ದೇವಭೂಮಿಯಿಂದ ದೇವಾಲಯ ನಗರಿಗೆ ಯುವ ತಂಡ

«ಕರ್ನಾಟಕ-ಉತ್ತರಾಖಂಡ ಯುವಜನರಿಗಾಗಿ ಅಂತಾರಾಜ್ಯ ಯುವ ವಿನಿಮಯ ಶಿಬಿರ»

ಗೋಪಾಲಕೃಷ್ಣ ಪಾದೂರು ಉಡುಪಿ
ದೇವಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡದ 50 ಯುವ ಮನಸ್ಸುಗಳು ದೇವಾಲಯಗಳ ನಗರಿ ಉಡುಪಿಗೆ ಆಗಮಿಸಿದ್ದು, ಉತ್ತರಾಖಂಡ ಮತ್ತು ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗಿದೆ.

ಭಾರತದಲ್ಲಿರುವ ವೈವಿಧ್ಯ, ವೈಶಿಷ್ಟೃ, ಬಹುಭಾಷೆ, ಬಹು ಸಂಸ್ಕೃತಿ ವಿಶ್ವದ ಯಾವುದೇ ದೇಶದಲ್ಲಿ ನೋಡಲು ಸಿಗದು. ಯುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ದಾರ್ ವಲ್ಲಭಬಾಯಿ ಪಟೇಲರ 140ನೇ ಜನ್ಮದಿನಾಚರಣೆಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆಗೆ ಚಾಲನೆ ನೀಡಿದ್ದರು. ಅದರಂತೆ ಪ್ರತಿವರ್ಷ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ ಆಶ್ರಯದಲ್ಲಿ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮ ಬೇರೆ ಬೇರೆ ರಾಜ್ಯಗಳಲ್ಲಿ ಆಯೋಜಿಸುತ್ತಿದೆ. ಈ ಬಾರಿ ಡಿ.7ರಂದು ಕರ್ನಾಟಕಕ್ಕೆ ಉತ್ತರಾಖಂಡದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಫೆಬ್ರವರಿಯಲ್ಲಿ ಕರ್ನಾಟಕದ 50 ಯುವಕ -ಯುವತಿಯರು ಉತ್ತರಾಖಂಡಕ್ಕೆ 15 ದಿನದ ಇದೇ ಕಾರ್ಯಕ್ರಮ ನಿಮಿತ್ತ ತೆರಳಲಿದ್ದಾರೆ.

ಕರ್ನಾಟಕದ ಕಾರವಾರ, ಉಡುಪಿ, ಮಂಗಳೂರು, ಧಾರವಾಡ, ಮೈಸೂರು ಈ 5 ಜಿಲ್ಲೆಗಳಿಂದ ತಲಾ 10 ಮಂದಿ ಹಾಗೂ ಉತ್ತರಾಖಂಡದ ಚಮೇಲಿ, ಡೆಹ್ರಾಡೂನ್, ಹರಿದ್ವಾರ, ಪಿತ್ತೋರಗಢ, ಉದಂಸಿಂಗ್ ನಗರ್, ಅಲ್ಮೇಡಾ, ರಾಣಿಕೇರ್ ಜಿಲ್ಲೆಗಳಿಂದ ಒಟ್ಟು 50 ಮಂದಿ ಯುವಕ-ಯುವತಿಯರು ಭಾಗವಹಿಸಿದ್ದಾರೆ.

ಗ್ರಾಮಾಡಳಿತ ದರ್ಶನ: ಡಿ.7ರಿಂದ 21ರವರೆಗೆ ಶಿಬಿರ ನಡೆಯುತ್ತಿದ್ದು, ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ. ಗ್ರಾಮಾಡಳಿತ ಪರಿಚಯಕ್ಕಾಗಿ ಡಿ.12ರಂದು ತಂಡ ಸಾಣೂರು ಗ್ರಾಪಂಗೆ ಭೇಟಿ ನೀಡಲಿದೆ. ಪ್ರಶಸ್ತಿ ಪಡೆದ ಯುವಕ ಮತ್ತು ಯುವತಿ ಮಂಡಲಗಳಿಗೆ ಭೇಟಿ ನೀಡಿ ಕಾರ್ಯಚಟುವಟಿಕೆ ಅಧ್ಯಯನ ಮಾಡಲಿದೆ. ಮಲ್ಪೆ ಬೀಚ್, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ, ಗೇರುಬೀಜ ಕಾರ್ಖಾನೆ, ಎಂಆರ್‌ಪಿಎಲ್ ಸಹಿತ ಧಾರ್ಮಿಕ, ಶೈಕ್ಷಣಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಕೊನೆಯ ದಿನ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿಗೆ ತಂಡ ಭೇಟಿ ನೀಡಲಿದ್ದು, ರಾಜಧಾನಿ ಬೆಂಗಳೂರು ದರ್ಶನದ ಬಳಿಕ ಹುಟ್ಟೂರಿಗೆ ಮರಳಲಿದ್ದಾರೆ.

