ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಮುಖೇಶ್​ ಅಂಬಾನಿ ಪುತ್ರನ ನೇಮಕ

ಡೆಹ್ರಾಡೂನ್​: ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ​ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ಅವರು ಉದ್ಯಮಿ ಮುಖೇಶ್​ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಅವರನ್ನು ನೇಮಕ ಮಾಡಿದ್ದಾರೆ.

ಮುಖೇಶ್​ ಅಂಬಾನಿ ಕುಟುಂಬವು ಬದರಿನಾಥ ಮತ್ತು ಕೇದಾರನಾಥ ದೇಗುಲಕ್ಕೆ ನಿಯಮಿತವಾಗಿ ಭೇಟಿ ನೀಡುವ ಸಂಪ್ರದಾಯ ಹೊಂದಿದೆ. ಅಲ್ಲದೆ, ಕೇದಾರನಾಥ ಮತ್ತು ಬದರಿನಾಥ ದೇಗುಲಗಳ ಪುನರ್​ ನವೀಕರಣ ಕಾರ್ಯದಲ್ಲಿ ತಾವೂ ಭಾಗಿಯಾಗುವುದಾಗಿ ದೇಗುಲ ಸಮಿತಿಗೆ ಎರಡು ವರ್ಷಗಳ ಹಿಂದೆ ಮುಖೇಶ್​ ಪ್ರಸ್ತಾವ ನೀಡಿದ್ದರು.

ತಮ್ಮ ಕುಟುಂಬದಲ್ಲಿ ಯಾವುದಾದರೂ ಮಹತ್ತರ ಬೆಳವಣಿಗೆ ನಡೆಯುವುದಕ್ಕೂ ಮೊದಲು ದೇಗುಲಕ್ಕೆ ಭೇಟಿ ನೀಡುವುದನ್ನು ಮುಖೇಶ್​ ರೂಢಿಯಾಗಿಟ್ಟುಕೊಂಡಿದ್ದಾರೆ. ತಮ್ಮ ಪುತ್ರಿಯ ವಿವಾಹಕ್ಕೂ ಮೊದಲು ದೇಗುಲಕ್ಕೆ ಬಂದಿದ್ದ ಅವರು, ಆಶೀರ್ವಾದ ಪಡೆದು ಹೋಗಿದ್ದರು. ನಂತರ, ಆಹ್ವಾನ ಪತ್ರಿಕೆಯನ್ನು ಮೊದಲು ದೇಗುಲಕ್ಕೇ ಸಮರ್ಪಿಸಿದ್ದರು.

ಬದರಿನಾಥ ಮತ್ತು ಕೇದಾರನಾಥದ ಶಿವನ ದೇಗುಲಕ್ಕೆ ಮುಖೇಶ್​ ಅಂಬಾನಿ ಕುಟುಂಬ ಅತ್ಯಂತ ವಿದೇಯವಾಗಿ ನಡೆದುಕೊಳ್ಳುವ ಕಾರಣಕ್ಕಾಗಿಯೇ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ಅವರು ಮುಖೇಶ್​ ಪುತ್ರ ಅನಂತ್​ ಅಂಬಾನಿಯನ್ನು ಸಮಿತಿಗೆ ನೇಮಕ ಮಾಡಿದ್ದಾರೆ ಎನ್ನಲಾಗಿದೆ.