ಕಾರವಾರ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿವೆ. ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಪಕ್ಷಗಳ ನಡುವೆ ಚರ್ಚೆಯಲ್ಲಿದೆ. ಹಾಗಾಗಿ ಇಷ್ಟು ದಿನ ತಟಸ್ಥವಾಗಿದ್ದ ಜಿಲ್ಲೆಯ ಜೆಡಿಎಸ್ ನಾಯಕರು ಈಗ ಚುರುಕಾಗಿದ್ದು, ಕಮಲದ ಹೊಲದಲ್ಲಿ ತೆನೆಯ ಇಳುವರಿ ತೆಗೆಯುವ ಯತ್ನ ನಡೆಸಿದ್ದಾರೆ. ಜೆಡಿಎಸ್ ಮುಖಂಡರಾದ ಆನಂದ ಅಸ್ನೋಟಿಕರ್ ಹಾಗೂ ಸೂರಜ್ ನಾಯ್ಕ ತಾವಿಬ್ಬರೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ವಿರುದ್ಧ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದ ಆನಂದ ಅಸ್ನೋಟಿಕರ್ ಈಗ ಕೇಸರಿ ಶಾಲು ಹಾಕಿಕೊಂಡು ಬಂದು ತಾನೂ ಲೋಕಸಭಾ ಚುನಾವಣೆ ಆಕಾಂಕ್ಷಿ ಎನ್ನುತ್ತಿದ್ದಾರೆ. ಎರಡು ದಿನಗಳ ಹಿಂದೆ ಕುಮಾರಸ್ವಾಮಿ ಅವರ ಜತೆ ಬೆಂಗಳೂರಿನಲ್ಲಿ ಅವರು ಸುದ್ದಿಗೋಷ್ಠೀಯಲ್ಲಿ ಕಾಣಿಸಿಕೊಂಡಿದ್ದರು.
ಸೋಮವಾರ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ಮೋದಿ ಪರ ಬ್ಯಾಟಿಂಗ್ ಮಾಡಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ಬಿಜೆಪಿ ಉಕ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈಗ ನಂತಕುಮಾರ ಹೆಗಡೆ ಜತೆ ತನ್ನ ಸಂಪರ್ಕ ನಿರಂತರವಾಗಿದೆ. ಅವರು ಸ್ಪರ್ಧೆ ಮಾಡಿದರೆ, ನನ್ನ ಸ್ಪರ್ಧೆ ಇಲ್ಲ ಬೆಂಬ ನೀಡುತ್ತೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ನಾನು ಹಿಂದುಳಿದ ವರ್ಗಗಳ ನಾಯಕ, ಈ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮರಾಠಿ, ಕೊಂಕಣಿ ಸಮುದಾಯವನ್ನು ತಲುಪುವ ಭಾಷಾ ಕೌಶಲ ನನ್ನಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊನೆಯ ಘಳಿಗೆಯಲ್ಲಿ ಟಿಕೆಟ್ ಸಿಕ್ಕು ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಸ್ಪರ್ಧೆ ಮಾಡಿದ್ದೆ. 3 ಲಕ್ಷದಷ್ಟು ಮತ ಪಡೆದಿದ್ದೆ. ಈಗ ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿಎಸ್‌ಗೆ ದೊಡ್ಡ ಬಲ ಬಂದಂತಾಗಿದೆ. ಮೈತ್ರಿ ಹಂಚಿಕೆಯಂತೆ ಉತ್ತರ ಕನ್ನಡ ಲೋಕಸಭಾ ಟಿಕೆಟ್ ಜೆಡಿಎಸ್‌ಗೆ ದೊರಕಿದರೆ ನಾನು ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ದೊರೆಯದೇ ಇದ್ದರೂ ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಜೆಡಿಎಸ್ ಬಲ ಪಡಿಸಲು ಯತ್ನ ನಡೆಸುತ್ತೇವೆ ಎಂದರು.
