ಲಖನೌ: ಯುವ ಐಪಿಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬುಧವಾರ ನಡೆದಿದೆ.
ಸುರೇಂದ್ರ ಕುಮಾರ್ ದಾಸ್(30) ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ. ಕಾನ್ಪುರದಲ್ಲಿರುವ ನಿವಾಸದಲ್ಲಿ ಇಂದು ಬೆಳಗ್ಗೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ತಕ್ಷಣ ನಗರದ ಆಸ್ಪತ್ರೆಗೆ ಸೇರಿಸಿದ್ದಾರೆ.
ದಾಸ್ ಅವರ ಸ್ಥಿತಿ ಗಂಭೀರವಾಗಿದೆ. ಅವರ ನಾಡಿ ಮಿಡಿತ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ರಕ್ತದ ಒತ್ತಡವು ಕೂಡ ತುಂಬಾ ಕಡಿಮೆಯಾಗಿದೆ. ಅವರನ್ನು ಐಸಿಯುನಲ್ಲಿ ಇಡಲಾಗಿದೆ. ವಿಷ ಸೇವಿಸಿರುವುದರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾನ್ಪುರದ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಅಗರ್ವಾಲ್ ವರದಿಗಾರರಿಗೆ ತಿಳಿಸಿದ್ದಾರೆ.
ಐಪಿಎಸ್ ಅಧಿಕಾರಿ ದಾಸ್ ಅವರು ಉತ್ತರ ಕಾನ್ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಕೇವಲ ಒಂದು ತಿಂಗಳು ಹಿಂದೆಯಷ್ಟೇ ಅವರು ಈ ಸ್ಥಾನವನ್ನು ಅಲಂಕರಿಸಿದ್ದರು. ಸ್ವತಂತ್ರ ಕಾರ್ಯಭಾರದ ಮೊದಲ ನೇಮಕಾತಿ ಇದಾಗಿತ್ತು.
ದಾಸ್ ಅವರು ಮೆಕಾನಿಕಲ್ ಇಂಜಿನಿಯರ್ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ. ಐದು ವರ್ಷಗಳ ಹಿಂದೆ ಇವರು ನಾಗರಿಕ ಸೇವೆಗೆ ಸೇರಿದ್ದರು. ಇವರು 2014ರ ಗುಂಪಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪಶ್ಚಿಮ ಕಾನ್ಪುರ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ತಿಳಿಸಿದ್ದಾರೆ.
ಕುಟುಂಬದಲ್ಲಿನ ಸಮಸ್ಯೆ ಕುರಿತಾಗಿ ಕೆಲವು ದಿನಗಳಿಂದ ದಾಸ್ ಅವರು ಅಸಮಾಧಾನಗೊಂಡಿದ್ದರು ಎಂದು ಅವರ ಜತೆ ಕಾರ್ಯನಿರ್ವಹಿಸುವ ಸಿಬ್ಬಂದಿ ತಿಳಿಸಿದ್ದಾರೆ. ದಾಸ್ ಅವರು ಕೀಟನಾಶಕವನ್ನು ಸೇವಿಸಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)