ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಸಜ್ಜು, ನಟ ಉಪೇಂದ್ರ ಸ್ಪರ್ಧೆ ಚಿಂತನೆ

ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಗೆ ಈ ಬಾರಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ನಮ್ಮ ಗುರುತು ಆಟೋ ಎಂದು ಉತ್ತಮ ಪ್ರಜಾಕೀಯ ಪಕ್ಷ ಮುಖ್ಯಸ್ಥ ಉಪೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನಾಗಿ ಕೆಲಸ ಮಾಡಿದವರಿಗೆ ನಮ್ಮ ಪಕ್ಷದಲ್ಲಿ ಮಾರ್ಕ್ ಇರುತ್ತದೆ. ಈ ಮಾರ್ಕ್ಸ್ ಆಧಾರದ ಮೇಲೆ ಅವರು ಮುಂದೆ ಮತ್ತೆ ಎಲೆಕ್ಷನ್‌ಗೆ ನಿಲ್ಲುತ್ತಾರೆ. ಅಭ್ಯರ್ಥಿಗಳು ಮೊದಲು ಯಾವ ರೀತಿ ನಾವು ಜನರ ಜತೆ ಇದ್ದು ಕೆಲಸ ಮಾಡುತ್ತೇವೆ ಎನ್ನುವುದನ್ನು ಮೊದಲು ಹೇಳಬೇಕು. ನಮ್ಮ ಅಭ್ಯರ್ಥಿಗಳು ಯಾವುದೇ ಪ್ರಚಾರ ಮಾಡುವುದು ಬೇಕಿಲ್ಲ ಎಂದು ಹೇಳಿದರು.

ಒಂದು ಬದಲಾವಣೆ ತರೋಣ, ನಿಮಗೋಸ್ಕರ ನೀವು ವೋಟ್ ಹಾಕಿ. ನಾನೂ ಎಲೆಕ್ಷನ್‌ಗೆ ಸ್ಪರ್ಧಿಸುವ ಚಿಂತನೆ ನಡೆಯುತ್ತಿದೆ. ಜನರ ಮುಂದೆ ಇಟ್ಟೇ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಇನ್ನೊಂದು ಹದಿನೈದು ದಿನ ತಡೆದರೆ ಎಲ್ಲವನ್ನು ಹೇಳುತ್ತೇನೆ. ಪ್ರಜೆಗಳಿಗೆ ಏನು ಬೇಕೋ ಅದೇ ನಮ್ಮ ಪ್ರಣಾಳಿಕೆ. ನಾವು ಪ್ರಣಾಳಿಕೆ – 2ನ್ನು ಕೊಡುತ್ತಿದ್ದೇವೆ. ಜನರ ಹತ್ತಿರ ಹೋಗಿ ಏನು ಸಮಸ್ಯೆ , ಏನು ಪರಿಹಾರ ಮಾಡಬೇಕು ಎಂದು ಜನರ ಬಳಿ ಕೇಳಿಕೊಂಡು ಕೆಲಸ ಮಾಡುವುದೇ ನಮ್ಮ ಪ್ರಣಾಳಿಕೆ ಎಂದರು.

ಸೆಲೆಕ್ಷನ್, ಎಲೆಕ್ಷನ್, ಕಲೆಕ್ಷನ್, ರಿಜೆಕ್ಷನ್, ಪ್ರಮೋಷನ್ ಈ ಐದು ತತ್ವಗಳ ಮೇಲೆ ನಮ್ಮ ಪ್ರಣಾಳಿಕೆ ಇದೆ. ನಾವು ವಿಧಾನಸಭೆ ಚುನಾವಣೆಯಲ್ಲೂ ನಮ್ಮ ಪಕ್ಷಕ್ಕೆ ಮೆಜಾರಿಟಿ ಸಿಗುವವರೆಗೂ ನಾವು ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸರ್ಕಾರದ ಮೇಲೆ ಜನರ ಪರವಾಗಿ ಒತ್ತಡ ಹಾಕುತ್ತೇವೆ. ಬದಲಾವಣೆ ಜನರಿಗೆ ಬೇಕಾಗಿದೆ. ನಾವು ನಾಯಕರನ್ನು ಆಯ್ಕೆ ಮಾಡುತ್ತಿದ್ದೇವೆ. ಜನರಿಗೆ ಅವರ ಸಮಸ್ಯೆ ಏನು ಎಂದು ಅವರಿಗಷ್ಟೇ ಗೊತ್ತು. ಅವರಲ್ಲೇ ಪರಿಹಾರವೂ ಇದೆ. ಅದಕ್ಕೆ ನಮ್ಮ ಪಕ್ಷ ಆಡಳಿತ ವರ್ಗ ಹಾಗೂ ಜನರ ನಡುವೆ ಸಂಪರ್ಕದ ಸೇತುವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಪ್ರಕಾಶ್‌ ರಾಜ್‌ ಪಕ್ಷಕ್ಕೆ ಬಂದರೆ ಸ್ವಾಗತ

ಪ್ರಕಾಶ್ ರಾಜ್ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಅವರನ್ನು ಮೊದಲು ಜನರ ಮುಂದೆ ಇಡುತ್ತೇವೆ. ಪ್ರಕಾಶ್ ರಾಜ್ ಜನರಿಗಾಗಿ ಏನ್ ಮಾಡುತ್ತೇವೆ ಎನ್ನುವುದನ್ನು ತೆಗೆದುಕೊಂಡು ಬಂದರೆ ಖಂಡಿತ ಸ್ವಾಗತವಿದೆ. ನಿಮಗೆ ನೀವೇ ವೋಟು ಹಾಕಿಕೊಂಡು ನೀವೆ ಗೆಲ್ಲಿ. ಈ ಕೆಲಸ ಆಗಿದೆ. ಈ ರೀತಿಯ ಕೆಲಸ ನಡೆಯುತ್ತಿದೆ ಎನ್ನುವ ರಿಪೋರ್ಟ್ ಕಾರ್ಡ್ ಹಿಡಿದು ಬರುವಂತಾಗಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸ್ಟಾರ್‌ಗಳು. ಬೇರೆ ಸ್ಟಾರ್‌ಗಳನ್ನು ನೋಡಿ ವೋಟ್ ಹಾಕಬೇಡಿ ಎಂದು ಮನವಿ ಮಾಡಿದರು.

ದೇವರಿಗೆ ಪ್ರಶಸ್ತಿಗಳ ಹಂಗಿಲ್ಲ

ಸಿದ್ಧಗಂಗಾ ಶ್ರೀಗಳು ಭಾರತ ರತ್ನಕ್ಕಿಂತಲೂ ಮೇಲೆ ಇದ್ದಾರೆ. ಶ್ರೀಗಳನ್ನು ದೇವರು ಅಂತ ಕರೀತೀವಿ. ಮನುಷ್ಯರಿಗೆ ಮಾತ್ರ ಪ್ರಶಸ್ತಿಗಳ ಹಂಗು ಇರುತ್ತದೆ. ದೇವರಿಗೆ ಪ್ರಶಸ್ತಿಗಳ ಹಂಗಿಲ್ಲ. ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂದು ನಾಡಿನ‌ ಜನರ ಬೇಡಿಕೆ ಇದೆ ಎಂದರು.