ವಾಗ್ವಾದವಾದರೆ ಕೊಲೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದ ಉಪಕುಲಪತಿಗೆ ಸ್ಪಷ್ಟನೆ ಕೇಳಿದ ಸರ್ಕಾರ

ಲಖನೌ: ಯಾರೊಂದಿಗಾದರೂ ವಾಗ್ವಾದವಾದರೆ ನೀವು ಕೊಲೆ ಮಾಡಿ ಬನ್ನಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ವೀರ್​ ಬಹದ್ದೂರ್​ ಸಿಂಗ್​ ಪೂರ್ವಾಂಚಲ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಜಾ ರಾಮ್​ ಯಾದವ್​ ಅವರನ್ನು ಉತ್ತರಪ್ರದೇಶದ ಸರ್ಕಾರ ಸ್ಪಷ್ಟನೆ ನೀಡುವಂತೆ ಕೇಳಿದೆ.

ಸೆಮಿನಾರ್‌ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವಾಗ “ಇಂದಿನ ವಿದ್ಯಾರ್ಥಿಗಳು ಒಂದೇ ಏಟಿನಲ್ಲಿ ಬಂಡೆಗೆ ಹೊಡೆದು ನೀರು ತೆಗೆಯುವ ಸಾಮರ್ಥ್ಯವುಳ್ಳವರು. ನೀವು ಪೂರ್ವಾಂಚಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರೆ, ನನ್ನ ಮುಂದೆ ಅಳುತ್ತಾ ಬಂದು ನಿಲ್ಲಬೇಡಿ. ವಾಗ್ವಾದಗಳು ಉಂಟಾದರೆ ಕೊಲೆ ಮಾಡಿ ಬನ್ನಿ. ಮುಂದೆ ಏನಾಗುತ್ತದೋ ನೋಡಿಕೊಳ್ಳೋಣ” ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು.

ಅಂತರ್ಜಾಲದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿನ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ವಿಶ್ವವಿದ್ಯಾಲಯದ ಉಪಕುಲಪತಿಗೆ ಕೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ತಿಳಿಸಿದ್ದಾರೆ.

ಇನ್ನು ಯಾದವ್‌ ಅವರ ಈ ಹೇಳಿಕೆಗಳು ವಿವಾದಕ್ಕೆ ತಿರುಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಅವರು, ನಾನು ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸಲೆಂದು ಹೇಳಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)