ಭಸ್ತ್ರಿಕಾ ಉಸಿರಾಟ ಮತ್ತು ನಡಿಗೆ

ಯೋಗನಡಿಗೆ ಮುನ್ನ ಕೆಲವು ಪ್ರಾಣಾಯಾಮ ಮತ್ತು ಆಸನಗಳನ್ನು ಮಾಡುವುದು ಸೂಕ್ತ. ಇವು ನಿತ್ಯದ ಅಭ್ಯಾಸವಾದಲ್ಲಿ ಯಾವುದೇ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ನಮ್ಮನ್ನು ಕಾಡುವುದಿಲ್ಲ.

ಭಸ್ತ್ರಿಕಾ ಅಭ್ಯಾಸ: ಭಸ್ತ್ರಿಕಾ ಎಂದರೆ ಕುಲುಮೆಯವನ ತಿದಿ ಇದ್ದ ಹಾಗೆ. ಜೋರಾಗಿ ಒಂದರ ನಂತರ ಮತ್ತೊಂದು ಉಸಿರನ್ನು ಹೊರಹಾಕುವುದು ಮತ್ತು ಒಳಗೆ ಎಳೆದುಕೊಳ್ಳುವುದು ಈ ಉಸಿರಾಟದ ವಿಶೇಷತೆ. ಕುಲುಮೆಯವನು ತನ್ನ ತಿದಿಯನ್ನು ಬಳಸಿ ಕುಲುಮೆಗೆ ಜೋರಾಗಿ ಗಾಳಿಯನ್ನು ಒಳಗೆ ಎಳೆಯುವಂತೆ – ಹೊರಗೆ ಹಾಕುವಂತೆ ಪೂರಕ, ರೇಚಕ ಮಾಡಬೇಕು. ಯೋಗನಡಿಗೆಯ ಸಮಸ್ಥಿತಿಯಲ್ಲಿ ನಿಲ್ಲಿ. ಎರಡೂ ಕೈಗಳನ್ನು ಭುಜದ ಸಮೀಪಕ್ಕೆ ತಂದು ಮೇಲ್ಮುಖವಾಗಿ ವೇಗವಾಗಿ ತೆಗೆದುಕೊಂಡು ಹೋಗಿ. ಆಗ ಶ್ವಾಸ ಪೂರಕ. ಅಷ್ಟೇ ಶೀಘ್ರವಾಗಿ ರೇಚಕ ಮಾಡುತ್ತಾ ಕೈಗಳನ್ನು ತೊಡೆಯ ಪಕ್ಕಕ್ಕೆ ತನ್ನಿ. ಕೈಗಳನ್ನು ಮೇಲೆತ್ತಿರುವಾಗ ಕೈಬೆರಗಳುಗಳನ್ನು ಸಾಧ್ಯವಾದಷ್ಟು ಅಗಲಿಸಿ. ಮುಖದಲ್ಲಿ ಪ್ರಸನ್ನತೆ, ಸಹಜತೆ ಇರಲಿ. ಪುಪ್ಪುಸಗಳು ಅಕುಂಚನ ಮತ್ತು ಪ್ರಸರಣಗೊಳ್ಳುವುದನ್ನು ಸೂಕ್ಷ್ಮವಾಗಿ ಗಮನಿಸಿ.

ಈ ಅಭ್ಯಾಸದ ಸಂದರ್ಭದಲ್ಲಿ ಗಂಟಲಿನಿಂದ ಗಾಳಿಯ ಸ್ಪರ್ಶದ ಧ್ವನಿಯು ಉತ್ಪತ್ತಿಯಾಗುತ್ತದೆ. ನಿರಂತರವಾಗಿ 21 ಬಾರಿ ಉಸಿರನ್ನು ವೇಗವಾಗಿ ಪೂರಕ, ರೇಚಕ ಮಾಡುತ್ತಿರಿ. ಕೊನೆಯ ಆವರ್ತನ ರೇಚಕದೊಂದಿಗೆ ಮುಗಿಸಿ ಕ್ರಿಯೆ ನಿಲ್ಲಿಸಿ. ಕೆಲವು ಕ್ಷಣ ಸಹಜ ಕುಂಭಕ (ಸಹಜ ಉಸಿರಾಟ ನಿಲುಗಡೆ)ದ ಅನುಭೂತಿ ಪಡೆಯಬಹುದು. ಅನಂತರ ಸ್ವಲ್ಪ ಹೊತ್ತು ನಿಂತಲ್ಲೇ ವಿಶ್ರಾಂತಿ ಪಡೆಯಿರಿ.

