More

    ನೆರೆ ಪರಿಹಾರ ಕಾಮಗಾರಿ ಚುರುಕುಗೊಳಿಸಿ

    ಬಾಳೆಹೊನ್ನೂರು: ಕಳೆದ ವರ್ಷ ಹೋಬಳಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೆರೆ ಪರಿಹಾರ ನಿಧಿಯಡಿ ನಿರ್ವಿುಸುತ್ತಿರುವ ಮನೆಗಳನ್ನು ತರೀಕೆರೆ ಉಪವಿಭಾಗಾಧಿಕಾರಿ ರೂಪಾ ಬುಧವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿಗೆ ತುತ್ತಾಗಿ ಸಂತ್ರಸ್ತರಾದ ಕುಟುಂಬಗಳಿಗೆ ಮನೆಗಳ ಮರು ನಿರ್ವಣದ ಬಗ್ಗೆ ಈಗಾಗಲೆ ಹೌಸಿಂಗ್ ಸಾಫ್ಟ್​ವೇರ್​ನಲ್ಲಿ ಡಾಟಾ ಎಂಟ್ರಿ ಮಾಡಲಾಗಿದೆ. ಮನೆಗಳು ಹಾನಿಗೀಡಾದ ಬಗ್ಗೆ ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ಈ ಸಂಬಂಧ ಸಂತ್ರಸ್ತರು ಮನೆ ದುರಸ್ತಿ ಅಥವಾ ಮರು ನಿರ್ಮಾಣ ಮಾಡುತ್ತಿದ್ದಾರೆಯೇ ಎಂಬುದನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.

    ವಿಎ ಹಾಗೂ ಪಿಡಿಒ ಸ್ಥಳಕ್ಕೆ ಖುದ್ದಾಗಿ ತೆರಳಿ ಜಿಪಿಎಸ್ ನಡೆಸಿ ಫೋಟೋ ತೆಗೆದು ಸಾಫ್ಟ್​ವೇರ್​ಗೆ ಅಪ್​ಡೇಟ್ ಮಾಡಬೇಕಿದೆ. ಬಾಳೆಹೊನ್ನೂರು ವ್ಯಾಪ್ತಿಯ ಬನ್ನೂರು, ಮಾಗುಂಡಿ, ಮಹಲ್ಗೋಡು, ಕಾರೇಹಡ್ಲು, ಬೈರೇಗುಡ್ಡ ಮುಂತಾದೆಡೆ ನಾನು ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.

    ಮಾಗುಂಡಿಯಲ್ಲಿ ಶೇ.80ರಷ್ಟು ಮನೆಗಳು ಮರು ನಿರ್ವಣವಾಗಿವೆ. ಬನ್ನೂರಲ್ಲಿ ಕಡಿಮೆ ಪ್ರಮಾಣದಲ್ಲಿ ಮರು ನಿರ್ವಣವಾಗಿದ್ದು, ಶೀಘ್ರವಾಗಿ ಕಾಮಗಾರಿ ನಡೆಸುವಂತೆ ಪಿಡಿಒ, ವಿಎ ಅವರಿಗೆ ಸೂಚಿಸಲಾಗಿದೆ. ಬನ್ನೂರು ಗ್ರಾಪಂನ ಬಂಡಿಮಠದಲ್ಲಿ ಭದ್ರಾ ನದಿ ಸೇತುವೆ ವಿಸ್ತರಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಮರು ನಿರ್ಮಾಣ ಕಾಮಗಾರಿಗೆ ಸಮಸ್ಯೆಯಾಗಿದೆ ಎಂದರು.

    ಪರಿಶೀಲನೆ ಸಂದರ್ಭ ಕೆಲವರು ಅರ್ಹ ಸಂತ್ರಸ್ತರ ಹೆಸರು ಬಿಟ್ಟು ಹೋಗಿದೆ ಎಂದು ದೂರು ಬಂದಿದೆ. ಇಂತಹ ಪ್ರಕರಣಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ತಿಳಿಸಿದ್ದು, ಅವುಗಳನ್ನು ಪರಿಶೀಲಿಸಿ ಪರಿಗಣಿಸಲಾಗುವುದು ಎಂದು ಹೇಳಿದರು.

    ಬಂಡಿಮಠದಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳನ್ನು ಮರು ನಿರ್ವಿುಸಿಕೊಳ್ಳಲು ಹೊಸ ಸೇತುವೆ ನಿರ್ವಣದ ಕಾಮಗಾರಿ ಕಾರಣದಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಸೇತುವೆ ನಿರ್ವಣದ ಜಾಗ ಗುರುತಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಕಾಮಗಾರಿ ನಡೆಸುವ ಸಂಸ್ಥೆಯವರು ಸೇತುವೆ ನಿರ್ವಣಕ್ಕೆ ಇಷ್ಟು ಸ್ಥಳ ಬೇಕು ಎಂದು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆ ಬಳಿಕ ಯಾವ ಮನೆಗಳು ಸೇತುವೆ ನಿರ್ವಣದ ಸಂದರ್ಭ ತೆರವುಗೊಳಸಬೇಕು ಎಂಬುದು ನಿರ್ಧಾರವಾಗಲಿದೆ ಎಂದರು.

