ಸ್ಥಳೀಯ ರೈತರಿಗೆ ಲಾಭಾಂಶ ಹಂಚಿ: ಬಾಬಾ ರಾಮ್​ದೇವ್​ ಕಂಪನಿಗೆ ಉತ್ತರಾಖಂಡ್​ ಹೈಕೋರ್ಟ್​ ಸೂಚನೆ

ನೈನಿತಾಲ್​: ಯೋಗ ಗುರು ಬಾಬಾ ರಾಮ್​ ದೇವ್​ ಅವರಿಗೆ ಸೇರಿದ ಕಂಪನಿ ತನ್ನ ಲಾಭಾಂಶದ ಸ್ವಲ್ಪ ಭಾಗವನ್ನು ಸ್ಥಳೀಯ ರೈತರು ಮತ್ತು ಸಮುದಾಯಕ್ಕೆ ಹಂಚಬೇಕು ಎಂದು ಉತ್ತರಾಖಂಡದ ಹೈಕೋರ್ಟ್​​ ಆದೇಶಿಸಿದೆ.

ಉತ್ತರಾಖಂಡ ಜೀವವೈವಿಧ್ಯ ಮಂಡಳಿ (ಯುಬಿಬಿ) ನಿರ್ದೇಶನವನ್ನು ಪ್ರಶ್ನಿಸಿ ದಿವ್ಯ ಫಾರ್ಮಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ನ ವಜಾಗೊಳಿಸಿದ್ದು, ಜೈವಿಕ ವೈವಿಧ್ಯ ಕಾಯ್ದೆ 2002ರ ಅನ್ವಯ ಸ್ಥಳೀಯ ಸಮುದಾಯಕ್ಕೆ ಲಾಭಾಂಶ ಹಂಚಿಕೆ ಮಾಡಬೇಕು ಎಂದು ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಆಯುರ್ವೇದ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುವಾಗ ಬಳಕೆ ಮಾಡುವ ಕಚ್ಛಾ ಸಾಮಗ್ರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲಾಗುತ್ತದೆ. ಹಾಗಾಗಿ ಕಂಪನಿ ತನ್ನ 421 ಕೋಟಿ ರೂ. ಲಾಭಾಂಶದಲ್ಲಿ 2 ಕೋಟಿ ರೂ. ಗಳನ್ನು ಕಚ್ಛಾ ಸಾಮಗ್ರಿಗಳನ್ನು ಒದಗಿಸಿದ ಸ್ಥಳೀಯ ರೈತರಿಗೆ ಹಂಚಬೇಕು ಎಂದು ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಉತ್ತರಾಖಂಡ ಜೀವವೈವಿಧ್ಯ ಮಂಡಳಿ ಲಾಭಾಂಶವನ್ನು ಹಂಚಬೇಕು ಎಂದು ಆದೇಶಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ದಿವ್ಯ ಫಾರ್ಮಸಿ, ಮಂಡಳಿಗೆ ಈ ಆದೇಶವನ್ನು ಹೊರಡಿಸುವ ಅಧಿಕಾರ ಇಲ್ಲ ಎಂದು ವಾದಿಸಿತ್ತು. (ಏಜೆನ್ಸೀಸ್​)