ಕೈ-ಕಮಲ ರಣತಂತ್ರ ಚುರುಕು

ಲಖನೌ: ಲೋಕಸಭಾ ಚುನಾವಣೆಗೆ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದನ್ನು ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಇತರ ಪಕ್ಷಗಳು ರಣತಂತ್ರವನ್ನು ಚುರುಕುಗೊಳಿಸಿವೆ. ಉತ್ತರಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಯೋಜನೆ ಸಿದ್ಧಪಡಿಸಿದೆ.

ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆ: ‘ಜಾತ್ಯತೀತ ಸಿದ್ಧಾಂತ ಒಪ್ಪಿ ನಮ್ಮೊಂದಿಗೆ ಮೈತ್ರಿಗೆ ಬರುವ ಪಕ್ಷಗಳಿಗೆ ಸ್ವಾಗತವಿದೆ. ಬಿಜೆಪಿ ಸೋಲಿಸುವುದು ನಮ್ಮ ಗುರಿ. ಉತ್ತರಪ್ರದೇಶದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ’ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಎಸ್​ಪಿ-ಬಿಎಸ್​ಪಿ ಮೈತ್ರಿಯಿಂದ ಕಾಂಗ್ರೆಸ್ ಹೊರ ದೂಡಲ್ಪಟ್ಟಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮೊಂದಿಗೆ ನಡೆಯಲು ಕೆಲವರಿಗೆ ಇಷ್ಟವಿಲ್ಲ ಎಂದಾಗ ಏನೂ ಮಾಡಲಾಗದು. ಮಹಾಮೈತ್ರಿಕೂಟದ ಭಾಗವಾಗಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಸಿದ್ಧವಿದೆ. ಮೈತ್ರಿಗೆ ಮುಂದಾಗಿದ್ದರೆ ಕೇವಲ 25 ಸೀಟು ಸಿಗುತ್ತಿತ್ತು . ಆದರೆ ಸ್ವತಂತ್ರ ಸ್ಪರ್ಧೆಯಿಂದ ಎಲ್ಲ 80 ಸೀಟುಗಳಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಖುಷಿಯಾಗಿದ್ದಾರೆ’ ಎಂದು ಆಜಾದ್ ಹೇಳಿದ್ದಾರೆ.

ರಾಹುಲ್ ಭರ್ಜರಿ ಪ್ರಚಾರ: ಉತ್ತರ ಪ್ರದೇಶವನ್ನು 13 ವಲಯಗಳಾಗಿ ವಿಂಗಡಿಸಿ, ಎಲ್ಲ 13 ಕಡೆ ಬೃಹತ್ ರ‍್ಯಾಲಿ ನಡೆಸಿ ಸಾರ್ವಜನಿಕ ಭಾಷಣ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ಧತೆ ನಡೆಸಿದ್ದಾರೆ. ಪ್ರತಿ ವಲಯದಲ್ಲಿ 6 ಲೋಕಸಭಾ ಕ್ಷೇತ್ರ ಇರಲಿವೆ. ಫೆಬ್ರವರಿಯಲ್ಲಿ ರಾಹುಲ್ ಪ್ರಚಾರ ರ‍್ಯಾಲಿ ಆರಂಭಿಸಲಿದ್ದಾರೆ. ಮೊದಲ ಹಂತದಲ್ಲಿ ಪಶ್ಚಿಮ ಉತ್ತರಪ್ರದೇಶದ ಹಾಪುರ್, ಮೊರಾದಾಬಾದ್, ಸಹರಣಾಪುರದಲ್ಲಿ ರಾಹುಲ್ ರ‍್ಯಾಲಿ ನಡೆಯಲಿದೆ.

ಸುಷ್ಮಾ ಕ್ಷೇತ್ರದಿಂದ ಶಿವರಾಜ್ ಕಣಕ್ಕೆ

ಅನಾರೋಗ್ಯ ಕಾರಣದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅವರು ಪ್ರತಿನಿಧಿಸುವ ಮಧ್ಯಪ್ರದೇಶದ ವಿಧಿಶಾ ಕ್ಷೇತ್ರದಿಂದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ರನ್ನು ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತಿಸಿದ್ದಾರೆ ಎನ್ನಲಾಗಿದೆ. ಭೋಪಾಲದಲ್ಲಿಯೂ ಹೊಸ ಅಭ್ಯರ್ಥಿಗಾಗಿ ಶೋಧ ನಡೆದಿದೆ. ಹಾಲಿ ಶಾಸಕರನ್ನು ಲೋಕಸಭೆ ಕಣಕ್ಕೆ ಇಳಿಸದಿರಲು ಬಿಜೆಪಿ ಚಿಂತಿಸುತ್ತಿದೆ. ಮಧ್ಯಪ್ರದೇಶದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್​ಪಿ ಬೆಂಬಲ ನೀಡಿದೆ. ಆದರೆ ಭವಿಷ್ಯದಲ್ಲಿ ರಾಜಕೀಯ ಮೇಲಾಟಗಳಿಂದಾಗಿ ಕಮಲನಾಥ್ ಸರ್ಕಾರ ಪತನವಾಗುವ ಪರಿಸ್ಥಿತಿ ಎದುರಾದರೆ ಶಾಸಕರ ಸಂಖ್ಯಾಬಲ ಬೇಕಾಗುತ್ತದೆ ಎಂಬುದು ಬಿಜೆಪಿ ನಾಯಕರ ಯೋಜನೆಯಾಗಿದೆ.

ಒಂಟಿಯಾಗಿ ಮೋದಿ ಮಣಿಸುವುದು ಕಷ್ಟ

ಕಾಂಗ್ರೆಸ್ ಏಕಾಂಗಿಯಾಗಿ ನರೇಂದ್ರ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಆಗುವುದಿಲ್ಲ. ಆದರೆ ಮೋದಿ ಸರ್ಕಾರದ ವಿರುದ್ಧ ಅಭಿಯಾನಕ್ಕೆ ಕಾಂಗ್ರೆಸ್ ಪ್ರಮುಖ ಧ್ವನಿಯಾಗಬಹುದು ಎಂದು ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಕುರಿತು ಕೈ ಪಾಳಯದಲ್ಲಿರುವ ಭಯವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆ ‘ಕುರುಕ್ಷೇತ್ರ’ ಇದ್ದಂತೆ. ದೇಶದ ರಕ್ಷಣೆಗಾಗಿ ಕೋಮುಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಅವರನ್ನು ಎದುರಿಸಬಲ್ಲ ಬಲಿಷ್ಠ ನಾಯಕರಾಗಿ ರಾಹುಲ್ ಗಾಂಧಿ ಹೊರಹೊಮ್ಮಿದ್ದಾರೆ ಎಂದು ಆಂಟನಿ ಹೇಳಿದರು.

Leave a Reply

Your email address will not be published. Required fields are marked *