    ಸೇತುವೆ ನಿರ್ವಣದ ಸ್ಥಳದಲ್ಲಿ ಯಾರೂ ಮನೆ ನಿರ್ವಿುಸದಂತೆ ಸೂಚಿಸಲಾಗಿದೆ. ಅವರಿಗೆ ಪರ್ಯಾಯ ಜಾಗದ ವ್ಯವಸ್ಥೆ ಸ್ಥಳೀಯ ಪಂಚಾಯಿತಿ ಅಥವಾ ಸಂಬಂಧಿಸಿದವರು ಮಾಡಬೇಕಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳನ್ನು ಎ ಕೆಟಗೆರಿ-8, ಬಿ-21, ಸಿ-7, ಬಿ.ಕಣಬೂರು ಗ್ರಾಪಂನಲ್ಲಿ ಎ-15, ಬಿ-11, ಸಿ-12, ಮಾಗುಂಡಿಯಲ್ಲಿ ಎ-15, ಬಿ-3, ಸಿ-6 ಮನೆಗಳನ್ನು ಗುರುತಿಸಲಾಗಿದೆ ಎಂದರು.

    ನೆರೆ ಸಂತ್ರಸ್ತರಾದ ಮನೆಗಳ ಮರು ನಿರ್ವಣಕ್ಕೆ ಎ, ಬಿ ಕೆಟಗೆರಿಯವರಿಗೆ ಹಲವರಿಗೆ ತಲಾ 1 ಲಕ್ಷ ರೂ. ನೇರವಾಗಿ ಖಾತೆಗೆ ಜಮಾ ಆಗಿದೆ ಎಂದು ತಿಳಿಸಿದರು.

    ವರ್ಗ ವಿಂಗಡಣೆಯಲ್ಲಿ ತಾರತಮ್ಯ: ನೆರೆ ಹಾವಳಿಗೆ ತುತ್ತಾದ ಮನೆಗಳನ್ನು ಎ, ಬಿ, ಸಿ ವರ್ಗವಾಗಿ ವಿಂಗಡಿಸುವಾಗ ಅರ್ಹ ಸಂತ್ರಸ್ತರನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಿ ವರ್ಗವಾಗಿ ವಿಂಗಡಿಸಿ ತಾರತಮ್ಯ ಮಾಡಿದ್ದಾರೆ ಎಂದು ಎನ್.ಆರ್.ಪುರ ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು ಆರೋಪಿಸಿದರು. ಮನೆ ಹಾನಿಗೀಡಾದ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಎ, ಬಿ ವರ್ಗಕ್ಕೆ ಸೇರಿಸಿ ಉಳಿದವರನ್ನು ಸಿ. ವರ್ಗಕ್ಕೆ ಸೇರಿಸಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ತಮ್ಮಷ್ಟಕ್ಕೆ ತಾವೆ ಪರಿಶೀಲನೆ ನಡೆಸಿ ವರ್ಗವಾರು ವಿಂಗಡಣೆ ಮಾಡಿದ್ದಾರೆ. ಜನಪ್ರತಿನಿಧಿಗಳನ್ನು ಸೌಜನ್ಯಕ್ಕೂ ವಿಚಾರಿಸಿಲ್ಲ ಎಂದು ದೂರಿದರು.

    ಎಸಿ ಬಳಿ ಸಂತ್ರಸ್ತರ ಅಳಲು:

    ಉಪ ವಿಭಾಗಾಧಿಕಾರಿ ರೂಪಾ ಅವರು ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಬಂಡಿಮಠದ ಗ್ರಾಮಸ್ಥರು ಪರಿಹಾರ ವಿತರಣೆ ವರ್ಗೀಕರಣದ ಬಗ್ಗೆ ಅಸಮಾಧಾನ ಹೊರಹಾಕಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು. ಅಧಿಕಾರಿಗಳು ಪೂರ್ಣ ಹಾನಿಯಾದ ಮನೆಗಳನ್ನು ಸಿ ಕೆಟಗೆರಿಗೆ ಸೇರ್ಪಡೆಗೊಳಿಸಿ ಅಲ್ಪಸ್ವಲ್ಪ ಹಾನಿಯಾದ ಮನೆಗಳನ್ನು ಎ ಕೆಟಗೆರಿಗೆ ಸೇರಿಸಿದ್ದಾರೆ ಎಂದು ದೂರಿದರು.

    ಎನ್.ಆರ್.ಪುರ ತಹಸೀಲ್ದಾರ್ ನಾಗರಾಜ್, ನಾಡಕಚೇರಿ ಉಪತಹಸೀಲ್ದಾರ್ ನಾಗೇಂದ್ರ, ಬನ್ನೂರು ಗ್ರಾಪಂ ಅಧ್ಯಕ್ಷ ಟಿ.ಎಂ.ವೆಂಕಟೇಶ್, ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಪಿಡಿಒ ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts