ಹೊರಟಿತು ಉತ್ಕೃಷ್ಟ ರೈಲು

ಮಂಗಳೂರು: ಮದುಮಗಳಂತೆ ಸಿಂಗಾರಗೊಂಡಿದ್ದ ಮಂಗಳೂರು ಸೆಂಟ್ರಲ್-ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಮಂಗಳವಾರ ಎಂದಿನಂತೆ ಇರಲಿಲ್ಲ!
ಎಕ್ಸ್‌ಪ್ರೆಸ್ ರೈಲುಗಳನ್ನು ಮೇಲ್ದರ್ಜೆಗೆ ಏರಿಸುವ ಕೇಂದ್ರ ಸರ್ಕಾರದ ಉತ್ಕೃಷ್ಟ ರೈಲು ಯೋಜನೆಯಡಿ ನವೀಕೃತ ರೈಲುಬೋಗಿಗಳನ್ನು ಅಳವಡಿಸಿದ ಮಾವೇಲಿ ಎಕ್ಸ್‌ಪ್ರೆಸ್ ಮಂಗಳವಾರ ಸಾಯಂಕಾಲ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಶುಭಾರಂಭಗೊಂಡಿತು.

ರೈಲು ನಿಲ್ದಾಣದ ನಿರ್ವಹಣಾ ವಿಭಾಗದಲ್ಲಿ ಧಾರ್ಮಿಕ ವಿಧಿವಿಧಾನಗಳು ಪೂರೈಸಿದ ಬಳಿಕ ಪ್ರಥಮ ಫ್ಲಾಟ್‌ಫಾರ್ಮ್‌ಗೆ ಆಗಮಿಸಿದ ರೈಲು ಚಾಲನೆ ಪಡೆಯುವ ಸಂದರ್ಭ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಪ್ರಯಾಣಿಕರಿಗೆ ಶುಭಕೋರಿದರು. ಇದು ಪಾಲಕ್ಕಾಡ್ ವಿಭಾಗದಲ್ಲಿ ಪರಿಚಯಿಸಲಾದ ಪ್ರಥಮ ಉತ್ಕೃಷ್ಟ ರೈಲು.

ಏನು ವಿಶೇಷ: ಕ್ರೀಮ್ ಹಾಗೂ ಮೆರೂನ್ ಬಣ್ಣದಲ್ಲಿರುವ ರೈಲು ಬೋಗಿಗಳು ಪ್ರಥಮ ನೋಟದಲ್ಲೇ ವಿಶಿಷ್ಟವಾಗಿ ಕಾಣುತ್ತಿದೆ. ನೆಲಕ್ಕೆ ಬಣ್ಣದ ರೀತಿಯಲ್ಲೇ ಹೊಂದಿಕೊಂಡಿರುವ ಕಾರ್ಪೆಟ್, ಐಷಾರಾಮಿ ಕರ್ಟನ್, ಆಸನ, ಶೌಚಗೃಹಗಳು ರೈಲಿನ ಮುಖ್ಯ ಆಕರ್ಷಣೆ. ಇಲ್ಲಿನ ಇಂಟೀರಿಯರ್ ಆಕರ್ಷಣೆಗೆ ಆದ್ಯತೆ ನೀಡಲಾಗಿದೆ. ಕಣ್ಣಿಗೆ ಅಹ್ಲಾದ ಎನಿಸುವ ಎಲ್‌ಇಡಿ ಬಲ್ಬ್‌ಗಳು ರೈಲು ಒಳಗಿನ ವಾತಾವರಣವನ್ನು ಹಿತವಾಗಿರಿಸಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಶೌಚಗೃಹಗಳು ಸದಾ ಸ್ವಚ್ಛವಾಗಿಟ್ಟುಕೊಳ್ಳಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ರೈಲ್ವೆ ಸಚಿವಾಲಯ ಪ್ರಥಮ ಹಂತದಲ್ಲಿ ಒಟ್ಟು 400 ಕೋಟಿ ರೂ.ವೆಚ್ಚದಲ್ಲಿ 640 ರೈಲುಗಳಲ್ಲಿ ಉತ್ಕೃಷ್ಟ ಬೋಗಿಗಳನ್ನು ಅಳಡಿಸಲು ಉದ್ದೇಶಿಸಿದೆ. ನಿಗದಿತ ಅವಧಿಯೊಳಗೆ ಯೋಜನೆ ಜಾರಿಗೊಳಿಸುವ ಆತುರದಲ್ಲಿ ರೈಲ್ವೆ ಇಲಾಖೆ ಹಳೇ ಬೋಗಿಗಳಿಗೆ ಹೊಸ ಬಣ್ಣ ಬಳಿದಿದೆ. ಹಳೇ ಬೋಗಿಗಳನ್ನು ನವೀಕರಿಸಿದೆ. ಹೊಸ ಯೋಜನೆಗಾಗಿಯೇ ಸಿದ್ಧಪಡಿಸಲಾದ ಬೋಗಿಗಳು ಬರುವ ತನಕ ಈ ಬೋಗಿಗಳು ಮುಂದುವರಿಯಲಿದೆ ಎಂದು ಇಲಾಖೆ ಮೂಲ ತಿಳಿಸಿದೆ.

ಉತ್ಕೃಷ್ಟ ಪ್ರಯಾಣ ಹೀಗಿದೆ: ಮಾವೇಲಿ ಎಕ್ಸ್‌ಪ್ರೆಸ್ ಆಗಿ ಮಂಗಳವಾರ ಸಾಯಂಕಾಲ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟಿರುವ ಉತ್ಕೃಷ್ಟ ರೈಲು ಬುಧವಾರ ಬೆಳಗ್ಗೆ ತಿರುವನಂತಪುರ ತಲುಪಲಿದೆ. ಬುಧವಾರ ಸಾಯಂಕಾಲ ತಿರುವನಂತಪುರದಿಂದ ಹೊರಟು ಗುರುವಾರ ಬೆಳಗ್ಗೆ ಮಂಗಳೂರು ತಲುಪಲಿದೆ. ಅದೇ ಉತ್ಕೃಷ್ಟ ಬೋಗಿಗಳು ಗುರುವಾರ ಮಧ್ಯಾಹ್ನ 12.25 ಕ್ಕೆ ಚೆನ್ನೈ ಮೇಲ್ ಹೆಸರಿನಲ್ಲಿ ಮಂಗಳೂರಿನಿಂದ ಹೊರಟು ಶುಕ್ರವಾರ ಬೆಳಗ್ಗೆ ಚೆನ್ನೈ ತಲುಪುವುದು. ಚೆನ್ನೈಯಿಂದ ಅಂದು ರಾತ್ರಿ ವೆಸ್ಟ್‌ಕೋಸ್ಟ್ ಹೆಸರಿನಲ್ಲಿ ಪ್ರಯಾಣ ಆರಂಭಿಸಿ ಮರುದಿನ ಮಂಗಳೂರು ತಲುಪಲಿದೆ. ಮತ್ತೆ ವಾಪಾಸ್ ಮಾವೇಲಿ ಎಕ್ಸ್‌ಪ್ರೆಸ್ ಆಗಿ ಮಂಗಳೂರಿನಿಂದ ಮರು ಪ್ರಯಾಣ.