ದುರಾಸೆಯಿಂದ ತೃಪ್ತಿ ದಕ್ಕದುವಿಜಯವಾಣಿ ಸುದ್ದಿಜಾಲ ಎಚ್.ಡಿ.ಕೋಟೆ
ವಚನಕಾರರು ವಚನ ಸಿದ್ದಾಂತದ ಮೂಲಕ ಸಾಮಾಜಿಕ ಸುಧಾರಣೆ ತರುವಲ್ಲಿ ಪ್ರಮುಖಪಾತ್ರ ವಹಿಸಿದ್ದರು ಎಂದು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಸೊಳ್ಳೇಪುರ ಪುನರ್ವಸತಿ ಗ್ರಾಮದಲ್ಲಿ ವಿಶ್ವ ವಚನ ಫೌಂಡೇಷನ್ ಮತ್ತು ಕಸ್ತೂರಿ ಜನನಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ದುರಾಸೆಯಿಂದ ಹಣ, ಆಸ್ತಿ ಮಾಡುತ್ತಾನೆ. ಆದರೆ ಅವನಿಗೆ ತೃಪ್ತಿ ಸಿಗುವುದಿಲ್ಲ. ಯಾರಿಗೆ ಸಾಕು ಎಂಬ ಭಾವನೆ ಇರುತ್ತದೆ ಅವರಲ್ಲಿ ಸಂತೋಷ ಕಾಣಬಹುದು ಎಂದರು.
ಗಿರಿಜನರಾದ ನೀವು ಕೂಡ ಕೂಡಿಡುವ ಸಂಸ್ಕೃತಿಯವರಲ್ಲ. ಆದ್ದರಿಂದ ನಿಮ್ಮಲ್ಲೂ ತೃಪ್ತಿಯಿಂದ ಇರುವುದನ್ನು ನೋಡಬಹುದು. ಈ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮನೆಗೂ ವಚನ ಪುಸ್ತಕ ನೀಡಲಾಗಿದ್ದು, ಮಕ್ಕಳು ಇದನ್ನು ಓದಿ ಇದರ ಅರ್ಥವನ್ನು ತಿಳಿದುಕೊಂಡರೆ ನಿಮ್ಮ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ ಎಂದರು.
ಜಾತಿ, ಮತಗಳ ಬೇದವಿಲ್ಲದೆ, ಮೇಲು ಕೀಳು ಎಂಬ ತಾರತಮ್ಯವಿಲ್ಲದೆ ಎಲ್ಲರೂ ಬಸವಣ್ಣ ಅವರನ್ನು ಅನುಸರಿಸಿದರೆ ಮನುಕುಲದಲ್ಲಿ ತಂಗಾಳಿ ಬೀಸಲಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, 12ನೇ ಶತಮಾನದಲ್ಲಿ ಹೆಚ್ಚಾಗಿದ್ದ ಅಸಮಾನತೆ, ತಾರತಮ್ಯವನ್ನು ಹೋಗಲಾಡಿಸಿ ಸಮಾಜದ ಸುಧಾರಕರಲ್ಲಿ ವಚನಕಾರರ ಪಾತ್ರ ಮಹತ್ವದ್ದಾಗಿದೆ. ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯದ ವಚನಕಾರರಿಗೆ ತಮ್ಮ ಅಭಿಪ್ರಾಯ ಹೇಳಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಇದರ ಮೂಲಕ ಸಮಾನತೆ ಸಾರಲಾಯಿತು. ಜನಸಾಮಾನ್ಯರಿಗೂ ಅರ್ಥವಾಗುವಂತೆ ವಚನಗಳನ್ನು ರಚಿಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಬೇರೆ ಬೇರೆ ಹಾಡಿಗಳಿಂದ ಬಂದ ನೀವು ಇಂದು ಸಮಾಜಮುಖಿಯಾಗಿ ಬದಲಾವಣೆಯಾಗಿರುವದನ್ನು ನಿಮ್ಮಲ್ಲಿ ಕಾಣಬಹುದಾಗಿದೆ. ನಿಮಗಾಗಿ ಏಕಲವ್ಯ ಮಾದರಿ ವಸತಿ ಶಾಲೆಯಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಪುನರ್ವಸತಿ ಹಾಡಿಯ ಪ್ರತಿಯೊಂದು ಮನೆ ಮನೆಗೂ ತೆರಳಿ ವಚನಪುಸ್ತಕ ಮತ್ತು ದಿನದರ್ಶಕೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಆದಿವಾಸಿ ವಿದ್ಯಾರ್ಥಿಗಳಿಂದ ವಚನಗಳನ್ನು ಓದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕಸ್ತೂರಿ ಮಹೇಶ್, ಸತೀಶ್ ಆರಾಧ್ಯ, ಕೇಂದ್ರಿಯ ಸಂಚಾಲಕ ಲಿಂಗಣ್ಣ, ಕಾರ್ಯಾಧ್ಯಕ್ಷ ಪಂಪಾಪತಿ, ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಕ್ಷೇತ್ರಾಧಿಕಾರಿ ಗೋವಿಂದಪ್ಪ, ವಿಶ್ವ, ಶಿವರುದ್ರಪ್ಪ, ಜೀವಜಲ ಜೀವಾಮೃತ ಸಂಸ್ಥೆ ನಿರ್ದೇಶಕ ವಿಜಯ, ರವಿಕುಮಾರ್, ವರದರಾಜು, ಜೆಜೆಎಂ ರವಿ, ಕೆ.ಸಿ.ವಿಜಯ ಕುಮಾರ್ ಇದ್ದರು.

Leave a Reply

Your email address will not be published. Required fields are marked *