ಲೆಡೆ ಕಾವಿಮಯವಾಗಿತ್ತು. ವಿಶೇಷವಾಗಿ ನೂರಾರು ಮಹಿಳೆಯರು, ವಚನದ ಕಟ್ಟುಗಳನ್ನು ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಜೊತೆಗೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದವು. ಇದಕ್ಕೂ ಮೊದಲು ಶ್ರೀ ಮಠದ ವಿವಿಧ ಸ್ವಾಮೀಜಿಗಳು, ಕಲಾಭವನ ಆವರಣದಲ್ಲಿನ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತ ನಾಡಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಹಸ್ರಾರು ಸಂಖ್ಯೆಯಲ್ಲಿ ಬಸವಾದಿ ಶರಣರ ಅನುಯಾಯಿಗಳು ವಚನದ ಕಟ್ಟುಗಳನ್ನು ತಲೆ ಮೇಲೆ ಇಟ್ಟುಕೊಂಡು ನಡೆದಿದ್ದಾರೆ. ವಚನಗಳು ಮನುಕುಲಕ್ಕೆ ದಾರಿ ತೋರಿದ ಶ್ರೇಷ್ಠ ಬೆಳಕು. ಬಸವಾದಿ ಶಿವಶರಣರ ವಚನಗಳಲ್ಲಿನ ತತ್ವಗಳು ಜಗತ್ತಿಗೆ ಮಾದರಿಯಾಗಿವೆ ಎಂದರು. ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತ ಸ್ವಾಮೀಜಿ, ಮಾಜಿ ಸಚಿವ ವಿನಯ ಕುಲಕರ್ಣಿ, ನಾಗರಾಜ ಪಟ್ಟಣಶೆಟ್ಟಿ, ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮುರುಘಾಮಠ ಶತಮಾನೋತ್ಸವ ಸಂಭ್ರಮದಲ್ಲಿ ಇಂದು: ಮುರುಘಾ ಪರಂಪರೆಯ ಮುರುಘಾಮಠದ ಶ್ರೀ ಮನ್ನಿರಂಜನ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾ ನೋತ್ಸವ ಸಮಾರಂಭದಲ್ಲಿ ಸೆ. 8ರಂದು ಬೆಳಗ್ಗೆ 10ಕ್ಕೆ ಮಹಾದ್ವಾರದ ಶಂಕುಸ್ಥಾಪನೆ ಜರುಗಲಿದೆ. ಹೊಸಪೇಟೆಯ ಡಾ. ಜಗದ್ಗುರು ಸಂಗನಬಸವ ಸ್ವಾಮೀಜಿ, ಮುಂಡರಗಿ ಡಾ. ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೆೇಗೌಡ ಶಂಕುಸ್ಥಾಪನೆ ನೆರವೇರಿಸ ಲಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಗುವುದು. ಸಂಜೆ 6ಕ್ಕೆ ಜರುಗುವ ಶತಮಾನೋತ್ಸವ ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಸಿರಿಗೆರಿಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಮಾರಕ ಭವನ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಶಾಸಕ ಸಿ.ಎಂ. ನಿಂಬಣ್ಣವರ, ಮಾಜಿ ಸಚಿವ ಶಾಮನೂರ ಶಿವಶಂಕರಪ್ಪ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.