ಜಾತಿ, ಹಣ ಹೊರತುಪಡಿಸಿ ಚುನಾವಣೆ ನಡೆಯಲಿ

ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ , ನಟ ಉಪೇಂದ್ರ ಅಭಿಮತ

ವಿಜಯವಾಣಿ ಸುದ್ದಿಜಾಲ ಮೈಸೂರು
ವ್ಯಾಪಾರೀಕರಣದ ರಾಜಕಾರಣ ಕೊನೆಗಾಣಿಸಿ, ಜನಪರವಾಗಿ ಸೇವೆ ಮಾಡುವ ವೃತ್ತಿಪರ ರಾಜಕೀಯ ಜಾರಿ ಮಾಡುವುದು ಉತ್ತಮ ಪ್ರಜಾಕೀಯ ಪಕ್ಷದ ಉದ್ದೇಶವಾಗಿದೆ ಎಂದು ಪಕ್ಷದ ಮುಖ್ಯಸ್ಥ ಹಾಗೂ ನಟ ಉಪೇಂದ್ರ ಹೇಳಿದರು.
ಈಗಿನ ರಾಜಕಾರಣ ಬಿಜಿನೆಸ್ ಆಗಿದೆ. ಹಣ ಹಾಕಿ, ಹಣ ತೆಗೆಯುವುದಾಗಿದೆ. ಇದು ತೊಲಗಬೇಕು. ಬದಲಿಗೆ ಸ್ವಂತ ಹಣವನ್ನು ತಂದು ಸಮಾಜ ಸೇವೆ ಮಾಡುವ ಶಿಸ್ತುಬದ್ಧ ರಾಜಕೀಯ ವೃತ್ತಿಯನ್ನು ಕಟ್ಟಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿ, ಹಣ ಈಗಿನ ರಾಜಕೀಯ ಮತ್ತು ಚುನಾವಣೆಯ ಪ್ರಮುಖ ಅಸ್ತ್ರಗಳು. ಇದನ್ನು ಹೊರತುಪಡಿಸಿದ ವಿಚಾರಗಳ ಮೇಲೆ ಚುನಾವಣೆ ನಡೆಯಬೇಕು. ಭವಿಷ್ಯದಲ್ಲಿ ವಿಷಯಾಧಾರಿತ ರಾಜಕಾರಣಕ್ಕೆ ಬೆಲೆ ಬರಲಿದೆ. ಅದಕ್ಕಾಗಿ ಕೊನೆವರೆಗೂ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ. ಹಣ, ದೊಡ್ಡಮಟ್ಟ ಸಮಾವೇಶ, ರ‌್ಯಾಲಿ ಮಾಡದೆ ಮತದಾರರನ್ನು ತಲುಪಲು ಸಾಧ್ಯವಿಲ್ಲ ಎಂಬ ಭಾವನೆ ಇದೆ. ಉತ್ತಮ ವಿಷಯಗಳನ್ನು ಇಟ್ಟುಕೊಂಡು ಜನರನ್ನು ತಲುಪಬಹುದು. ಅದಕ್ಕಾಗಿ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಸ್ಟಾರ್‌ಗಳು ಸಿನಿಮಾದಲ್ಲಿ ಮಾತ್ರ. ನಮಗೆ ಜನರೇ ಸ್ಟಾರ್‌ಗಳು. ನಮ್ಮ ಪಕ್ಷದ ಪರವಾಗಿ ಯಾವುದೇ ಸ್ಟಾರ್‌ಗಳು ಪ್ರಚಾರ ನಡೆಸುವುದಿಲ್ಲ ಎಂದರು.

ಜಾತಿಗಳು ಉಳಿದಿರುವುದು ರಾಜಕೀಯ ಪಕ್ಷಗಳಿಂದ. ಆದ್ದರಿಂದ ಈ ಕ್ಷೇತ್ರದಲ್ಲಿ ಬದಲಾವಣೆ ತರಬೇಕು. ಇದಕ್ಕಾಗಿ ಪಾಸಿಟಿವ್ ಥಿಂಕಿಂಗ್ ಇಟ್ಟುಕೊಂಡು ನಮ್ಮ ಪಕ್ಷವನ್ನು ನಡೆಸಿಕೊಂಡು ಹೊರಟಿದ್ದೇವೆ. ನಮ್ಮ ಪಕ್ಷಕ್ಕೆ ಯಾವುದೇ ಪ್ರಣಾಳಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮತಪ್ರಚಾರ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ವಿ.ಆಶಾರಾಣಿ ಪರವಾಗಿ ನಟ ಉಪೇಂದ್ರ ನಗರದಲ್ಲಿ ಬಿರುಸಿನ ಪ್ರಚಾರ ಮಾಡಿ ಮತಯಾಚಿಸಿದರು. ದೇವರಾಜ ಮಾರುಕಟ್ಟೆಯಲ್ಲಿನ ಬೀದಿ ಬದಿ ವ್ಯಾಪಾರಿಗಳ ಬಳಿ ತೆರಳಿ ಕರಪತ್ರ ನೀಡುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಸುಳ್ಳು ಭರವಸೆ ನೀಡುತ್ತಾರೆ. ಗೆದ್ದ ನಂತರ ನಿಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ನಮ್ಮ ಪಕ್ಷದ ಪರಿಕಲ್ಪನೆಯೇ ಬೇರೆ. ಒಮ್ಮೆ ಅಧಿಕಾರ ಕೊಟ್ಟು ನೋಡಿ ಬದಲಾವಣೆ ಮಾಡಿ ತೋರಿಸುತ್ತೇವೆ ಎಂದರು. ಈ ವೇಳೆ, ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಯುವಕರು ಮುಗಿಬಿದ್ದರು.

ಯದುವೀರ ಭೇಟಿ

ಇದಕ್ಕೂ ಮುನ್ನ ಉಪೇಂದ್ರ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ಉಪೇಂದ್ರ, ಯದುವೀರ್ ನನಗೆ ಆತ್ಮೀಯರು. ಹೀಗಾಗಿ, ಇದೊಂದು ಸೌಹಾರ್ದಯುತ ಭೇಟಿಯಷ್ಟೇ. ಈ ಮೊದಲು ಪ್ರಜಾಕೀಯ ಪಕ್ಷ ಕಟ್ಟಿದ್ದಾಗಲೂ ಸಹ ಬಹಳ ಪ್ರಶಂಸೆ ಮಾಡಿದ್ದರು. ಅಮೆರಿಕಾದಲ್ಲಿ ಕೆಲ ಸಲ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್, ಚರ್ಚೆ ಮಾಡುತ್ತಿರುತ್ತೇವೆ ಎಂದರು.