ಯುವಕ ಬಿಚ್ಚಿಟ್ಟ ಮೇಘ ಸ್ಫೋಟದ ಕಥನ: ಜಲಪ್ರಳಯದ ಕಹಿ ಘಟನೆಯ ಅನುಭವದಿಂದ ಉತ್ತರಾಖಂಡ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುತ್ತಾರೆ 2013ರ ಮೇಘಸ್ಫೋಟದ ಪ್ರತ್ಯಕ್ಷದರ್ಶಿ ಕೇದಾರನಾಥ ನಿವಾಸಿ ಅಲೋಕ್ ನೇಗಿ. ಘಟನೆ ಸಂದರ್ಭ ಯಾರು ಯಾರನ್ನೂ ರಕ್ಷಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಶೇ.75ರಷ್ಟು ಮಂದಿ ಪ್ರವಾಹಕ್ಕೆ ಸಿಕ್ಕು ಸತ್ತರೆ, ಶೇ.25ರಷ್ಟು ಮಂದಿ ಸಂಕಷ್ಟ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಅರಿವಿಲ್ಲದೆ ಬಲಿಯಾಗಿದ್ದಾರೆ. ಆದರೆ ದೇಶದ ಜನ ಉತ್ತಮ ಸಹಕಾರ ನೀಡಿದ ಕಾರಣ ಸಂಪೂರ್ಣ ಹಾನಿಯಾಗಿದ್ದ ಪ್ರದೇಶಗಳು ಮತ್ತೆ ಎದ್ದು ನಿಂತಿವೆ ಎಂದರು. ಸಂಕಷ್ಟದಿಂದ ಹೇಗೆ ಪಾರಾಗಬೇಕು ಎಂಬುದನ್ನು ಜಲಪ್ರಳಯ ತಿಳಿಸಿದೆ. ನಾವು ಯುವ ಸಂಘಟನೆ ಮೂಲಕ ಜನರ ಬದುಕನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದವರು ರುದ್ರಪ್ರಯಾಗ್ ನಿವಾಸಿ ಅನೂಪ್.

ದೇಗುಲ ಉಳಿಸಿದ ಬಂಡೆ: ಭೀಕರ ಪ್ರವಾಹದಲ್ಲೂ ಕೇದಾರನಾಥ ದೇವಾಲಯಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ಇದಕ್ಕೆ ದೇಗುಲದ ಹಿಂಭಾಗದಲ್ಲಿದ್ದ ಬೃಹತ್ ಬಂಡೆಕಲ್ಲು ಕಾರಣ. ಮೇಲಿನಿಂದ ರಭಸದಿಂದ ಹರಿದು ಬಂದ ನೀರು ಬಂಡೆಗೆ ಹೊಡೆದು ಕವಲಾಗಿ ಸಾಗಿದ ಪರಿಣಾಮ ದೇವಾಲಯಕ್ಕೆ ಪ್ರವಾಹ ತೀವ್ರತೆ ತಟ್ಟಲಿಲ್ಲ ಎನ್ನುತ್ತಾರೆ ಅಲೋಕ್ ನೇಗಿ.

 

ಮೊದಲ ದಿನ ಇಲ್ಲಿನ ಆಹಾರ ಪದ್ಧತಿ ಹಾಗೂ ತಂಪು ಪ್ರದೇಶದಿಂದ ಬಂದ ನಮಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಆದರೆ ಈಗ ಸುಧಾರಿಸಿಕೊಂಡಿದ್ದೇವೆ. ಅವಕಾಶ ಕಲ್ಪಿಸಿದ್ದಕ್ಕೆ ನೆಹರೂ ಕೇಂದ್ರಕ್ಕೆ ಧನ್ಯವಾದ.
– ಶೀತಲ್ ಚೌಹಾಣ್, ಎಂ.ಎ. ವಿದ್ಯಾರ್ಥಿನಿ, ಡೆಹ್ರಾಡೂನ್

ಮೊದಲ ಬಾರಿ ಬೇರೆ ರಾಜ್ಯದ ಯುವಕ-ಯುವತಿಯರೊಂದಿಗೆ ವಿಚಾರ ವಿನಿಮಯ ಮಾಡುವ ಅವಕಾಶ ಲಭಿಸಿದೆ. ಇದೊಂದು ಉತ್ತಮ ಅನುಭವ. ಇದರಿಂದ ಭಾರತದ ವೈವಿಧ್ಯತೆಯ ಪರಿಚಯವಾಗುತ್ತದೆ. ಭೇದ ಭಾವವಿಲ್ಲದೆ ಸಾಮರಸ್ಯ ಮೂಡಲು ಸಾಧ್ಯ. ನಮ್ಮತನ ಪರಿಚಯಿಸಲು ಉತ್ತಮ ವೇದಿಕೆ.
– ಅನಿತಾ, ಎಂ.ಎ. ಮ್ಯೂಸಿಕ್, ಧಾರವಾಡ

ಉತ್ತರಖಂಡ ರಾಜ್ಯದ 50 ಹಾಗೂ ಕರ್ನಾಟಕ ರಾಜ್ಯದ 50, ಒಟ್ಟಿಗೆ 100 ಯುವಕ -ಯುವತಿಯರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಇಲ್ಲಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಕಲಿತು, ತಮ್ಮ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದಾರೆ.
ವಿಲ್ಫ್ರೆಡ್ ಡಿಸೋಜ
– ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