ಲಾಭಗಳು: ಭಸ್ತ್ರಿಕಾ ಉಸಿರಾಟ ಕ್ರಿಯೆಯು ಬಹು ಪ್ರಬಲವಾದ ದೈಹಿಕ ಕ್ರಿಯೆ. ಈ ಅಭ್ಯಾಸದಿಂದ ನಮ್ಮ ಶ್ವಾಸಕೋಶಕ್ಕೆ ಅಧಿಕ ಆಮ್ಲಜನಕ ಲಭಿಸುತ್ತದೆ. ಇದರ ಅಭ್ಯಾಸದಿಂದ ಕುತ್ತಿಗೆಯಲ್ಲಿನ ಉರಿ ಹಾಗೂ ಬಿಗುವು ನಿವಾರಣೆಯಾಗುತ್ತದೆ. ಜಠರಾಗ್ನಿಯನ್ನು ಹೆಚ್ಚಿಸಿ, ಕಫವನ್ನು ನಿಯಂತ್ರಿಸಿ, ಮೂಗಿನ ಮತ್ತು ಎದೆಯ ಭಾಗದ ರೋಗಗಳನ್ನು ನಿವಾರಿಸಿ, ತ್ರಿದೋಷದಿಂದಾಗಿ ಬರುವ ಸಮಸ್ಯೆ ಓಡಿಸಿ ದೇಹವನ್ನು ಬೆಚ್ಚಗೆ ಇಡುತ್ತದೆ.

ಕಟಿ ವಿನಯ ಚಾಲನಾ ವ್ಯಾಯಾಮ: ಯೋಗನಡಿಗೆ ಮುನ್ನ ಇದು ಉತ್ತಮ ಅಭ್ಯಾಸ. ಸಮಸ್ಥಿತಿಯಲ್ಲಿ ನಿಲ್ಲಿ. ಕೈಗಳೆರಡು ತೊಡೆಗಳ ಪಕ್ಕದಲ್ಲಿ ನೇರವಾಗಿರಲಿ. ಬಿಗಿತ, ಸೆಳೆತಗಳು ಬೇಡ. ಮುಖ ಪ್ರಸನ್ನವಾಗಲಿ. ಉಸಿರನ್ನು ದೀರ್ಘವಾಗಿ ಒಳಗೆ ಎಳೆದುಕೊಳ್ಳುತ್ತಾ ಕೈಗಳೆರಡನ್ನೂ ದೇಹದ ಎದುರಿನಿಂದ ತಲೆಯ ಮೇಲೆ ವೇಗವಾಗಿ ತನ್ನಿ. ಸಾಧ್ಯವಾದಷ್ಟು ಹಿಂಬಾಗಿರಿ. ಉಸಿರನ್ನು ವೇಗವಾಗಿ ಹಾಗೂ ದೀರ್ಘವಾಗಿ ಹೊರಬಿಡುತ್ತಾ ಮುಂದೆ ಬಾಗುತ್ತಾ ಕೈಗಳೆರಡನ್ನು ನಿರಾಯಾಸವಾಗಿ ಕೆಳಗೆ (ತೊಡೆಯ ಪಕ್ಕದಿಂದ ಹಿಂಬದಿಗೆ) ತೆಗೆದುಕೊಂಡು ಹೋಗಿ. ಈ ಅಭ್ಯಾಸ ಶ್ವಾಸಕೋಶದ ವಿಭಾಗಗಳನ್ನು ಪ್ರಚೋದಿಸಿ, ಉಸಿರಾಟದ ಕಾರ್ಯಕ್ಷಮತೆ ಹೆಚ್ಚು ಮಾಡುತ್ತದೆ. ಉಸಿರು ಮತ್ತು ಚಲನೆಯ ಹೊಂದಾಣಿಕೆಯಿಂದ ಶ್ವಾಸದಲ್ಲಿ ಸಮತೋಲನ ಪ್ರಾಪ್ತಿಯಾಗಿ, ಮನಸ್ಸು ಶಾಂತವಾಗುವ ಅನುಭವ ಉಂಟಾಗುತ್ತದೆ. ಸೊಂಟದ ನಮನೀಯತೆ ದೊರಕುತ್ತದೆ.