ಇನ್ನೊಮ್ಮೆ ಭಾರತಕ್ಕೆ ಪ್ರಧಾನಿ ಮೋದಿ ಅವರ ನೇತೃತ್ವ ಬೇಕಾಗಿದೆ. ದೇವೆಗೌಡ ಅವರ ಹಿರಿತನದ ಅನುಭವವೂ ಸೇರಿ ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಜೆಡಿಎಸ್, ಬಿಜೆಪಿಗೆ ಸಿಗಲಿದೆ. ಕುಮಾರಸ್ವಾಮಿ ಅವರು ರೈತರಿಗಾಗಿ, ಬಡ ಕೂಲಿ ಕಾರ್ಮಿಕರ ಪರವಾಗಿ ಹೋರಾಡುತ್ತಿದ್ದು, ನಾವು ಅವರ ಬೆಂಬಲಕ್ಕಿದ್ದೇವೆ ಎಂದರು.
ಬರ ಅಧ್ಯಯನ
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಹಾನಿಯ ಬಗ್ಗೆ ಜೆಡಿಎಸ್ ಅಧ್ಯಯನ ನಡೆಸಿದ್ದು, ಜೆಡಿಎಸ್ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಇದುವರೆಗೆ ಬರ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಾಹಿತಿ ಪಡೆದು, ಕುಮಾರಸ್ವಾಮಿ ಅವರಿಗೆ ವರದಿ ಕಳಿಸಲಾಗುವುದು ಎಂದು ಮುಖಂಡರು ತಿಳಿಸಿದರು. ಜೆಡಿಎಸ್ ಮುಖಂಡ ಉಪೇಂದ್ರ ಪೈ ಇದ್ದರು.
ಡಬಲ್ ಇಂಜಿನ್-ಡಬಲ್ ನಿಲುವು
ಸತೀಶ ಸೈಲ್ ಹಾಗೂ ನಾನು ಡಬಲ್ ಇಂಜಿನ್ ಇದ್ದಂತೆ ಎಂದು ಕಳೆದ ವಿಧಾನಸಭಾಚುನಾವಣೆಯಲ್ಲಿ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧ ಎಂದು ಅಸ್ನೋಟಿಕರ್ ಹೇಳಿದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ ಜಿಪಂ ಸದಸ್ಯೆಯಾಗಲೂ ಯೋಗ್ಯತೆ ಇಲ್ಲದ ಅನ್‌ಫರ್ಡ್ ಎಂದು ಏಕವಚನದಲ್ಲಿ ಹರಿಹಾಯುವ ಮೂಲಕ ಬಿಜೆಪಿಯ ಬಗ್ಗೆ ತಮ್ಮ ಡಬಲ್ ನಿಲುವನ್ನು ವ್ಯಕ್ತಪಡಿಸಿದರು.
ಕಳೆದ ಶಾಸಕರ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿಸಿ ನಾನು ಕಾರವಾರ ಕ್ಷೇತ್ರಗಳಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೆ. ಅದು ವಿಧಾನಸಭಾ ಚುನಾವಣೆ. ಈಗ ಲೋಕಸಭಾ ಚುನಾವಣೆಯ ಸ್ವರೂಪವೇ ಬೇರೆ ಎಂದರು.
ನಾನು ಹಿಂದಿ ಬಿಜೆಪಿಯಿಂದ ಅನ್ಯಾಯಕ್ಕೊಳಗಾಗಿ ಜೆಡಿಎಸ್‌ಗೆ ಬಂದವನು. ಹಾಗಾಗಿ ಕಾಂಗ್ರೆಸ್ ಗೆ ಹೋಗುತ್ತೇನೆ ಎಂಬ ವದಂತಿ ಹುಟ್ಟಿದೆ. ಆದರೆ, ರಾಜಕಾರಣದಲ್ಲಿ ಯಾರೂ ಕಾಯಂ ಶತ್ರುಗಳೂ ಅಲ್ಲ. ಯಾರೂ ಕಾಯಂ ಮಿತ್ರರೂ ಅಲ್ಲ. ನಾನು ಕ್ಷೇತ್ರದ ಪ್ರಬಲ ಸಮುದಾಯದ ಒಬ್ಬ ನಾಯಕ. ಅವಕಾಶ ಸಿಕ್ಕರೆ ಲೋಕಸಭೆಗೆ ಜೆಡಿ ಎಸ್ ನಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ.
ಸೂರಜ್ ನಾಯ್ಕ ಸೋನಿ
ಜೆಡಿಎಸ್ ಮುಖಂಡ